ಚಿತ್ರದುರ್ಗ: ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ (94) ಅವರು (H Hanumanthappa) ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಬೆಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಆರೋಗ್ಯ ಏರುಪೇರಾಗಿದ್ದರಿಂದ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇಂದು ರಾತ್ರಿ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಾಳೆ ಚಿತ್ರದುರ್ಗದ ಮುಕ್ತಿಧಾಮದಲ್ಲಿ ಹನುಮಂತಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಪುತ್ರ ಜಿ.ಎಚ್.ಮೋಹನ್ ತಿಳಿಸಿದ್ದಾರೆ.
ಎಚ್. ಹನುಮಂತಪ್ಪ ಅವರು 1932 ಮೇ 13ರಂದು ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ಭಾರತ ಸೇವಾದಳ ಚಟುವಟಿಕೆಗಳ ಮೂಲಕ ಅವರು ರಾಜಕಾರಣ ಪ್ರವೇಶ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ 1982-1988, 1988- 1994, 1994-2000ವರೆಗೆ ಸತತ ಮೂರು ಅವಧಿಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಕೇಂದ್ರ ರೈಲ್ವೆ ಮಂಡಳಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಕೆಲಸ ಮಾಡಿದ್ದರು. 1995-1998ರವರೆಗೆ ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷರಾಗಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2002- 04ರವರೆಗೆ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಜತೆ ಒಡನಾಟದಲ್ಲಿದ್ದ ಎಚ್. ಹನುಮಂತಪ್ಪ ಅವರು, ಈಚೆಗೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದ ಅವರು ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ನಿಜಲಿಂಗಪ್ಪ ಅವರ ಸ್ಮಾರಕ 'ಪುಣ್ಯಭೂಮಿ' ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಗರದ ಸರಸ್ವತಿ ಕಾನೂನು ಕಾಲೇಜು ಆಡಳಿ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು.
S. Janaki's last rites: ಗಾನಕೋಗಿಲೆ ಎಸ್.ಜಾನಕಿ ಪಂಚಭೂತಗಳಲ್ಲಿ ಲೀನ; ಚಿತೆಗೆ ಮೊಮ್ಮಗಳು ಅಪ್ಸರಾ ಅಗ್ನಿಸ್ಪರ್ಶ
ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ
ಎಚ್. ಹನುಮಂತಪ್ಪ ಅವರ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಚಿತ್ರದುರ್ಗದ ಮಾಜಿ ಸಂಸದರು, ಹಿರಿಯ ಕಾಂಗ್ರೆಸ್ ಮುಖಂಡರು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಪರಿಶಿಷ್ಟ ಸಮುದಾಯದ ನಾಯಕರಾದ ಎಚ್. ಹನುಮಂತಪ್ಪ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ವರ್ಗ, ಆಪ್ತರು, ಅನುಯಾಯಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ ಎಂದು ತಿಳಿಸಿದ್ದಾರೆ.