ಬೆಳ್ತಂಗಡಿ, ಮೇ 27: ಧರ್ಮಸ್ಥಳದ ಪ್ರತಿಷ್ಠಿತ ಗ್ರಾಮೋದ್ಯೋಗ ಸಂಸ್ಥೆಯಾಗಿರುವ, ಬೆಳ್ತಂಗಡಿಯಲ್ಲಿರುವ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್ ಸಂಸ್ಥೆಯಲ್ಲಿ ರಿಲಯನ್ಸ್ ಜಿಯೊದ ಹೊಸ ಮೊಬೈಲ್ ಟವರ್ ಅನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಇದರೊಂದಿಗೆ ಈ ಪ್ರದೇಶದಲ್ಲಿ ರಿಲಯನ್ಸ್ ಜಿಯೊ ತನ್ನ ನೆಟ್‌ವರ್ಕ್ ಅನ್ನು ಬಲಪಡಿಸಿದೆ.
ಹೊಸದಾಗಿ ಉದ್ಘಾಟಿಸಲಾದ ಜಿಯೊ ಮೊಬೈಲ್ ಟವರ್‌ನಿಂದಾಗಿ ಈ ಕೈಗಾರಿಕಾ ಪಾರ್ಕ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕವು ಗಮನಾರ್ಹವಾಗಿ ವೃದ್ಧಿಸಲಿದೆ. ಇದು ಉದ್ಯಮಿಗಳು, ಮಹಿಳಾ ಸ್ವಸಹಾಯ ಗುಂಪುಗಳು, ಉದ್ಯೋಗಿಗಳು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಮತ್ತು ಸಂದರ್ಶಕರಿಗೆ ಪ್ರಯೋಜನಕಾರಿಯಾಗಲಿದೆ. ಉದ್ಯಮಗಳಿಗೆ ತಡೆರಹಿತ ಸಂವಹನ, ಡಿಜಿಟಲ್ ಸೌಕರ್ಯ, ಆನ್‌ಲೈನ್ ಕಲಿಕೆ, ವ್ಯಾಪಾರ ಕಾರ್ಯಾಚರಣೆಗಳು ಮತ್ತು ಸುಧಾರಿತ ಗ್ರಾಹಕ ಸೇವೆಗೆ ಸಹಕರಿಸಲಿದೆ.
ಸಿರಿ ಮಾತೃಶ್ರೀ ಕೈಗಾರಿಕಾ ಉದ್ಯಾನವನವು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಭಾಗವಾಗಿದೆ. ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀರೇಂದ್ರ ಹೆಗ್ಗಡೆ ಅವರ ಕನಸಿನ ಕೂಸು. ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸ್ಥಾಪನೆಗೊಂಡ ಈ ಸಂಸ್ಥೆ ಇಂದು ಅಕ್ಷರಶಃ ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಬೆಳ್ತಂಗಡಿ ಮತ್ತು ಸುತ್ತಮುತ್ತಲ ಊರಿನ ಮಹಿಳೆಯರು ಇಂದು ಭರವಸೆಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಿರಿ ಉತ್ಪನ್ನಗಳು ಇಂದು ರಾಜ್ಯವ್ಯಾಪಿ ಜನಪ್ರಿಯವಾಗಿವೆ.
ಸಂಸ್ಥೆಯ ವಹಿವಾಟಿನಲ್ಲಿ ಸಿಗುವ ಲಾಭಾಂಶವನ್ನು ಮತ್ತೆ ಸಂಸ್ಥೆಉದ್ಯೋಗಿಗಳು ಹಾಗೂ ಸಂಸ್ಥೆಯ ಅಭಿವೃದ್ಧಿಗೇ ಇಲ್ಲಿ ವಿನಿಯೋಗಿಸಲಾಗುತ್ತದೆ ಎನ್ನುವುದು ವಿಶೇಷ. ಈ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಉಡುಪುಗಳು, ಅಗರಬತ್ತಿಗಳು, ಆಹಾರ ಉತ್ಪನ್ನಗಳು, ಬೇಕರಿ ವಸ್ತುಗಳು, ರಾಗಿಯ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳು ಮತ್ತು ರೆಕ್ಸಿನ್ ಬ್ಯಾಗ್‌ಗಳು ಸೇರಿದಂತೆ ಸ್ಥಳೀಯವಾಗಿ ನಾನಾ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.
ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಗ್ರಾಮೀಣ ಸಮುದಾಯಗಳು, ಮಹಿಳಾ ಉದ್ಯಮಿಗಳು ಮತ್ತು ಸಣ್ಣ ವ್ಯವಹಾರಗಳನ್ನು ಸಬಲೀಕರಣಗೊಳಿಸುವಲ್ಲಿ ಡಿಜಿಟಲ್ ಮೂಲಸೌಕರ್ಯದ ಮಹತ್ವವನ್ನು ಮನಗಂಡಿದೆ. ಸುಧಾರಿತ ಇಂಟರ್‌ನೆಟ್ ಸಂಪರ್ಕವು ಶಿಕ್ಷಣ, ಡಿಜಿಟಲ್ ವಾಣಿಜ್ಯ, ಸಂವಹನ ಮತ್ತು ಜೀವನೋಪಾಯದ ಅವಕಾಶಗಳನ್ನು ಸಕ್ರಿಯಗೊಳಿಸುತ್ತದೆ. ಸ್ಥಳೀಯ ಉದ್ಯಮಗಳು ಮತ್ತು ಸ್ವ-ಸಹಾಯ ಗುಂಪುಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
18 ವರ್ಷ ಪೂರೈಸಿದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ಸಿಕ್ತು ವಿಶೇಷ ಗೌರವ
ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಹೆಚ್ಚಿನ ವೇಗದ ಡಿಜಿಟಲ್ ಸೇವೆಗಳನ್ನು ಒದಗಿಸಲು ರಿಲಯನ್ಸ್ ಜಿಯೋ ಕರ್ನಾಟಕದಾದ್ಯಂತ ತನ್ನ ನೆಟ್‌ವರ್ಕ್ ಜಾಲವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ತನ್ನ ಬಲಿಷ್ಠ ಮತ್ತು ವ್ಯಾಪಕವಾದ ನೆಟ್‌ವರ್ಕ್ ಮೂಲಸೌಕರ್ಯದೊಂದಿಗೆ, ಜಿಯೋ ತನ್ನ ಗ್ರಾಹಕರಿಗೆ ಅಡೆತಡೆಯಿಲ್ಲದ ಅನಿಯಮಿತ ಧ್ವನಿ ಮತ್ತು ಡೇಟಾ ಸೇವೆಗಳು ಮತ್ತು ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಹಲವಾರು ಡಿಜಿಟಲ್ ಸೇವೆಗಳನ್ನು ನೀಡುತ್ತದೆ. ಅನುಕೂಲಕರ ಸಿಮ್ ಮತ್ತು ಸರಳೀಕೃತ ಆನ್‌ಬೋರ್ಡಿಂಗ್ ಸೇವೆಗಳನ್ನು ನೀಡುತ್ತದೆ.