ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು, ನೋಟಿಸ್‌ಗೆ ಕೊಟ್ಟ ಉತ್ತರ ಸಮರ್ಪಕ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ವಿಧಾನಸೌಧದಲ್ಲಿ ಶನಿವಾರ ನಡೆದ ಡಿಸಿ ಮತ್ತು ಸಿಇಒಗಳ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಎಸ್‌ಎಸ್‌ಎಲ್‌ಸಿಯಲ್ಲಿ ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ ಎಂದು ಗರಂ ಆದರು.
ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಫಲಿತಾಂಶ ಬರುತ್ತಿದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಡಿಸಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ನಡೆಸಬೇಕು. ಇಲ್ಲ ಸಲ್ಲದ ನೆಪ ಹೇಳಬೇಡಿ. ಶಿಕ್ಷಕರು ಮತ್ತು ಡಿಡಿಪಿಐಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಎಲ್ಲಾ ಕಡೆ ಬರುತ್ತದೆ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ವಿವೇಕ ಯೋಜನೆಯಡಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡುವುದರಲ್ಲಿ ವಿಳಂಬ ಆಗಬಾರದು. ಕ್ರಿಯಾ ಯೋಜನೆ ತಕ್ಷಣ ತಕ್ಷಣ ಸಿದ್ಧಪಡಿಸಬೇಕು. ಹಣ ಬಿಡುಗಡೆ ಆಗಿದ್ದರೂ ಇನ್ನೂ ಶಾಲಾ ಕೊಠಡಿಗಳ ನಿರ್ಮಾಣ ಆಗದಿರುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗದಂತೆ ಶಿಕ್ಷಕರು ಮತ್ತು ಅಧಿಕಾರಿಗಳು ಪೋಷಕರ ಜತೆ ಮಾತನಾಡಬೇಕು, ಡ್ರಾಪ್‌ಔಟ್ ತಡೆಯಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಬೇಕು. ಡಿಡಿಪಿಐಗಳು, ಬಿಇಒಗಳು ಶಾಲೆಗಳಿಗೆ ಭೇಟಿ ನೀಡ್ತಾ ಇದಾರಾ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗಮನಿಸಬೇಕು. ಪ್ರತೀ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿರುವುದು ಕೆಟ್ಟ ಬೆಳವಣಿಗೆ. ಸರ್ಕಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ಸೂಪು, ಹಾಸ್ಟೆಲ್ ಸವಲತ್ತು ಎಲ್ಲಾ ಕೊಟ್ಟು ಮಕ್ಕಳ ದಾಖಲಾತಿ ಪ್ರಮಾಣ ಏಕೆ ಕಡಿಮೆ ಆಗುತ್ತಿದೆ. ನಿಮ್ಮ ಪ್ರಾಯೋಗಿಕ ಅನುಭವಗಳು ಏನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಕ್ಕೆ ಸಿಎಂ ಸೂಚಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವುದನ್ನು ಗಮನದಲ್ಲಿಡಿ. ಡಿಡಿಪಿಐಗಳು ಜಿಲ್ಲೆಗಳಲ್ಲಿ ಕುಳಿತು ಕೆಲಸ ಮಾಡುವುದಲ್ಲ. ಇಡೀ ಜಿಲ್ಲೆ ಪ್ರಯಾಣ ಮಾಡಬೇಕು. ಸಿಇಒಗಳು ಕಡ್ಡಾಯವಾಗಿ ಈ ಬಗ್ಗೆ ನಿಗಾ ವಹಿಸಿ ಪೋಷಕರ ಜೊತೆ ಸಭೆ ನಡೆಸಿ ಚರ್ಚಿಸಲೇಬೇಕು ಎಂದು ಸಿಎಂ ತಾಕೀತು ಮಾಡಿದರು.
ಪರೀಕ್ಷಾ ಫಲಿತಾಂಶದಲ್ಲಿ ಮತ್ತು ಮಕ್ಕಳ ದಾಖಲಾತಿಯಲ್ಲಿ ರಾಜ್ಯ ಸರಾಸರಿಗಿಂತ ಶೇಕಡಾವಾರು ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಸಿಇಒ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಖಡಕ್ ಸೂಚನೆ ನೀಡಿ ಮುಂದಿನ ಶೈಕ್ಷಣಿಕ ಸಾಲಿನ ಹೊತ್ತಿಗೆ ಪರಿಸ್ಥಿತಿ ಉತ್ತಮಗೊಳ್ಳಬೇಕು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Guest Lecturers: ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್; 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಆದೇಶ
ಕಲ್ಯಾಣ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಸಿಇಒಗಳು ಹೆಚ್ಚಿನ ಆಸಕ್ತಿ ಕೊಟ್ಟು ಈ ಬಗ್ಗೆ ನಿಗಾ ಇಡಬೇಕು. ಫಲಿತಾಂಶ ಕಡಿಮೆ ಇರುವುದಕ್ಕೆ ಕಾರಣಗಳು, ನೆಪಗಳು ಮುಖ್ಯ ಅಲ್ಲ, ಫಲಿತಾಂಶ ತರುವುದು ಮುಖ್ಯ. ಪ್ರಾಮಾಣಿಕ ಪ್ರಯತ್ನ ಇದ್ದರೆ ಪ್ರಾಮಾಣಿಕ ಫಲಿತಾಂಶ ಬರುತ್ತದೆ ಎಂದರು.