ರಾಯಚೂರು: ಧರ್ಮಸ್ಥಳ ವಿರೋಧಿ (Dharmasthala case) ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಬುರುಡೆ ಕೇಸ್ ಷಡ್ಯಂತ್ರದ ಹಿಂದೆ ಕಾಣಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi ) ಯನ್ನು ಗಡಿಪಾರು ಮಾಡಲಾಗಿದ್ದು, ಅದರ ಬೆನ್ನಲ್ಲೇ ತಿಮರೋಡಿ ನಾಪತ್ತೆಯಾಗಿದ್ದಾರೆ. ನೋಟೀಸ್ ಸರ್ವ್ ಮಾಡಲು ಹೋದ ಪೊಲೀಸರಿಗೆ ತಿಮರೋಡಿ ಸಿಕ್ಕಿಲ್ಲ. ಈ ನಡುವೆ, ʼನಮ್ಮೂರಿಗೆ ತಿಮರೋಡಿ ಬೇಡʼ ಎಂದು ರಾಯಚೂರಿನ (Raichur) ಜನ ಪ್ರತಿಭಟನೆಗೆ ಇಳಿದಿದ್ದಾರೆ.
ಮಹೇಶ್ ಶೆಟ್ಟೆ ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಮಾಡಿದ ಹಿನ್ನೆಲೆ ಮಾನ್ವಿ ತಾಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆದಿದೆ. ಮಾನ್ವಿ ತಾಲೂಕಿಗೆ ಗಡಿಪಾರು ಆದೇಶ ರದ್ದುಪಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ʼನಮ್ಮ ರಾಯಚೂರಿನ ಪಕ್ಕದಲ್ಲೇ ರಾಘವೇಂದ್ರ ಸ್ವಾಮಿಗಳ ದೇಗುಲವಿದೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ಧರ್ಮಸ್ಥಳದ ಅಪಾರ ಭಕ್ತರಿದ್ದಾರೆ. ಹೀಗಾಗಿ ತಿಮರೋಡಿಯನ್ನು ನಮ್ಮೂರಿನ ಬದಲು ಕಾಡಿಗೆ ಕಳುಹಿಸಿʼ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಗೂಂಡಾಗಳಿಗೆ ರಾಯಚೂರು ಜಿಲ್ಲೆಯಲ್ಲಿ ಜಾಗವಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
32 ಕ್ರಿಮಿನಲ್ ಕೇಸ್‌ಗಳು, ಜೊತೆಗೆ ಕೀಳು ಮಟ್ಟದ ಪದಗಳ ಬಳಕೆ ತಿಮರೋಡಿಗೆ ಮುಳುವಾಗಿವೆ. ತಿಮರೋಡಿ ಕೇಸ್ ಹಿಸ್ಟರಿ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ. ಸೌಜನ್ಯ ಹೋರಾಟದಲ್ಲಿ ಧರ್ಮಸ್ಥಳದ ನಿಂದನೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ. ಮೈಕ್ ಮುಂದೆ ಬಂದಾಗಲೆಲ್ಲ ರಾಜಕೀಯ ನಾಯಕರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ತಿಮರೋಡಿ ಗೃಹ ಸಚಿವರನ್ನು ʼಗ್ರಹಚಾರ ಸಚಿವರುʼ ಎಂದು ನಿಂದಿಸಿದ್ದರು.
ಪೊಲೀಸ್ ಅಧಿಕಾರಿಗಳು, ಸಮಾಜದ ಗಣ್ಯರು ಸರ್ಕಾರ ನಡೆಸುತ್ತಿರುವ ಉನ್ನತ ಹುದ್ದೆಯ ರಾಜಕಾರಣಿಗಳ ಬಗ್ಗೆ ಅಸಾಂವಿಧಾನಿಕ ಪದಗಳನ್ನ ಬಳಸಿ ತುಚ್ಚವಾಗಿ ನಿಂದನೆ ಮಾಡಿದ್ದ ತಿಮರೋಡಿ ಗಡಿಪಾರಿಗೆ ಇದು ಕೂಡ ಕಾರಣ ಎನ್ನಲಾಗ್ತಿದೆ. ನೆಲದ ಕಾನೂನಿನ ಮೇಲೆ ಕಿಂಚಿತ್ತೂ ಭಯ ಹಾಗೂ ಗೌರವ ನೀಡದ ತಿಮರೋಡಿ ಮನೆಯಲ್ಲಿ ಶಸ್ತ್ರಾಸ್ತ್ರಗಳು ಕೂಡ ಪತ್ತೆಯಾಗಿದ್ದವು. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಗಡಿಪಾರು ಅದೇಶದಲ್ಲಿ ತಿಮರೋಡಿ ಕ್ರಿಮಿನಲ್ ಚಟುವಟಿಕೆಗಳ ಉಲ್ಲೇಖ ಮಾಡಲಾಗಿದೆ