ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mango Price Drop: ಮಾವು ಬೆಲೆ ಕುಸಿತ; ರೈತರ ನೆರವಿಗೆ ಧಾವಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

Mango Price Drop: 'ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಅವರ ನೆರವಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಮಾವು ಬೆಳೆಗಾರರ ನೆರವಿಗೆ ಧಾವಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

Prabhakara R Prabhakara R Jun 13, 2025 5:09 PM

ಬೆಂಗಳೂರು: ಪ್ರಸಕ್ತ ಹಂಗಾಮಿನಲ್ಲಿ ಮಾವು ಬೆಲೆ ತೀವ್ರ ಕುಸಿದ (Mango Price Drop) ಹಿನ್ನೆಲೆಯಲ್ಲಿ ಕರ್ನಾಟಕದ ಮಾವು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಸಿಎಂ ಅವರು, ರೈತರ ಹಿತಕಾಯುವ ಸಲುವಾಗಿ ಬೆಲೆ ಕೊರತೆ ಪಾವತಿ ಯೋಜನೆ (PDPS) ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಗೆ ತರುವಂತೆ ಕೇಂದ್ರವನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.

'ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ರಬಿ ಹಂಗಾಮಿನಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ನಿರೀಕ್ಷೆ ಇದೆ.

ಮೇ ನಿಂದ ಜುಲೈವರೆಗಿನ ಸುಗ್ಗಿ ತಿಂಗಳುಗಳಲ್ಲಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬರುವುದರಿಂದ ಬೆಲೆಯಲ್ಲಿ ಗಣನೀಯ ಏರಿಳಿತಗಳು ಉಂಟಾಗಿವೆ. ಈ ಹಿಂದೆ ಕ್ವಿಂಟಲ್‌ಗೆ 12,000 ರೂ. ಗಳಷ್ಟಿದ್ದ ಮಾರುಕಟ್ಟೆ ಬೆಲೆಗಳು ಈಗ ಕ್ವಿಂಟಲ್‌ಗೆ 3,000 ರೂ. ಗಳಿಗೆ ಇಳಿದಿವೆ. ಆದರೆ, ರಾಜ್ಯ ಕೃಷಿ ಬೆಲೆ ಆಯೋಗವು ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ 5,466 ರೂ.ಗಳಿಗೆ ಶಿಫಾರಸು ಮಾಡಿದೆ.

'ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಏರಿಳಿತಗಳ ನಡುವಿನ ಈ ವ್ಯತ್ಯಾಸವು ರೈತ ಸಮುದಾಯವನ್ನು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿಸಿದೆ. ಇದರಿಂದ 'ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ಮಾವು ಬೆಳೆಗಾರರು ಹಾಕಿದ ಬಂಡವಾಳವನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

'ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೆಲೆ ಕೊರತೆ ಪಾವತಿ ಯೋಜನೆ (PDPS) ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡು, NAFED ಮತ್ತು NCCF ನಂತಹ ಗೊತ್ತುಪಡಿಸಿದ ಕೇಂದ್ರ ಖರೀದಿ ಸಂಸ್ಥೆಗಳಿಂದ ಮಾವು ಖರೀದಿಸುವ ಮೂಲಕ ರೈತರಿಗೆ ಕನಿಷ್ಠ ಕೃಷಿ ವೆಚ್ಚವನ್ನು ಪಡೆಯಲು ಅನುಕೂಲ ಮಾಡಬೇಕು ಎಂದು ಕೋರಿದ್ದಾರೆ.

'ಇಂತಹ ಸಕಾಲಿಕ ಹಸ್ತಕ್ಷೇಪವು ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಗ್ರಾಮೀಣ ಭಾಗದ ಸಂಕಷ್ಟಗಳು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಈ ಕಷ್ಟದ ಸಮಯದಲ್ಲಿ ನಮ್ಮ ರೈತ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಿದಂತಾಗುತ್ತದೆ. ಕರ್ನಾಟಕದ ಲಕ್ಷಾಂತರ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಸಹಾನುಭೂತಿ ತೋರಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಕರ್ನಾಟಕದ ತೋತಾಪುರಿ ಮಾವು ಆಂಧ್ರದಲ್ಲಿ ನಿಷೇಧ, ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಲೆ ಕುಸಿತ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಪ್ರಮುಖ ಮಾವು ಬೆಳೆಯುವ ಪ್ರದೇಶವಾದ ಶ್ರೀನಿವಾಸಪುರ ತಾಲೂಕಿನ ರೈತರು ಮಾವಿಗೆ ಬೆಂಬಲ ಬೆಲೆ ನೀಡುವಂತೆ ಮತ್ತು ನೆರೆಯ ಆಂಧ್ರದ ಚಿತ್ತೂರಿನಲ್ಲಿ ತೋತಾಪುರಿ ಮಾವು ಆಮದಿಗೆ ವಿಧಿಸಿರುವ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು, ಚಿತ್ತೂರು ಜಿಲ್ಲೆಯಲ್ಲಿ ತೋತಾಪುರಿ ಮಾವು ಆಮದಿಗೆ ವಿಧಿಸಿರುವ ನಿಷೇಧ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಸಿಎಂ ಪತ್ರ ಬರೆದಿದ್ದಾರೆ.