ಚಿತ್ರದುರ್ಗ: ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬಸ್ ಚಾಲಕ ಹಾಗೂ ಪ್ರಯಾಣಿಕ ಮೃತಪಟ್ಟು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಬಾಪು ಪಾಟೀಲ್ (36), ಪ್ರಯಾಣಿಕ ಗಗನ್ (14) ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಬಸ್ನಲ್ಲಿದ್ದ 15ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಬ್ಬ ಗಾಯಾಳು ಪ್ರಯಾಣಿಕ ರಾಜು ನಾಯ್ಕ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನಲ್ಲಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು
ಮಂಡ್ಯ: ಮೈಸೂರು ದಸರಾ ಮಹೋತ್ಸವದ ಸಂಭ್ರಮ ಮುಗಿಸಿಕೊಂಡು ತಡರಾತ್ರಿ ಊರಿಗೆ ಹಿಂತಿರುಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮದ್ದೂರು ತಾಲೂಕಿನ ಮರಕಾಡದೊಡ್ಡಿ ಗ್ರಾಮದ ನಾಗಪ್ಪ ಅವರ ಪುತ್ರ ಬೋರೇಗೌಡ (27) ಹಾಗೂ ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದ ನಾಗರಾಜು ಅವರ ಪುತ್ರ ಅಭಿಷೇಕ್ (36) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಹಿಂಬದಿ ಸವಾರ ಸಂತೋಷ್ (22) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಲು ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ.