ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ ಚಿಟ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್‌ ಚಿಟ್‌ ನೀಡಲಾಗಿದೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಸಮಿತಿಯ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದ್ದು, ಈ ವರದಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ಚಿಟ್‌

-

Ramesh B Ramesh B Sep 4, 2025 10:55 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಸೆಪ್ಟೆಂಬರ್ 4) ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ (MUDA Scam Case) ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್‌ ಚಿಟ್‌ ನೀಡಲಾಗಿದೆ. ನಿವೃತ್ತ ನ್ಯಾಯಾಧೀಶ ದೇಸಾಯಿ (P. N. Desai) ಸಮಿತಿಯ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದ್ದು, ಈ ವರದಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ. ಜತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬೆಂಬಲಿಗರಿಗೆ ಸಂಬಂಧಿಸಿದ ಒಟ್ಟು 11 ಪ್ರಕರಣಗಳನ್ನು ಕೈಬಿಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿ ನ್ಯಾ. ಪಿ.ಎನ್. ದೇಸಾಯಿ ಅವರ ಏಕವ್ಯಕ್ತಿ ಆಯೋಗವನ್ನು ನೇಮಕ ಮಾಡಲಾಗಿದ್ದು , ಆಯೋಗವು ಎರಡು ಸಂಪುಟಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ. ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಮೇಲೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ಕೆಲವು ಅಧಿಕಾರಿಗಳ ಮೇಲೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ವರದಿಯನ್ನು ಸರ್ಕಾರ ಒಪ್ಪಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019ರಿಂದ 2023 ರವರೆಗೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾಗಿ ತನಿಖೆ ಮಾಡಿ ವರದಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ರೈತರು, ವಿದ್ಯಾರ್ಥಿಗಳು, ಕನ್ನಡ ಹೋರಾಟಗಾರರ ಮೇಲಿದ್ದ ಅರವತ್ತು ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಜಲಶಕ್ತಿ ಸಚಿವಾಲಯದಿಂದ ರಾಜ್ಯ ಸಚಿವರ ಸಭೆ: ಡಿಕೆ ಶಿವಕುಮಾರ್

ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 01.04.2020ರಿಂದ 31.03.2022ರ ದ್ವೈ ವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ.ಯಂತೆ ಲಾಭಾಂಶ (ಬೋನಸ್) ಘೋಷಿಸಲು ಮತ್ತು ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ: 01.04.2022ರಿಂದ 31.03.2024ರ ಅವಧಿಯಲ್ಲಿ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ.ಯಂತೆ ಮಧ್ಯಂತರ ಲಾಭಾಂಶವನ್ನು (ಇಂಟರೀಮ್ ಬೋನಸ್) ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ “ಆಶಾಕಿರಣ” ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 52.85 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.
  • ಒಳಾಡಳಿತ ಇಲಾಖೆಯಡಿ “ಕರ್ನಾಟಕ ಇ-ಸಾಕ್ಷರತೆಯ ನಿರ್ವಹಣಾ ನಿಯಮಗಳು 2025ಕ್ಕೆ ಅನುಮೋದನೆ.
  • “ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮೊದಲನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ 65 ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರಗತಿ 1ರಿಂದ 10ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಈ ಸಂಸ್ಥೆಯ ವತಿಯಿಂದ ಸಾಯಿ ಶ್ಯೂರ್‌ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿರುವ ಕಾರ್ಯಕ್ರಮವನ್ನು ವಾರದ ಮೂರು ದಿನಗಳ ಬದಲಾಗಿ ಐದು ದಿನಗಳಿಗೆ ವಿಸ್ತರಿಸಿ, ಈ ಯೋಜನೆಯ ಶೇಕಡಾ 25ರಷ್ಟು ವೆಚ್ಚವನ್ನು ಅಂದರೆ 27.02 ಕೋಟಿ ರೂ. (ಸಾಗಾಣಿಕಾ ವೆಚ್ಚ 6.49 ಕೋಟಿ ರೂ. ಸೇರಿ) ರಾಜ್ಯ ಸರ್ಕಾರದಿಂದ ಭರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.