ಬೆಳ್ತಂಗಡಿ, ಅ.29: ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ (Dharmasthala case) ಸೌಜನ್ಯಾ ತಾಯಿ ಕುಸುಮಾವತಿ ಸೇರಿ 12 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನಮತಿ ಇಲ್ಲದಿದ್ದರೂ ಅಕ್ರಮ ಕೂಟ ಸೇರಿದ್ದರಿಂದ ಪ್ರಕರಣ ದಾಖಲಾಗಿದೆ.
ಅ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ ಸೌಜನ್ಯಾ ತಾಯಿ ಕುಸುಮಾವತಿ, ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಸೌಜನ್ಯಾ ಪರ ಹೋರಾಟಗಾರರ ವಿರುದ್ದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಸೌಜನ್ಯಾ ಪರ ಹೋರಾಟಗಾರರು ಅ.27ರಂದು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆಗಿರುವ ಗಡಿಪಾರು ಆದೇಶದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿಯಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಅಥವಾ ಮನವಿ ನೀಡಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಈ ನಡುವೆ ಅ.27ರಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಬಂದಿದ್ದವರನ್ನು ಪೊಲೀಸರು ತಡೆದಿದ್ದರು.
ಈ ಘಟನೆ ಬಗ್ಗೆ ಬೆಳ್ತಂಗಡಿ ಎಎಸ್‌ಐ ದುರ್ಗಾದಾಸ್ ನೀಡಿರುವ ದೂರಿನಂತೆ ಅನುಮತಿಯಿಲ್ಲದೆ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಬೆಳ್ತಂಗಡಿ ಮಿನಿವಿಧಾನ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ತಿಮರೋಡಿ ವಿರುದ್ಧದ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ತಡೆ ನೀಡಿತ್ತು. ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarodi) ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, ಮಧ್ಯಂತರ ತಡೆಯನ್ನು ನೀಡಿ ಆದೇಶಿಸಿತ್ತು.
ಈ ಸುದ್ದಿಯನ್ನೂ ಓದಿ | Fire Accident: ಕರ್ನೂಲ್ ದುರಂತ ಮಾಸುವ ಮುನ್ನವೇ ಮತ್ತೊಂದು ಪ್ರಕರಣ; ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅವಘಡ
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಿಕ್ಕಿರುವುದು ಏರ್ ಗನ್ ಆಗಿದೆ. ಅದಕ್ಕೆ ಲೈಸೆನ್ಸ್ ಅಗತ್ಯವಿಲ್ಲದಿದ್ದರೂ ಕೇಸ್ ದಾಖಲಿಸಲಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಮರೋಡಿ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ನವೆಂಬರ್ 3ನೇ ವಾರಕ್ಕೆ ಮುಂದೂಡಿಕೆ ಮಾಡಿತ್ತು.