ಉಜಿರೆ, ಮಾ. 28: ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಮಾತ್ರವಲ್ಲದೆ, ಪ್ರಾಯೋಗಿಕ ತರಬೇತಿ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಹೀಗಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿದ್ಯಾಸಂಸ್ಥೆಯ ಸಾಧನೆ ಪ್ರಶಂಸನೀಯ ಎಂದು ನಿಟ್ಟೆಯ ನಿವೃತ್ತ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (SDM College) ಇಂದ್ರಪ್ರಸ್ಥ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬರುತ್ತಿದೆ. ಶಿಕ್ಷಣ ಸಂಸ್ಥೆಗಳ ಜತೆಗೆ ವಿದ್ಯಾರ್ಥಿಗಳು ಶಿಸ್ತು, ಛಲ ಮತ್ತು ದೃಢಸಂಕಲ್ಪ ರೂಡಿಸಿಕೊಂಡು ವೃತ್ತಿಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಕುಮಾರ್ ಮಾತನಾಡಿ, ನಮ್ಮ ಎಸ್‌ಡಿಎಂ ಸಂಸ್ಥೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಿ ವಿದ್ಯಾಭ್ಯಾಸದ ಜತೆಗೆ ಮೌಲ್ಯಧಾರಿತ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 33 ವರ್ಷಗಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಡಾ. ಭಾಸ್ಕರ ಹೆಗಡೆ ಹಾಗೂ ಸಸ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಕುಂತಲಾ ಹಾಗೂ ಬೋಧಕೇತರ ಸಿಬ್ಬಂದಿ ಶಾಂತಿಪ್ರಸಾದ್ ಅವರಿಗೆ ಸ್ಮರಣಿಕೆ ನೀಡಲಾಯಿತು.
ರ‍್ಯಾಂಕ್ ವಿಜೇತರಿಗೆ, ಪಿಎಚ್‌ಡಿ ಪದವೀಧರರಿಗೆ, ವಿಶೇಷ ಸಾಧಕ ಅಧ್ಯಾಪಕರಿಗೆ, ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್ ಅಂಡ್ ರೇಂಜರ್ಸ್ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಅಭಿನಂದಿಸಲಾಯಿತು. ಈ ವೇಳೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಿದ್ದಪಡಿಸಿದ ಚಿಗುರು ಪತ್ರಿಕೆಯನ್ನು ಅನಾವರಣ ಮಾಡಲಾಯಿತು.
ಯಾದಗಿರಿ ಜಿಲ್ಲಾ ನ್ಯಾಯಾಲಯದ ವಿವಿಧ ಹುದ್ದೆಗಳಿಗೆ ನೇಮಕಾತಿ; SSLC ಪಾಸಾದವರಿಗೆ ಅವಕಾಶ
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ ಪ್ರತಿನಿಧಿಗಳು, ಡೀನ್‌ಗಳು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಸ್ವಾಗತಿಸಿ, ಉಪಪ್ರಾಂಶುಪಾಲೆ ನಂದಕುಮಾರಿ ಪಿ ವಂದಿಸಿ, ಕಾಲೇಜಿನ ಆಡಳಿತ ಕುಲಸಚಿವ ಪ್ರೊ. ಶ್ರೀಧರ ಎನ್ ಭಟ್ಟ ಮತ್ತು ತಂಡ ನಿರೂಪಿಸಿದರು.
ವರದಿ: ರಂಗು, ಚಿತ್ರದುರ್ಗ