Dharamsthala: ಸತ್ಯವೇ ಸಮಾಜದ ನೈತಿಕತೆ-ಶ್ರದ್ಧೆಗೆ ಆಧಾರ: ಎಸ್ಐಟಿ ತನಿಖೆ ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ಕೊಲೆ ಮತ್ತು ಅತ್ಯಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿರುವುದನ್ನು ಧರ್ಮಸ್ಥಳ ಕ್ಷೇತ್ರ ಸ್ವಾಗತಿಸಿದೆ. ನಿಷ್ಪಕ್ಷ ತನಿಖೆಯಿಂದ ಸತ್ಯ ಬಯಲಾಗಬೇಕು ಎಂದು ಕ್ಷೇತ್ರದ ವಕ್ತಾರ ಪಾರ್ಶ್ವನಾಥ್ ಜೈನ್ ಹೇಳಿದ್ದಾರೆ. “ಸತ್ಯವೇ ಸಮಾಜದ ನೈತಿಕತೆ ಮತ್ತು ಶ್ರದ್ಧೆಗೆ ಆಧಾರ. ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆಯಾಗಿ, ಊಹಾಪೋಹಗಳು ನಿವಾರಣೆಯಾಗಲಿ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ (Dharamsthala) ಸಾಮೂಹಿಕ ಕೊಲೆ ಮತ್ತು ಅತ್ಯಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (Special Investigation Team) ರಚಿಸಿರುವುದನ್ನು ಧರ್ಮಸ್ಥಳ ಕ್ಷೇತ್ರ ಸ್ವಾಗತಿಸಿದೆ. ನಿಷ್ಪಕ್ಷ ತನಿಖೆಯಿಂದ ಸತ್ಯ ಬಯಲಾಗಬೇಕು ಎಂದು ಕ್ಷೇತ್ರದ ವಕ್ತಾರ ಪಾರ್ಶ್ವನಾಥ್ ಜೈನ್ (Parswanath Jain) ಹೇಳಿದ್ದಾರೆ. “ಸತ್ಯವೇ ಸಮಾಜದ ನೈತಿಕತೆ ಮತ್ತು ಶ್ರದ್ಧೆಗೆ ಆಧಾರ. ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆಯಾಗಿ, ಊಹಾಪೋಹಗಳು ನಿವಾರಣೆಯಾಗಲಿ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ "ಹಲವಾರು ಶವಗಳನ್ನು ಹೂತಿದ್ದೆ" ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು ತಿಳಿದು ಬಂದಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ. ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ "ಸತ್ಯ" ಆದ್ದರಿಂದ, ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ” ಎಂದು ಪಾರ್ಶ್ವನಾಥ್ ಜೈನ್ ತಿಳಿಸಿದ್ದಾರೆ.
ಇತ್ತೀಚೆಗೆ, ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸ್ವಯಂಪ್ರೇರಿತವಾಗಿ ಪೊಲೀಸ್ ಠಾಣೆಗೆ ಶರಣಾಗಿ, “ಪ್ರಭಾವಿಯೊಬ್ಬರ ಸೂಚನೆಯಂತೆ ನಾನು ಹಲವಾರು ಶವಗಳನ್ನು ಹೂತಿಟ್ಟಿದ್ದೇನೆ. ಪಾಪಪ್ರಜ್ಞೆಯಿಂದ ಸಾಕ್ಷಾಧಾರಗಳನ್ನು ಒದಗಿಸಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: Dharmasthala case: ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯಿಸಿದ್ದು, “ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಒಬ್ಬ ವ್ಯಕ್ತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾನೆ. ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬುರುಡೆ ಕಂಡ ಸ್ಥಳ ಮತ್ತು ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದ ಹೇಳಿಕೆಗಳನ್ನು ಪ್ರಸಾರ ಮಾಡಿವೆ” ಎಂದಿದ್ದಾರೆ. ಈ ಪ್ರದೇಶದಲ್ಲಿ ಅಸಹಜ ಸಾವು, ಕೊಲೆ, ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳ ಸಾಧ್ಯತೆಯನ್ನು ಪರಿಗಣಿಸಿ ರಾಜ್ಯ ಮಹಿಳಾ ಆಯೋಗದ ಕೋರಿಕೆಯಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗಿದೆ ಎಂದಿದ್ದಾರೆ.
ಎಸ್‌ಐಟಿಯು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ದೂರುಗಳು ಸೇರಿದಂತೆ, ರಾಜ್ಯದ ಇತರ ಠಾಣೆಗಳಲ್ಲಿ ದಾಖಲಾದ ಮತ್ತು ದಾಖಲಾಗುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ. ಈ ಆರೋಪಗಳು ಧರ್ಮಸ್ಥಳದ ಖ್ಯಾತಿಯ ಮೇಲೆ ಗೊಂದಲ ಸೃಷ್ಟಿಸಿವೆ. ಸತ್ಯಾಸತ್ಯತೆ ಬಯಲಿಗೆ ಬಂದು ಸಾರ್ವಜನಿಕರಿಗೆ ಸ್ಪಷ್ಟತೆ ದೊರಕಬೇಕು ಎಂದು ಧರ್ಮಸ್ಥಳ ಒತ್ತಾಯಿಸಿದೆ.