ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

D Sudhakar Death: ಆತ್ಮೀಯ ಸ್ನೇಹಿತನಿಗೆ ಕಣ್ಣೀರ ವಿದಾಯ; ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿಕೆಶಿ

D Sudhakar Death: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಹಿರಿಯೂರಿನಲ್ಲಿ ಸಚಿವ ಡಿ. ಸುಧಾಕರ್‌ ಅಂತಿಮ ದರ್ಶನ ಪಡೆದ ಡಿ.ಕೆ.ಶಿವಕುಮಾರ್‌.

ಚಿತ್ರದುರ್ಗ: ಅನಾರೋಗ್ಯದಿಂದ ನಿಧನರಾದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಡಿಸಿಎಂ ಡಿಕೆ ಶಿವಕುಮಾರ್ ಭಾನುವಾರ ಪಡೆದುಕೊಂಡರು. ಈ ವೇಳೆ ಆಪ್ತಮಿತ್ರನನ್ನು ನೆನೆದು ಡಿಸಿಎಂ ಭಾವುಕರಾಗಿದ್ದು, ಕಣ್ಣೀರಿಟ್ಟರು.

ಮಧ್ಯಾಹ್ನ ಹಿರಿಯೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್, ತಮ್ಮ ಆಪ್ತ ಗೆಳೆಯ ಸುಧಾಕರ್ ಅವರ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ಭಾವುಕರಾದರು. ಸಾರ್ವಜನಿಕ ಜೀವನದಲ್ಲಿ ಸದಾ ಗಟ್ಟಿ ವ್ಯಕ್ತಿತ್ವದ ನಾಯಕನಾಗಿ ಕಾಣಿಸಿಕೊಳ್ಳುವ ಡಿಕೆಶಿ, ಗೆಳೆಯನ ಮುಖ ನೋಡುತ್ತಲೇ ಕಣ್ಣೀರು ಹಾಕುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನೂ ಒದ್ದೆಯಾಗಿಸಿತು.

DK Shivakumar (1)

ತಂದೆಯನ್ನು ಕಳೆದುಕೊಂಡು ಶೋಕತಪ್ತರಾಗಿದ್ದ ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಅವರನ್ನು ಡಿ.ಕೆ. ಶಿವಕುಮಾರ್ ಅಪ್ಪಿಕೊಂಡು ಸಾಂತ್ವನ ಹೇಳಿದರು. ಡಿಕೆಶಿ ಅವರನ್ನು ಕಂಡ ತಕ್ಷಣ ಸುಹಾಸ್ ಕೂಡ ದುಃಖ ತಡೆದುಕೊಳ್ಳಲಾಗದೆ ಅವರ ಹೆಗಲ ಮೇಲೆ ತಲೆಯಿಟ್ಟು ಕಣ್ಣೀರು ಹಾಕಿದರು.

ಮೃತರ ಅಂತಿಮ ಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯೂರಿನಲ್ಲಿ ನೆರವೇರಲಿದ್ದು, ಸಾವಿರಾರು ಬೆಂಬಲಿಗರು ಮತ್ತು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಆತ್ಮೀಯ ಸ್ನೇಹಿತನಿಗೆ ಕಣ್ಣೀರ ವಿದಾಯ

ಡಿ. ಸುಧಾಕರ್‌ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನನ್ನ ಆಪ್ತಮಿತ್ರ ಹಾಗೂ ಸಂಪುಟ ಸಹೋದ್ಯೋಗಿ ಡಿ. ಸುಧಾಕರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ. ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳನ್ನು ಇಟ್ಟುಕೊಂಡು ಬದುಕಿದ್ದ ಡಿ. ಸುಧಾಕರ್ ಅವರ ಸರಳತೆ, ಸೌಜನ್ಯ ಮತ್ತು ಜನಪರ ಕಾಳಜಿ ಎಲ್ಲರಿಗೂ ಮಾದರಿ. ದೇವರು ಅಗಲಿದ ಸ್ನೇಹಿತನ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ.

ಹೃದಯ ಶ್ರೀಮಂತಿಕೆ ಇದ್ದಂತಹ ಮನುಷ್ಯ. ಇವರ ಸಾವಿನಿಂದ ನಮ್ಮ ಸರ್ಕಾರಕ್ಕೆ, ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ನನಗೆ ವೈಯಕ್ತಿಕವಾಗಿ ಬಹಳ ಆಘಾತ ಉಂಟಾಗಿದೆ. ಭಾರವಾದ ಹೃದಯದಿಂದ ಅಂತಿಮ ವಿದಾಯಗಳು ಎಂದು ತಿಳಿಸಿದ್ದಾರೆ.

ಡಿಸಿಎಂ ಡಿಕೆಶಿ ಸಂತಾಪ

ಸಚಿವ ಡಿ.ಸುಧಾಕರ್‌ ನಿಧನದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ.

ಸಚಿವ ಡಿ. ಸುಧಾಕರ್‌ ನಿಧನ; ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರಿಂದ ಸಂತಾಪ

ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು. ಬಡವರ ಬಂಧು ಎಂದೇ ಹೆಸರಾಗಿದ್ದ ಅವರು, ನನ್ನನ್ನು ಭೇಟಿ ಮಾಡಲು ಬಂದಾಗಲೆಲ್ಲ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಹಿಡಿದುಕೊಂಡೇ ಬರುತ್ತಿದ್ದರು. ಅವರ ಆ ಗುಣ, ಕ್ಷೇತ್ರದ ಜನರ ಮೇಲಿದ್ದ ಅವರ ಅಪಾರ ಪ್ರೀತಿಯನ್ನು ತೋರಿಸುತ್ತಿತ್ತು. ಸುಧಾಕರ್ ಅವರು ಇಂದು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಬೆಂಬಲಿಗರನ್ನು ಅಗಲಿರುವುದು ತುಂಬಲಾರದ ನಷ್ಟ. ಭಗವಂತನು ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.