ಉಜಿರೆ, ಅ. 2: ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪ್ರತ್ಯೇಕವಾಗಿ ನೋಡದೆ, ಎರಡನ್ನೂ ಸಮತೋಲನವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಕನಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಆಯುರ್ವೇದ ಇಎನ್‌ಟಿ, ಹೆಡ್ ಆ್ಯಂಡ್ ನೆಕ್ ಸ್ಪೆಷಲಿಸ್ಟ್ ಡಾ. ದೀನಮಂಜು ಶೆಟ್ಟಿ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಎಸ್‌ಡಿಎಂ ಕಾಲೇಜು, ಉಜಿರೆಯ ಪದವಿ ಮತ್ತು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಗುರುವಾರ ಸೆಮಿನಾರ್ ಹಾಲ್–2ರಲ್ಲಿ ಆಯೋಜಿಸಿದ್ದ ‘ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಆಯುರ್ವೇದದ ಪಾತ್ರ’ ಕುರಿತ ಅತಿಥಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಮನಸ್ಸು ಮತ್ತು ದೇಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನೂ ಒಟ್ಟಾಗಿ ಪರಿಗಣಿಸುವುದು ಆಯುರ್ವೇದದ ಪ್ರಮುಖ ಆಶಯವಾಗಿದೆ. ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಆತನ ಮಾನಸಿಕ ಸ್ಥಿತಿ ಹಾಗೂ ಆಹಾರ ಪದ್ಧತಿ ಬಹಳ ಪ್ರಮುಖವಾದ ಪ್ರಭಾವ ಬೀರುತ್ತವೆ. ಆಹಾರವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಜೀವನಕ್ಕಾಗಿ ಆತ್ಮ, ಇಂದ್ರಿಯಗಳು ಹಾಗೂ ಮನಸ್ಸು ಆರೋಗ್ಯಕರ ಸ್ಥಿತಿಯಲ್ಲಿರಬೇಕು ಎಂದು ಡಾ. ಶೆಟ್ಟಿ ತಿಳಿಸಿದರು.
ಮನೋವಿಜ್ಞಾನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕಾರ್ಯನಿರ್ವಹಿಸುವಾಗ ಕೇವಲ ಮಾನಸಿಕ ದೃಷ್ಟಿಕೋನಕ್ಕೆ ಸೀಮಿತವಾಗದೆ, ವ್ಯಕ್ತಿಯ ದೈಹಿಕ, ಸಾಮಾಜಿಕ ಹಾಗೂ ಇತರ ಆಯಾಮಗಳ ಕಡೆಗೂ ತಮ್ಮ ವೃತ್ತಿ ಬದುಕಿನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಕ್ಕರೆ ದಾಸ್ತಾನು 1,000 ಕ್ವಿಂಟಲ್ ಮೀರುವಂತಿಲ್ಲ; ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು. ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧೀರ್ ಕೆ.ವಿ. ಹಾಗೂ ಪದ್ಮಶ್ರೀ ಕೆ. ಮತ್ತು ಸ್ನಾತಕೋತರ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿನಿ ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿಎ ವಿದ್ಯಾರ್ಥಿ ಪೂರ್ಣಚಂದ್ರ ವಂದಿಸಿದರು.