Drug mafia: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ; 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ
Drug mafia: ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದು, ಅವರ ಬಳಿಯ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ತಂದಿದ್ದ 75 ಕೋಟಿ ಮೌಲ್ಯದ 37.878 ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.


ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು (Drug mafia) ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿ, 75 ಕೋಟಿ ಮೌಲ್ಯದ 37.5 ಕೆಜಿ ತೂಕದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ(31) ಹಾಗೂ ಅಬಿಗೈಲ್ ಅಡೋನಿಸ್ (30) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿ, ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. 6 ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿ ಹೈದರ್ ಎಂಬಾತನನ್ನು ಬಂದಿಸಿದ್ದೆವು. ಆತನಿಂದ 15 ಗ್ರಾಂ ಡ್ರಗ್ ಜಪ್ತಿ ಮಾಡಲಾಗಿತ್ತು. ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಬಂಧನಕ್ಕೆ ಸಿಸಿಬಿ ಪೊಲೀಸರು ಆರು ತಿಂಗಳಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Assault Case: ಕಲಬುರಗಿಯಲ್ಲಿ ಹೀನ ಕೃತ್ಯ; ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ
ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ಪ್ರಜೆ ಪೀಟರ್‌ನನ್ನು ಬಂಧಿಸಿದ್ದೆವು. ಆತನಿಂದ 6 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ಮಾಹಿತಿಯಂತೆ ಮತ್ತೆ ಕಾರ್ಯಾಚರಣೆ ಮಾಡಿ ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದು, ಅವರ ಬಳಿಯ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ತಂದಿದ್ದ 75 ಕೋಟಿ ಮೌಲ್ಯದ 37.878 ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಜತೆಗೆ 4 ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳು-2, ಪಾಸ್‌ಪೋರ್ಟ್-2, ನಗದು ಹಣ 18,460 ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಈ ಆರೋಪಿಗಳು ಕಳೆದ ಒಂದು ವರ್ಷದಲ್ಲಿ 59 ಬಾರಿ ವಿದೇಶದಿಂದ ದೇಶಕ್ಕೆ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಎಂಡಿಎಂಎ ಸಾಗಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಷ್ಟು ಪ್ರಮಾಣದ ಎಂಡಿಎಂಎ ಸಾಗಾಟ ಮಾಡಲು ಸಾಧ್ಯವಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pak soldiers killed: ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರಿಂದ ಆತ್ಮಾಹುತಿ ಬಾಂಬ್ ಸ್ಫೋಟ; 90 ಸೈನಿಕರು ಬಲಿ