ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BJP MLA DN Jeevaraj: ಅಂಚೆ ಮತ ತಿರುಚಿದ ಆರೋಪ; ಶೃಂಗೇರಿ ಬಿಜೆಪಿ ಶಾಸಕ ಡಿ.ಎನ್‌. ಜೀವರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

2023ರಲ್ಲಿ ಮತ ತಿರುಚಿರುವುದು ನಡೆದಿದೆ ಎನ್ನುವುದಾದರೆ ಆ ವಿಚಾರವನ್ನು ಮರು ಎಣಿಕೆಗೆ ಆದೇಶಿಸಿದ ನ್ಯಾಯಾಲಯದ ಗಮನಕ್ಕೆ ತಂದು, ನಿರ್ದೇಶನ ಪಡೆದು ಮುಂದುವರಿಯಬೇಕಿತ್ತು. ದೂರಿನಲ್ಲಿ ಹಾಲಿ ಚುನಾವಣಾಧಿಕಾರಿ ಗೌರವ್‌ ಶೆಟ್ಟಿಯನ್ನು ಏಕೆ ಆರೋಪಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿರುವ ಕೋರ್ಟ್‌, ಶಾಸಕ ಜೀವರಾಜ್‌ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದೆ.

ಶೃಂಗೇರಿ ಶಾಸಕ ಡಿ.ಎನ್‌. ಜೀವರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

-

Prabhakara R
Prabhakara R May 5, 2026 4:12 PM

ಬೆಂಗಳೂರು: ಅಂಚೆ ಮತ ತಿರುಚಿದ ಆರೋಪದಲ್ಲಿ ಶೃಂಗೇರಿ ಬಿಜೆಪಿ ಶಾಸಕ ಡಿ.ಎನ್‌. ಜೀವರಾಜ್ ಮೇಲೆ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಡಿ.ಎನ್‌. ಜೀವರಾಜ್‌ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮೌಖಿಕವಾಗಿ ಹೇಳಿರುವ ಹೈಕೋರ್ಟ್‌, ಪ್ರಕರಣಕ್ಕೆ ತಡೆ ನೀಡಿದೆ.

ಮತ ತಿರುಚಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಏಜೆಂಟ್‌ ಸುಧೀರ್‌ ಕುಮಾರ್‌ ಮುರೊಳ್ಳಿ ಅವರು ನೀಡಿದ ದೂರಿನ ಆಧಾರದಲ್ಲಿ ಶಾಸಕ ಜೀವರಾಜ್‌ ವಿರುದ್ಧ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಎಫ್‌ಐಆರ್‌ ರದ್ದತಿ ಕೋರಿ ಜೀವರಾಜ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠ ನಡೆಸಿದೆ.

ಜೀವರಾಜ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು, 13.5.2023ರಲ್ಲಿ ನಡೆದಿದೆ ಎನ್ನಲಾದ ಆರೋಪ ಆಧರಿಸಿ ಈಗ ಪ್ರಕರಣ ದಾಖಲಿಸಲಾಗಿದೆ. ಸೋತ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದ್ದು, ಇಲ್ಲಿ ರಾಜಕೀಯ ದುರುದ್ದೇಶವಿದೆ ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ಅವರು ಮತಗಳ ಮೇಲೆ ಡಬಲ್‌ ಟಿಕ್‌ ಇದೆ. ಈ ವಿಚಾರವನ್ನು ಸುಧೀರ್‌ ಅವರು ಚುನಾವಣಾಧಿಕಾರಿ ಗೌರವ್‌ ಶೆಟ್ಟಿ ಅವರ ಗಮನಕ್ಕೆ ಮರು ಎಣಿಕೆ ನಡೆಯುವುದಕ್ಕೆ ಮುನ್ನವೇ ತಂದಿದ್ದಾರೆ. ಇಲ್ಲಿ ಮತ ತಿರುಚುವ ಕೃತ್ಯ ನಡೆದಿದೆ ಎಂದರು.

ಇದರಿಂದ ಕೆರಳಿದ ಪೀಠವು, 13.5.2023ರಲ್ಲಿ ಮತ ತಿರುಚಿರುವುದು ನಡೆದಿದೆ ಎನ್ನುವುದಾದರೆ ಆ ವಿಚಾರವನ್ನು ಮರು ಎಣಿಕೆಗೆ ಆದೇಶಿಸಿದ ನ್ಯಾಯಾಲಯದ ಗಮನಕ್ಕೆ ತಂದು, ನಿರ್ದೇಶನ ಪಡೆದು ಮುಂದುವರಿಯಬೇಕಿತ್ತು. ಹಾಲಿ ಚುನಾವಣಾಧಿಕಾರಿ ಗೌರವ್‌ ಶೆಟ್ಟಿ ಅದನ್ನು ಮಾಡಬೇಕಿತ್ತು. ದೂರಿನಲ್ಲಿ ಗೌರವ್‌ ಶೆಟ್ಟಿಯನ್ನು ಏಕೆ ಆರೋಪಿ ಮಾಡಲಾಗಿಲ್ಲ. ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಅಂದಿನ ಜಿಲ್ಲಾಧಿಕಾರಿಯನ್ನು ಏಕೆ ಆರೋಪಿಗಳನ್ನಾಗಿಸಲಾಗಿದೆ. ದೂರು ದಾಖಲಿಸುವುದಕ್ಕೂ ಮುನ್ನ ಅವರ ವಾದ ಆಲಿಸಬೇಕಿತ್ತಲ್ಲವೇ. ಇದು ಸಹಜ ನ್ಯಾಯತತ್ವವೇ ಎಂದು ಪೊಲೀಸರನ್ನು ಪ್ರಶ್ನಿಸಿತು.

ಮುಂದುವರಿದು, ತನಿಖಾಧಿಕಾರಿಗಳು ಯಾಕೆ ಚುನಾವಣಾಧಿಕಾರಿ ಗೌರವ್‌ ಶೆಟ್ಟಿಯನ್ನು ಆರೋಪಿ ಮಾಡಿಲ್ಲ. ಯಾರೋ ಎಸಗಿದ ಪ್ರಮಾದಕ್ಕೆ ಇನ್ಯಾರ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದೀರಿ? ನಿಮ್ಮನ್ನು ಅಮಾನತು ಮಾಡಲು ಆದೇಶ ಬರೆಯಲಾಗುವುದು” ಎಂದಿತು. ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸ ಮಾಡಬಾರದು. ಆದರೆ, ಈ ಪ್ರಕರಣದಲ್ಲಿ ಅದು ಕಾಣುತ್ತದೆ. ರಾಜಕೀಯ ಒತ್ತಡಕ್ಕೆ ಮಣಿದು ಎಫ್‌ಐಆರ್‌ ದಾಖಲಿಸಲಾಗಿದೆ. ಹಿಂದಿನ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯನ್ನು ಆರೋಪಿಗಳನ್ನಾಗಿಸುವುದು ಸರಿಯೇ? ನ್ಯಾಯ ಪೀಠ ಪ್ರಶ್ನಿಸಿದೆ.

ಶೃಂಗೇರಿ ಕ್ಷೇತ್ರದ ಮರುಎಣಿಕೆ: ಇಡೀ ದೇಶದಲ್ಲಿ ಇಂತಹ ಅಪರಾಧ ನಡೆದಿಲ್ಲ ಎಂದ ಡಿ.ಕೆ. ಶಿವಕುಮಾರ್

ಅಂತಿಮವಾಗಿ ಪೀಠವು ಬಿ.ಎ. ಬೆಳ್ಳಿಯಪ್ಪ ಅವರು ಮೇ 7ರಂದು ಅಗತ್ಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಅವರಿಗೆ ಅನುಮತಿಸಲಾಗಿದೆ. ಅಂತೆಯೇ ಜೀವರಾಜ್‌ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲಾಗಿದ್ದು, ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಆದೇಶಿಸಿತು.

ಅಲ್ಲದೇ, ತಮ್ಮ ವಿರುದ್ಧದ ಎಫ್‌ಐಆರ್‌ಗೆ ತಡೆ ಕೋರಿ ಅಂದಿನ ಜಿಲ್ಲಾಧಿಕಾರಿ ರಮೇಶ್‌ ಸಲ್ಲಿಸಿರುವ ಅರ್ಜಿಯಲ್ಲಿಯೂ ಇದೇ ಆದೇಶ ಮಾಡಲಾವುದು ಎಂದು ಪೀಠ ಮೌಖಿಕವಾಗಿ ಹೇಳಿ, ವಿಚಾರಣೆಯನ್ನು 7ಕ್ಕೆ ಮುಂದೂಡಿತು.