ಮಂಗಳೂರು: ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ (Tulu second official language) ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ (Cabinet Meeting) ಅನುಮೋದನೆ ನೀಡಿದೆ. ಈ ಬಗ್ಗೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.
ಮಂಗಳೂರು ನಗರದ ಪ್ರಜಾಸೌಧದಲ್ಲಿ ಇದೇ ಮೊದಲ ಬಾರಿ ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ತುಳು ಭಾಷೆಗೆ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಹಿಂದಿನ ಸರ್ಕಾರ ಯಾಕೆ ನಿರ್ಧಾರ ಮಾಡಲಿಲ್ಲ ಎಂದು ನಾನು ಪ್ರಶ್ನಿಸಲ್ಲ. ಆದರೆ, ನಮಗೆ ಒಂದು ಬದ್ಧತೆ ಇದೆ. ನಮ್ಮ ಸರ್ಕಾರದ ಚಿಂತನೆ ಏನೆಂದರೆ, ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಆ ದೃಷ್ಟಿಯಿಂದ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಿಂಗಳಲ್ಲಿ ಇದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಕರಾವಳಿಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
32,611 ಕೋಟಿ ವೆಚ್ಚದ ಯೋಜನೆಗಳಿಗೆ ಅನುಮೋದನೆ
ಸುಮಾರು 32,611 ಕೋಟಿ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಸುಮಾರು 16,000 ಕೋಟಿ ರೂ.ಗಳನ್ನು ಗ್ರಾಮೀಣಾಭಿವೃದ್ಧಿಗೆ ಮೀಸಲಿಡಲಾಗಿದೆ. ಉಳಿದ 16,000 ಕೋಟ ರೂ.ಗಳನ್ನು ಮಂಗಳೂರು, ಉಡುಪಿ ಸೇರಿ ಕರಾವಳಿ ಭಾಗಕ್ಕೆ ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.