ಅನ್ನ, ಅಕ್ಷರ ಮತ್ತು ಆರ್ಥಿಕ ಸುದೃಢತೆಯ ತ್ರಿವೇಣಿ ಸಂಗಮದಂತೆ ಭೋವಿ ಸಮುದಾಯದ ಬದುಕನ್ನು ರೂಪಿಸುತ್ತಿರುವ ಶಕ್ತಿ, ಚಿತ್ರದುರ್ಗದ ಶಿವಯೋಗಿ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು. ಹನ್ನೆರಡನೆಯ ಶತಮಾನದ ಶಿವಶರಣ ಸಿದ್ಧರಾಮೇಶ್ವರರ ಕಾಯಕ ತತ್ತ್ವವನ್ನು ಮೈಗೂಡಿಸಿಕೊಂಡಿರುವ ಶ್ರೀಗಳು, ಕಳೆದ ಎರಡೂವರೆ ದಶಕಗಳಿಂದ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇವಲ ಧಾರ್ಮಿಕ ಪ್ರವಚನಗಳಿಗೆ ಸೀಮಿತವಾಗದೆ, ಮೌಢ್ಯಮುಕ್ತ ಸಮಾಜ ನಿರ್ಮಾಣ, ಅಕ್ಷರ ದಾಸೋಹ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಕ ಸಮುದಾಯದ ಮನೆ-ಮನಗಳಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿರುವ ಶ್ರೀಗಳು, ಆಧುನಿಕ ಯುಗದ ದಾರಿದೀಪವಾಗಿ ಮುನ್ನಡೆಯುತ್ತಿದ್ದಾರೆ. ಈ ಮಹಾನ್ ಚೇತನದ 40ನೆಯ ಜನ್ಮವರ್ಧಂತಿಯನ್ನು ಜುಲೈ 18ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 17ನೆಯ ಪಟ್ಟಾಭಿಷೇಕ ಮತ್ತು 28ನೆಯ ಲಾಂಛನ ದೀಕ್ಷಾ ಮಹೋತ್ಸವದ ಅಂಗವಾಗಿ ಅತಿ ಶೀಘ್ರದಲ್ಲೇ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ 'ರಾಷ್ಟ್ರೀಯ ಭೋವಿ ಜನೋತ್ಸವ'ವನ್ನು ಕೂಡ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಭೋವಿ ಗುರುಪೀಠದ ಗುರುಗಳಾಗಿ ಹೊಣೆಗಾರಿಕೆ ವಹಿಸಿಕೊಂಡ ಶ್ರೀಗಳು ಇಡೀ ನಾಡು ಅವರತ್ತ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಓದು, ಪ್ರವಚನ, ನಾಲ್ಕು ಜನರಿಗೆ ಹಿತವಚನ, ಪೂಜೆ, ಪುನಸ್ಕಾರ ಎನ್ನುವ ಸೀಮಿತಕ್ಕೆ ಸಿಲುಕದೆ ತಮ್ಮದೇ ವಿಭಿನ್ನ ದಾರಿಯಲ್ಲಿ ನಡೆದವರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರರು. ತಮ್ಮ ಸಂಕಲ್ಪ ಶಕ್ತಿಯಿಂದಲೇ ಸಮುದಾಯದತ್ತ ಹೆಜ್ಜೆ ಹಾಕಿದ ಶ್ರೀಗಳು ನಾಡಿನಾದ್ಯಂತ ಸಮುದಾಯದ ಮನೆ, ಮನಗಳಲ್ಲಿ ಉಳಿದು ಸಾಧನೆ ಮಾಡಿದ್ದಾರೆ.

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಕೇವಲ ಧಾರ್ಮಿಕ ಮುಖಂಡರಾಗಿರದೆ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪಾರ ದೂರದೃಷ್ಟಿಯುಳ್ಳ ಚೇತನ. ತಮ್ಮ 12-13ನೆಯ ವಯಸ್ಸಿನಲ್ಲೇ ಜನಸೇವೆಯ ಗುರಿಯನ್ನು ಇಟ್ಟುಕೊಂಡು ಗುರುಕುಲಕ್ಕೆ ಪ್ರವೇಶಿಸಿದ ಇವರು, ಇದೇ 'ಜನಾರ್ದನ ಸೇವೆ' ಎಂದು ಭಾವಿಸಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿ ಸಣ್ಣ ಗುಡಿಸಲಾಗಿದ್ದ ಮಠವನ್ನು, ಭಕ್ತರ ಪ್ರೀತಿ-ವಿಶ್ವಾಸ ಮತ್ತು ಸ್ವಯಂಪ್ರೇರಿತ ಬೆಂಬಲದೊಂದಿಗೆ ಇಂದು ಅಭಿವೃದ್ಧಿಯ ಕೇಂದ್ರವನ್ನಾಗಿ ರೂಪಿಸಿದ್ದಾರೆ.
ಸಂಘಟನೆ ಮತ್ತು ಜಾಗೃತಿಯ ಪಯಣ
ಸ್ವಾಮೀಜಿಯವರ ಸೇವೆಯ ಆರಂಭಿಕ ದಿನಗಳು ಸವಾಲುಗಳಿಂದ ಕೂಡಿದ್ದವು. ಆ ಕಾಲದಲ್ಲಿ ಸಮುದಾಯದಲ್ಲಿ ಸಂಘಟನೆಯ ಮಹತ್ವವಿರಲಿಲ್ಲ ಮತ್ತು ಮೂಢನಂಬಿಕೆಗಳು ಆಳವಾಗಿ ಬೇರೂರಿದ್ದವು. ಈ ಸಂದರ್ಭದಲ್ಲಿ ಧೃತಿಗೆಡದ ಸ್ವಾಮೀಜಿಯವರು 'ಮನೆ ಮನೆಗೆ ಸಿದ್ಧರಾಮೇಶ್ವರ' ಮತ್ತು 'ಸಿದ್ಧರಾಮೇಶ್ವರ ಸಂದೇಶ ಯಾತ್ರೆ'ಯಂಥ ಅಭಿಯಾನಗಳ ಮೂಲಕ ಜನರನ್ನು ತಲುಪಿದರು. ಇಂದು ಒಂದು ಸಾಮಾನ್ಯ ಸಂದೇಶ ಕಳುಹಿಸಿದರೂ ದೇಶದ 16ಕ್ಕೂ ಹೆಚ್ಚು ರಾಜ್ಯಗಳಿಂದ ಲಕ್ಷಾಂತರ ಜನರು ಸ್ವಯಂಪ್ರೇರಿತರಾಗಿ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂಬುದು ಅವರ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಸಮುದಾಯದ ಜನರು ದುಶ್ಚಟಗಳಿಗೆ ದಾಸರಾಗಿ ಆರ್ಥಿಕವಾಗಿ ಹಿಂದುಳಿಯುವುದನ್ನು ಕಂಡ ಸ್ವಾಮೀಜಿಯವರು, ಅವರಿಗೆ 'ಗಳಿಕೆ-ಬಳಕೆ-ಉಳಿಕೆ' ಎಂಬ ಮಂತ್ರವನ್ನು ಬೋಧಿಸಿದರು. ಜಾತ್ರೆಗಳನ್ನು ಶೋಷಣೆಯ ಸಾಧನಗಳನ್ನಾಗಿ ಮಾಡಿಕೊಳ್ಳದೆ, ಬದುಕು ಕಟ್ಟಿಕೊಳ್ಳುವ ವೇದಿಕೆಗಳನ್ನಾಗಿ ಪರಿವರ್ತಿಸಿದರು. ‘ಇನ್ನೊಬ್ಬರ ಮುಂದೆ ಸಾಲ ಕೇಳುವ ಪರಿಸ್ಥಿತಿ ಬಾರದಂತೆ ಬದುಕಿ’ ಎಂಬ ಅವರ ಸಂದೇಶದ ಫಲವಾಗಿ, ಇಂದು ಅನೇಕರು ದುಶ್ಚಟಗಳಿಂದ ದೂರವಾಗಿ, ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಸೂರು ನಿರ್ಮಿಸಿಕೊಂಡು ನೆಮ್ಮದಿಯಿಂದ ಬಾಳುತ್ತಿದ್ದಾರೆ.
ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ
ಸಮುದಾಯಕ್ಕೆ ಮಾರ್ಗದರ್ಶಕ
ಭೋವಿ ಸಮಾಜ ದೈಹಿಕ ಶ್ರಮವನ್ನೇ ಜೀವನಕ್ಕೆ ಆಧಾರವಾಗಿಟ್ಟು ಬಂದಿದೆ. ಹೀಗೆ ತಲೆಮಾರುಗಳ ಕಾಲ ಬದುಕು ಕಟ್ಟಿಕೊಂಡಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ದೈಹಿಕ ಶ್ರಮದ ಕೆಲಸಗಳು ಮಾತ್ರ ಸಮುದಾಯಕ್ಕೆ ಬದುಕು ನೀಡಲಾರವು. ಆದ್ದರಿಂದ ಸಮುದಾಯದಲ್ಲಿ ಶೈಕ್ಷಣಿಕ ಅರಿವಿನ ಹೆಬ್ಬಾಗಿಲು ತೆರೆಯಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಸ್ವಾಮೀಜಿಗಳು ಪೋಷಕರಿಗೆ ಮನವರಿಕೆ ಮಾಡಿದ್ದಾರೆ. ಈ ಮೂಲಕ ಶ್ರೀಗಳು ರಾಜ್ಯ, ದೇಶದ ಯಾವುದೇ ಭಾಗದಲ್ಲಿ ಸಮುದಾಯದ `ಮಕ್ಕಳು, ಪ್ರತಿಭಾವಂತರು, ಸಮಾಜವನ್ನು ತಮ್ಮ ಕೌಶಲ, ಚಿಂತನೆ, ಕ್ರಿಯೆಗಳಿಂದ ಪ್ರಭಾವಿಸುವವರನ್ನು ಗುರುತಿಸಿ, ಪ್ರೋತ್ಸಾಹಿಸಿ ಸಮುದಾಯಕ್ಕೆ ಪ್ರೇರಣೆ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ.
ಅಸಂಘಟಿತವಾಗಿದ್ದ ಭೋವಿ ಸಮುದಾಯದ ಕೋಲ್ಮಿಂಚಾಗಿ ಕಾಣಿಸಿಕೊಂಡ ಶ್ರೀಗಳು, ಕೇವಲ ಮಾತಿನ ಜಾಣ್ಮೆ ಮೆರೆಯದೆ ತಾನಾಡುವ ಪ್ರತಿ ನುಡಿಗೆ ಕಂಕಣ ಬದ್ಧವಾಗಿ ’ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ...’ ಎಂಬ ವಚನದಂತೆ ಎರಡೂವರೆ ದಶಕಗಳ ಕಾಲ, ಹಿಡಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ಸ್ವಾಮೀಜಿ ವಿಶ್ರಮಿಸದೆ ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದಾರೆ. ಬುಡಕಟ್ಟು ಸಮುದಾಯದಲ್ಲೇ ವಿಶೇಷವಾಗಿ ತನ್ನ ಕೌಶಲ್ಯವನ್ನು ಉಳಿಸಿಕೊಂಡು ಬಂದ ಸಮುದಾಯ ಒಡ್ಡರ ಸಮುದಾಯ. ಕಲೆ, ಸಾಹಿತ್ಯ, ಸಾಮಾಜಿಕ ವ್ಯವಸ್ಥೆಯಲ್ಲಿ ದುಡಿಯುತ್ತಾ ಬಂದವರು. ಕೆಲವರು ಎಂಜಿನಿಯರ್ ಆಗಿ ಕೆರೆ-ಕಟ್ಟೆ, ಗುಡಿ-ಗೋಪುರಗಳನ್ನು ನವನವೀನ ವಿನ್ಯಾಸದೊಂದಿಗೆ ನಿರ್ಮಿಸಿ ಕಾಲಕಾಲಕ್ಕೆ ಕೌಶಲ್ಯ ರೂಢಿಸಿಕೊಂಡು ಬರುತ್ತಿದ್ದಾರೆ. ಭೋವಿ ಗುರುಪೀಠಕ್ಕೆ ಪೀಠಾಧ್ಯಕ್ಷರಾದ ನಂತರ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು, ಈ ಅಕ್ಷರ ವಂಚಿತ ಸಮುದಾಯಕ್ಕೆ ವೈಚಾರಿಕ, ವೈಜ್ಞಾನಿಕ ಜ್ಞಾನಧಾರೆಯನ್ನು ರಾಷ್ಟ್ರವ್ಯಾಪಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಲಸೆಯಿಂದಾಗಿ ಹರಿದು ಹಂಚಿಹೋಗಿರುವ ಜನಾಂಗಕ್ಕೆ ವೇದಿಕೆಯಾಗಿ ಭೋವಿ ಗುರುಪೀಠ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.

ಸಂಘಟನೆಗೆ ಕಂಕಣ
ಅಲೆಮಾರಿ ಭೋವಿ ಸಮುದಾಯ ಕಟ್ಟುವಲ್ಲಿ ಸ್ವಾಮೀಜಿ ಶ್ರಮ ಅಪಾರವಾದುದು. ರಾಜ್ಯದ ವಿವಿಧ ಭೋವಿ ಕಾಲೋನಿ, ಹಟ್ಟಿಗಳನ್ನು ಸ್ವಾಮೀಜಿ ಸುತ್ತುತ್ತಾರೆ. ಇದರ ಫಲವಾಗಿ ಹಲವು ಗ್ರಾಮಗಳು ವ್ಯಸನ ಮುಕ್ತವಾಗಿವೆ. ಈ ಗ್ರಾಮಗಳು ಪ್ರಾಣಿಬಲಿ ನಿಷೇಧಕ್ಕೆ ವಾಗ್ದಾನ ನೀಡಿವೆ. ವರ್ಷಕ್ಕೊಮ್ಮೆ ನಡೆಯುವ ಮಾರಮ್ಮ, ಹುಲಿಗೆಮ್ಮನ ಜಾತ್ರೆಗಳು ಸಮುದಾಯದ ಆರ್ಥಿಕತೆಯ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸ್ವಾಮೀಜಿಗೆ ಸ್ಪಷ್ಟತೆ ಇತ್ತು. ಹೀಗಾಗಿ ಗಳಿಕೆ-ಬಳಕೆ-ಉಳಿಕೆ ಸೂತ್ರವನ್ನು ಭಕ್ತರ ಮುಂದಿಟ್ಟರು. ಇದನ್ನು ಅರಿತವರು ಜಾತ್ರೆಗಳ ನೆಪದಲ್ಲಿ ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದ್ದಾರೆ.
ಜಾತ್ರೆ, ಉತ್ಸವಗಳಲ್ಲಿ ಅಭಿವೃದ್ದಿ ದ್ಯೋತಕವಾಗಿ ವರ ಕೇಳುವುದು ವಾಡಿಕೆ. ಆದರೆ, ಜನರ ದುಂದುವೆಚ್ಚದ ಪರಿಣಾಮವಾಗಿ ಇದೇ ಜಾತ್ರೆಗಳು ವರವಾಗುವ ಬದಲು ಶಾಪಗಳಾಗಿವೆ. ಯಾವ ದೇವರು ಕೂಡ ಪ್ರಾಣಿಬಲಿ ಕೇಳುವುದಿಲ್ಲ. ಸಕಲ ಜೀವಾತ್ಮಗಳಿಗೂ ಲೇಸು ಬಯಸುವವಳು ಜಗನ್ಮಾತೆ. ಆದರೆ, ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸುತ್ತಿದ್ದಾರೆ. ಮಾಂಸ, ಹೆಂಡ, ಜೂಜುಗಳು ಸಮುದಾಯನ್ನು ಹಾಳು ಮಾಡುತ್ತಿವೆ. ಜಾತ್ರೆಗಳಲ್ಲಿ ದುಂದುವೆಚ್ಚ ಮಾಡದಂತೆ ಭಕ್ತರಿಗೆ ಮನವರಿಕೆ ಮಾಡಿದ್ದಾರೆ. ಕುಂಭ ಹೊತ್ತು ಮೈಮೇಲೆ ದೇವಿ ಬಂದಂತೆ ವರ್ತಿಸುವವರನ್ನು ಸ್ವಾಮೀಜಿ ಕೌನ್ಸೆಲಿಂಗ್‌ಗೆ ಒಳಪಡಿಸಿದ್ದಾರೆ. ಹೀಗೆ ಕೌನ್ಸೆಲಿಂಗ್ ಮಾಡಿದ ಬಳಿಕ ಅನೇಕರು ವಿಚಿತ್ರವಾಗಿ ವರ್ತಿಸುವುದನ್ನು ಬಿಟ್ಟಿದ್ದಾರೆ.
ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಭಕ್ತಿಯ ಹೆಜ್ಜೆಯನ್ನಿಟ್ಟು ಬನ್ನಿ
ಬಸವ ತತ್ತ್ವದ ಪ್ರಸಾರ
ಸಿದ್ಧರಾಮೇಶ್ವರರ ಭಕ್ತರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಸವ ತತ್ತ್ವದ ಅನುಯಾಯಿ. ಇವರಿಗೆ ಬಸವ ತತ್ತ್ವದ ನೆಲೆಗಟ್ಟಿನ ಮೇಲೆ ವೈಚಾರಿಕ ಧರ್ಮ ನಿರ್ಮಾಣವಾಗಬೇಕು ಎಂಬ ಮಹದಾಸೆ. ಇದನ್ನು ತಮ್ಮ ಮಾತು, ಕೃತಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಸ್ವಾಮೀಜಿ ಲಿಂಗಧಾರಣೆ, ರುದ್ರಾಕ್ಷಿ ಧಾರಣೆ ಮಾಡಿಸುತ್ತಾರೆ. ವಚನಗಳನ್ನು ಅಪಾರವಾಗಿ ಓದಿಕೊಂಡಿರುವ ಸ್ವಾಮೀಜಿ ಭಕ್ತರಿಗೆ ವಚನದ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ವಚನದ ಮೂಲಕ ಸಿದ್ಧರಾಮೇಶ್ವರರು ನೀಡಿದ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಭೌತಿಕ ದೇಗುಲದ ಪರಿಕಲ್ಪನೆಯಿಂದ ಭಕ್ತರನ್ನು ಹೊರತರುವ ಅಗತ್ಯವಿದೆ. ಶ್ರೀಗಳು ದೇಹವೇ ದೇಗುಲ ಎಂಬ ಬಸವಣ್ಣನವರ ತತ್ತ್ವವನ್ನು ಮನವರಿಕೆ ಮಾಡಿದ್ದಲ್ಲದೆ, ಇದಕ್ಕೆ ನಿರಂತರ ಪ್ರಯತ್ನ ಪಟ್ಟು ಅದರಲ್ಲಿ ಸಫಲತೆಯೂ ಕಂಡಿರುವರು. ಸಾಮರಸ್ಯದ ಮಂತ್ರವನ್ನು ಸದಾ ಜಪಿಸುತ್ತಾರೆ. ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದಲಾಗಬೇಕಿರುವ ಪರಿಯನ್ನು ಮನವರಿಕೆ ಮಾಡಿಕೊಡುವಲ್ಲಿ ನಿರತರಾಗಿದ್ದಾರೆ. ಎರಡು ಕುಟುಂಬಗಳ ನಡುವೆ ಕಾಣಿಸಿಕೊಳ್ಳುವ ವೈಷಮ್ಯ ಜಾತಿಯ ಆಯಾಮಕ್ಕೆ ತಿರುಗದಂತೆ ಎಚ್ಚರ ವಹಿಸಿದ್ದಾರೆ. ಜಾತಿ ಕಲಹಗಳು ಕಾಣಿಸಿಕೊಂಡ ಗ್ರಾಮಗಳಿಗೆ ಭೇಟಿ ನೀಡಿ ಭಕ್ತರಿಗೆ ತಿಳಿವಳಿಕೆ ನೀಡಿದ್ದಾರೆ. ಇದರಿಂದ ಹಲವು ಗ್ರಾಮಗಳಲ್ಲಿ ಜಾತಿ ಕಲಹಗಳು ಕಡಿಮೆಯಾಗಿವೆ.

ಉಚಿತ ಶಿಕ್ಷಣದ ಗುರಿ
ಉದ್ಯೋಗ ಅರಸಿ ಗುಳೆ ಹೋಗುವ ಭೋವಿ ಜನಾಂಗದ ಬಡಜನರ ಮಕ್ಕಳು ಶಿಕ್ಷಣದತ್ತ ಗಮನಹರಿಸಿದ್ದು ಕಡಿಮೆ. ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ದುಡಿಮೆಗೆ ಬಳಸಿಕೊಳ್ಳುತ್ತಿದ್ದ ಪ್ರವೃತ್ತಿ ಬೆಳೆದುಬಂದಿತ್ತು. ಇದನ್ನು ಅರಿತ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇಡೀ ಸಮುದಾಯದ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ಪಣತೊಟ್ಟಿದ್ದಾರೆ.
ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿದ ಮಠ, ಮಕ್ಕಳಿಗೆ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಆಶ್ವಾಸನೆ ನೀಡಿತು. ಆದರೂ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಲು ಮುಂದೆ ಬರಲಿಲ್ಲ. ಭೋವಿ ಸಮುದಾಯ ಇರುವ ಹಳ್ಳಿಗಳಿಗೆ ಭೇಟಿ ನೀಡಿದ ಸ್ವಾಮೀಜಿ ಶಿಕ್ಷಣದ ಅಗತ್ಯದ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಿದರು. ವಲಸೆ ಹೋಗುವ ಪೋಷಕರ ಮಕ್ಕಳನ್ನು ಮಠಕ್ಕೆ ಕರೆತಂದು ಶಿಕ್ಷಣ ನೀಡತೊಡಗಿದರು. ಚಿಕ್ಕದಾಗಿ ಆರಂಭವಾದ ಶಿಕ್ಷಣ ಸಂಸ್ಥೆ ದಶಕದಲ್ಲಿ ದೊಡ್ಡದಾಗಿ ಬೆಳೆದಿದೆ. ಎಲ್‌ಕೆಜಿಯಿಂದ ಪದವಿ ಪೂರ್ವ ಕಾಲೇಜು ವರೆಗಿನ ಶಿಕ್ಷಣ ಸಂಸ್ಥೆ ಚಿತ್ರದುರ್ಗದಲ್ಲಿದೆ. ಪದವಿ ಪೂರ್ವ ಕಾಲೇಜು ಶಿವಮೊಗ್ಗದಲ್ಲಿದೆ. ಬಾಗಲಕೋಟೆ ಹಾಗೂ ಚಿತ್ರದುರ್ಗದಲ್ಲಿ ಉಚಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಐದು ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಕರೆತಂದಿದ್ದಾರೆ. ಮಠದ ನೆರವಿನಿಂದ ಶಿಕ್ಷಣ ಪಡೆದವರು ವೇತನದ ಶೇ. 10ರಷ್ಟನ್ನು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ನೀಡುತ್ತಿದ್ದಾರೆ. ಪದವಿ, ಎಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣದ ಕೋರ್ಸ್ ಆರಂಭಿಸಿ ಉಚಿತ ಪ್ರವೇಶ ಕಲ್ಪಿಸುವ ಸಂಕಲ್ಪವನ್ನು ಮಠ ಹೊಂದಿದೆ. ಪ್ರಜ್ಞಾವಂತ ಮಕ್ಕಳೇ ಸಮುದಾಯದ ಆಧಾರಸ್ತಂಭ ಎಂಬುದು ಸ್ವಾಮೀಜಿ ಅವರ ದೃಢವಾದ ನಂಬಿಕೆ.
ನಿಸ್ವಾರ್ಥ ಸೇವೆ
ಭೋವಿ ಗುರುಪೀಠದಲ್ಲಿ ಭಕ್ತರಿಗೆ ನಿತ್ಯ ದಾಸೋಹ ನಡೆಯುತ್ತದೆ. ಮಠಕ್ಕೆ ಭೇಟಿ ನೀಡಿದ ಭಕ್ತರಿಗೆ ಪ್ರಸಾದ ನೀಡಬೇಕು ಎಂಬುದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಶಯ. ಸ್ವಾಮೀಜಿ ಆಶಯಕ್ಕೆ ಬದ್ಧರಾಗಿ ನಡೆದುಕೊಳ್ಳುವ ಭಕ್ತರು ದಾಸೋಹಕ್ಕೆ ನೆರವಾಗುತ್ತ ಬಂದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ನೆರೆಗೆ ತತ್ತರಿಸಿಹೋಗಿದ್ದ ಜನರ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ನೆರವಾಗಿದ್ದು ಭೋವಿ ಗುರುಪೀಠ. ಜಾತ್ಯತೀತ ತಳಹದಿಯ ಮೇಲೆ ನಿರ್ಮಾಣಗೊಂಡ ಮಠ, ಕಾಯದಲ್ಲಿಯೂ ಈ ತತ್ತ್ವ ಪಾಲನೆ ಮಾಡುತ್ತಿದೆ. ನೆರೆ ಹಾವಳಿಯಿಂದ ತೊಂದರೆಗೆ ಸಿಲುಕಿದ ಗ್ರಾಮಗಳಿಗೆ ಭೇಟಿ ನೀಡಿ ಎಲ್ಲ ಸಮುದಾಯದ ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ನೀಡಿದೆ.
ಬಾಗಲಕೋಟೆ ಜಿಲ್ಲೆಯ ಕೆಲವೆಡೆ ಪ್ರವಾಸ ಮಾಡಿದಾಗ ನೆರೆ ಹಾವಳಿಗೆ ಸಿಲುಕಿ ನಲುಗಿಹೋದ ಜನರ ಬದುಕು ಕಂಡು ಮರುಗಿದ ಶ್ರೀಗಳು. ಮಕ್ಕಳ ಅಳು, ಹಿರಿಯರ ತೊಳಲಾಟ, ಗರ್ಭಿಣಿಯರ ಸಂಕಟಕ್ಕೆ ಮನಸು ಮರುಗಿತು. ಕೈಲಾದ ಸಹಾಯ ಒದಗಿಸಿ. ನಿತ್ಯ ರಾತ್ರಿ ಪ್ರವಚನ, ಹಗಲು ಹೊತ್ತು ಸೇವೆ ಮಾಡತೊಡಗಿದರು. ಜನರ ಅಗತ್ಯವನ್ನು ಅರಿತು ದಾನ ಮಾಡುವುದು, ಬಟ್ಟೆ, ಚಪಲಿ, ಶೂ, ಜಾನುವಾರು ಮೇವು, ಬೆಚ್ಚನೆಯ ಹೊದಿಕೆ, ಛತ್ರಿ... ಹೀಗೆ ಹಲವು ರೀತಿಯ ನೆರವಿನ ಮಹಾಪೂರವೇ ಹರಿಸಲಾಯಿತು.

ಗುರುಪೀಠದ ಮಹತ್ವ
ಗುರುಪರಂಪರೆ, ಮಠದ ಸಂಸ್ಕಾರಗಳಿಂದ ದೂರ ಉಳಿದಿದ್ದ ಭೋವಿ ಸಮುದಾಯವನ್ನು ಧಾರ್ಮಿಕ ತಳಹದಿಯ ಮೇಲೆ ಕಟ್ಟುವ ಸವಾಲು ಚಿಕ್ಕ ವಯಸ್ಸಿಗೆ ಸ್ವಾಮೀಜಿ ಹೆಗಲ ಮೇಲೆ ಬಿದ್ದಿತು. ಇಳಕಲ್‌ನ ಯಂಕಪ್ಪ ಬಂಡಿ ಅವರು ಸಮುದಾಯಕ್ಕೆ ಗುರುಪೀಠ ಸ್ಥಾಪಿಸುವ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ಸ್ಪಷ್ಟ ರೂಪ ನೀಡಿದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಗುರುಪೀಠ ಉನ್ನತಿ ತಲುಪುವವರೆಗೆ ವಿರಮಿಸಿಲ್ಲ.
ಗುರುಕುಲದಿಂದ ಸ್ವತಂತ್ರರಾಗಿ ಬಂದ ಸ್ವಾಮೀಜಿ 2009 ರಲ್ಲಿ ಚಿತ್ರದುರ್ಗದ ಹೊರವಲಯದ ಗುಡಿಸಲಲ್ಲಿ ಮಠ ಆರಂಭಿಸಿದರು. ಆರಂಭಿಕ ವರ್ಷಗಳಲ್ಲಿ ಗುಡಿಸಲು ನಿವಾಸಿಗಳಾಗಿ ಮಠದ ಪರಂಪರೆಯನ್ನು ಶ್ರೀಮಂತಗೊಳಿಸಲು ಮುಂದಡಿ ಇಟ್ಟರು. ಚಿತ್ರದುರ್ಗ ಗುರುಪೀಠಕ್ಕೆ ಮೊದಲ, ದಾವಣಗೆರೆ ಮಠಕ್ಕೆ ಎರಡನೆಯ, ಬಾಗಲಕೋಟೆಯ ಮೂಲ ಗುರುಪೀಠಕ್ಕೆ ಮೂರನೆಯ ಪೀಠಾಧಿಪತಿಯಾದರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ.
ಚಿತ್ರದುರ್ಗದಲ್ಲಿ 2009 ರಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿ ಸಮಾಜ ಸಂಘಟನೆಯ ಸಾಮರ್ಥ್ಯ ತೋರಿಸಿದರು. ನೂರಕ್ಕೂ ಹೆಚ್ಚು ಮಠಾಧೀಶರ ನೇತೃತ್ವದಲ್ಲಿ ಬಾಗಲಕೋಟೆ ಮೂಲ ಗುರುಪೀಠಕ್ಕೆ 2010 ರಲ್ಲಿ ಪಟ್ಟಾಧಿಕಾರ ನೆರವೇರಿತು. ಶಿವಮೊಗ್ಗ, ದಾವಣಗೆರೆ, ಗದಗ ಜಿಲ್ಲೆಗೂ ಶಾಖಾ ಮಠ ವಿಸ್ತರಿಸಿವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿಯೂ ಸಹ ಶಾಖಾ ಮಠ ತೆರೆಯುವ ಅಪೇಕ್ಷೆಯಿದ್ದು ಧಾರ್ಮಿಕ ಉನ್ನತಿಯಲ್ಲಿ ಭೋವಿ ಗುರುಪೀಠ ಸಾಗಿದೆ.
ಜನೋತ್ಸವದ ಇತಿಹಾಸ
ಸ್ವಾಮೀಜಿ ಜನ್ಮದಿನ ಭೋವಿ ಜನೋತ್ಸವದ ರೂಪ ಪಡೆದ ಪರಿ ಕುತೂಹಲಕಾರಿಯಾಗಿದೆ. ಮುರುಘಾ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದ ಮಠಾಧೀಶರಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅತ್ಯಂತ ಕಿರಿಯರು. ಈ ಕಾರಣಕ್ಕೆ ಸ್ವಾಮೀಜಿ ಜನರಿಗೆ ಅತ್ಯಂತ ಪ್ರೀತಿಪಾತ್ರರು. 2009 ರಲ್ಲಿ ಚಿತ್ರದುರ್ಗದ ಹೊರವಲಯದ ಪುಟ್ಟ ಗುಡಿಸಲಲ್ಲಿ ಮಠ ಆರಂಭಿಸಲಾಯಿತು. ಪ್ರತಿ ಜುಲೈ 18ಕ್ಕೆ ಗುಡಿಸಲಿಗೆ ಧಾವಿಸುತ್ತಿದ್ದ ಇನ್ನಿತರೆ ಮಠಾಧೀಶರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಜನ್ಮದಿನ ಆಚರಿಸುತ್ತಿದ್ದರು. ಶ್ರೀಗಳ ಗಮನಕ್ಕೆ ತಾರದೇ ಚಿತ್ರದುರ್ಗದ ವಡ್ಡರ ಸಿದ್ಧವನಹಳ್ಳಿ ಪ್ರಕಾಶ ಹಾಗೂ ಅಶೋಕ ಸೇರಿಕೊಂಡು ಸ್ಥಳೀಯ ಭಕ್ತರಿಗೆ ನೂರಾರು ಸಂಖ್ಯೆಯಲ್ಲಿ ಕರೆದು ಸಿಹಿ ಔತಣಕೂಟ ಏರ್ಪಡಿಸಿದ್ದರು. ಮುಂದಿನ ವರ್ಷ ಯುವ ಉತ್ಸಾಹಿ ದಿವಂಗತ ವೀರೇಶ ತನ್ನೊಟ್ಟಿಗೆ ಇರುವ ನೂರಾರು ಯುವಕರೊಂದಿಗೆ ರಕ್ತದಾನ ಶಿಬಿರ ಪ್ರಾರಂಭಿಸಿದರು. ಮತ್ತೊಂದು ವರ್ಷ ಸಾಲುಮರದ ತಿಮ್ಮಕ್ಕನ ಮಗ ಉಮೇಶ ಹಸಿರೋತ್ಸವ ಆಚರಿಸಿದರು. ಆನಂತರ ಮಾಜಿ ಸಂಸದ ಜನಾರ್ಧನಸ್ವಾಮಿಯವರು ಶ್ರೀಗಳ ಸಮ್ಮುಖದಲ್ಲಿ ಬಡಹೆಣ್ಣುಮಕ್ಕಳಿಗೆ ಲ್ಯಾಪ್ ಟಾಪ್ ನೀಡಿದರು. ಶ್ರೀಗಳು ಹೇಗಿದ್ದರೂ ಜುಲೈ 18ರಂದು ಜನ ಬರುವುದರಿಂದ ಜನಪರ ಕಾರ್ಯಕ್ರಮಗಳನ್ನು ಆಯೋಜಿಸೋಣವೆಂದು ಚಿಕ್ಕ ಸಂಖ್ಯೆಯಲ್ಲಿ ಬಡವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಾರಂಭಿಸಿದರು. ಜೂನ್ 2015ರಲ್ಲಿ ಕರ್ನಾಟಕ ಭಕ್ತರೊಂದಿಗೆ ದೆಹಲಿಯ ಭಗೀರಥ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡಾಗ ರವಿ ಮಾಕಳಿ, ಆನಂದಪ್ಪ ಸೇರಿದಂತೆ ವಿವಿಧ ರಾಜ್ಯದ ಸದ್ಭಕ್ತರು ಶ್ರೀಗಳ ಜನೋತ್ಸವನ್ನು ರಾಷ್ಟ್ರೀಯ ಭೋವಿ ಜನೋತ್ಸವವನ್ನಾಗಿ ಆಚರಿಸೋಣವೆಂದು ತೀರ್ಮಾನಿಸಿದರು. ಇದರ ಪರಿಣಾಮ ನಾಲ್ಕು ಜನರೊಂದಿಗೆ ಇದ್ದ ದಿನ ಸಹಸ್ರಾರು ಸಂಖ್ಯೆಯಲ್ಲಿ ಸೇರುವ ದಿನವಾಗಿ ಪರಿವರ್ತನೆಯಾಗಿದೆ. ಹೀಗೆ ವರ್ಷಗಳು ಕಳೆದಂತೆ ಭೋವಿ ಜನೋತ್ಸವವಾಗಿ, ಸಮುದಾಯದ ಹಬ್ಬವಾಗಿ ಮುನ್ನೆಲೆಗೆ ಬಂದಿತು. ಧಾರ್ಮಿಕ ತಳಹದಿಯ ಮೇಲೆ ಸಮುದಾಯ ಸಂಘಟನೆಗೆ ಮುಂದಾದ ಸ್ವಾಮೀಜಿ ಅವರಿಗೆ ಇದು ಇನ್ನಷ್ಟು ಸ್ಫೂರ್ತಿ ತುಂಬಿತು.
ಶಾಂತಿ, ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ
ಇದನ್ನು ಸಮುದಾಯ ಸಂಘಟನೆಗೆ ಪೂರಕವಾಗಿ ದುಡಿಸಿಕೊಂಡು ಚಾಣಾಕ್ಷತೆ ತೋರಿದರು ಸ್ವಾಮೀಜಿ. ಸಮಾಜಕ್ಕಾಗಿ ರಾಜ್ಯದಲ್ಲಿ ಪಾದರಸದಂತೆ ಸಂಚರಿಸುವ ಸ್ವಾಮೀಜಿ, ಜನರ ಜತೆ ಬೆರೆಯುವ ಅದಮ್ಯ ಉತ್ಸಾಹಿಗಳು. ಹಳ್ಳಿ, ಹಟ್ಟಿಗಳಿಗೆ ಭೇಟಿ ನೀಡಿ ಭಕ್ತರೊಂದಿಗೆ ಸಂವಾದ ನಡೆಸುತ್ತಾರೆ. ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸದಾ ಪ್ರಯತ್ನಿಸುತ್ತಾರೆ.