ಮಂಗಳೂರು, ಜ.10: ನಮ್ಮತನ ಎನ್ನುವುದು ಬಹಳ ಸ್ವಾರ್ಥದ ಯೋಚನೆ ಆಗುತ್ತದೆ. ಮೌಲ್ಯಗಳು ಮಾತ್ರವಿದ್ದರೆ ಸಾಕು, ಇದು ನಂದು ಎನ್ನುವ ಭಾವನೆ ಬೇಡ. ಅದು ಬಿಟ್ಟು ಇನ್ನೇನೋ ಪ್ರಯತ್ನ ಮಾಡುತ್ತಿದ್ದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ನಟಿ, ಬರಹಗಾರ್ತಿ ಹಾಗೂ ನಿರ್ದೇಶಕಿ ರಂಜನಿ ರಾಘವನ್ ಹೇಳಿದರು. ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ (Mangaluru Lit Fest) 8ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ʼಕಲ್ಪನೆ, ಕಥನ, ಕ್ಯಾಮರಾʼ ಎಂಬ ಗೊಷ್ಠಿಯಲ್ಲಿ ಭಾಗವಹಿಸಿ, ಸಿನಿಮಾ ಹಾಗೂ ಬರವಣಿಗೆಯ ಕುರಿತು ಅವರು ಮಾತನಾಡಿದರು.
ಸಿನಿಮಾ ಮಾಡುವ ಹಿಂದಿನ ತಯಾರಿ ಬಗ್ಗೆ ಮಾತನಾಡಿದ ಅವರು, ‘ಕಲ್ಪನೆ ಮಾಡಲು ಒಂದು ರೂಪಾಯಿ ಕೂಡ ಖರ್ಚಾಗಲ್ಲ. ಕಥನ ಎಂದರೆ ಅದನ್ನು ಸ್ಕ್ರಿಪ್ಟ್ ಮಾಡಬೇಕು, ತಿದ್ದುಪಡಿ ಮಾಡಬೇಕು, ಇನ್ನೊಬ್ಬರಿಗೆ ಓದಲು ನೀಡಬೇಕು. ಬಳಿಕ ಇನ್ನೂ ಉತ್ತಮಗೊಳಿಸಬೇಕು. ಇಡೀ ಕೆಲಸಕ್ಕೆ ಸಣ್ಣ ಖರ್ಚಾಗುತ್ತದೆ. ಅದರ ಮುಂದಿನ ಹಂತ ಕ್ಯಾಮರಾ. ಇದಕ್ಕೆ ಬಹಳ ಖರ್ಚಾಗುತ್ತದೆ. ಈ ಹಂತದಲ್ಲಿ ವ್ಯವಹಾರದ ದೃಷ್ಟಿಯಲ್ಲಿ ಯೋಚನೆ ಮಾಡಬೇಕು. ಲಕ್ಷಾಂತರ ಜನರನ್ನು ಯೋಚನೆಯಲ್ಲಿಟ್ಟುಕೊಳ್ಳಬೇಕು. ಅವರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡಬೇಕು. ಇವೆಲ್ಲ ಆಗುವಾಗ ನಿರ್ದೇಶಕನ ಯೋಚನೆ ಬಹಳ ಸಣ್ಣದು ಎನಿಸುತ್ತದೆʼ ಎಂದು ಹೇಳಿದರು.
ಸಿನಿಮಾ ನಿರ್ದೇಶನಕ್ಕೆ ಬರುವ ಬಗ್ಗೆ ಮಾತನಾಡಿ, ʼನಟಿಯಾಗಿ ಕೆಲಸ ಮಾಡುವಾಗ ನನ್ನ ಅಭಿಪ್ರಾಯ ಯಾರೂ ಕೇಳಲ್ಲ ಎಂಬ ಭಾವನೆ ಬೇಸರ ಮೂಡಿಸಿತ್ತು. ಬಳಿಕ ಬರವಣಿಗೆ ಮೇಲೆ ಹೆಚ್ಚು ಗಮನ ನೀಡಲು ಶುರು ಮಾಡಿದೆ. ಹಾಗೆಯೇ ಕೆಲವು ಸಿನಿಮಾಗಳಿಗೆ ಸ್ಕ್ರೀನ್ ರೈಟರ್ ಆಗಿ ಕೆಲಸ ಮಾಡುವಾಗ ನಿರ್ದೇಶನ ಮಾಡಬೇಕು ಎಂಬ ಆಸೆ ಹುಟ್ಟಿತು. ಚಿತ್ರರಂಗದಲ್ಲಿ ನಟ/ನಟಿಯರಿಗೆ ಮಾತ್ರ ಸೆಟ್ ಅಲ್ಲಿ ಬಹಳ ಕಡಿಮೆ ಕೆಲಸ ಇರುತ್ತದೆ. ಸವಾಲುಗಳು ಬೇರೆ ಆದರೆ, ಸಮಯದ ದೃಷ್ಟಿಯಲ್ಲಿ ಅವರಿಗೆ ಕಡಿಮೆ ಕೆಲಸ. ಅಂತಹ ಸಂದರ್ಭದಲ್ಲಿ ದೃಶ್ಯಗಳ ಸಂಯೋಜನೆ, ತೆರೆ ಮೇಲೆ ತರುವ ಕಲೆಯನ್ನು ಕಲಿತು ಈಗ ನಿರ್ದೇಶನದವರೆಗೆ ಬಂದಿದೆʼ ಎಂದು ಹೇಳಿದರು.
ಉಪನಿಷತ್‌ನಲ್ಲಿಯೇ ಕಾಶಿ ಉಲ್ಲೇಖವಿದೆ, ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ: ಡಾ.ಮೀನಾಕ್ಷಿ ಜೈನ್
ಪೂರ್ವತಯಾರಿ
ಸಿನಿಮಾ ಮಾಡುವ ಸವಾಲಿನ ಬಗ್ಗೆ ಮಾತನಾಡಿದ ರಂಜನಿ, ʼಯಾವುದೇ ಸಿನಿಮಾಗೆ ಕಥೆಯೇ ಚೌಕಟ್ಟು. ಅದನ್ನು ಮೀರಿ ಏನೂ ಮಾಡಲು ಆಗುವುದಿಲ್ಲ. ಅದರೊಳಗೆ ಏನೇ ಉತ್ತಮಗೊಳಿಸಲು ಅವಕಾಶವಿರುತ್ತದೆ. ನನ್ನದೇ ತಂಡ ಆಗಿದ್ದರಿಂದ ಎಲ್ಲರಿಗೂ ಅವರವರ ಕೆಲಸ ಗೊತ್ತಿದ್ದರಿಂದ ನಾನು ಎಲ್ಲರಿಗೂ ಆದೇಶ ಮಾಡುವ ಸಂದರ್ಭ ಬರಲಿಲ್ಲʼ ಎಂದರು. ಈ ಸಿನಿಮಾ ಮಾಡುವ ಪೂರ್ವದಲ್ಲಿ ಇಟ್ಟುಕೊಂಡ ಯೊಚನೆ ಬಗ್ಗೆ ಅವರು, ʼಕಥೆಯಲ್ಲಿ ವಿಚಾರ ಇದೆಯೇ, ಈ ಕಥೆ ಈಗ ಪ್ರಸ್ತುತವೇ, ಇದನ್ನು ಮನರಂಜನಾತ್ಮಕವಾಗಿ ಹೇಳಬಹುದೇ ಎಂದಷ್ಟೇ ಯೋಚನೆ ಮಾಡುತ್ತೇನೆ. ಅದಕ್ಕೆ ಸಮರ್ಪಕ ಉತ್ತರ ಸಿಕ್ಕಿದ್ದಕ್ಕೆ ಸಿನಿಮಾ ಮಾಡುವ ಧೈರ್ಯ ಮಾಡಿದ್ದೇನೆ. ಯಾವುದೇ ವಿಚಾರ ಹೇಳುವವರಿಗೆ ಅದು ಅವರಿಗೆ ಕಾಡಿದ್ದರೆ ಮಾತ್ರ ಅವರು ಅದನ್ನು ಇನ್ನೊಬ್ಬರಿಗೆ ಆಪ್ತವೆನಿಸುವಂತೆ ತೆರೆ ಮೇಲೆ ತರಲು ಸಾಧ್ಯʼ ಎಂದು ಹೇಳಿದರು.
ಪ್ರಸ್ತುತ ಸವಾಲು
ಪ್ರಸ್ತುತ ಚಿತ್ರರಂಗದಲ್ಲಿ ಇರುವ ಸವಾಲುಗಳ ಬಗ್ಗೆ ಮಾತನಾಡಿದ ರಂಜನಿ, ʼಹಣವೇ ದೊಡ್ಡ ಪಾತ್ರ ನಿರ್ವಹಿಸುತ್ತದೆ ಈಗ. ಹಾಗೆಯೇ ಪಾತ್ರಗಳು ಹಾಗೂ ಅವರ ನಡವಳಿಕೆ ಈಗಿನವರಿಗೆ ಆಪ್ತವಾಗುವಂತೆ ಹೇಳಬೇಕು. ಉದಾಹರಣೆಗೆ, ಈ ಹಿಂದೆ ಮಹಿಳೆಯರನ್ನು ದೇವರಂತೆ ತೋರಿಸಲಾಗುತ್ತಿತ್ತು. ಆದರೆ, ಈಗ ಮಹಿಳೆಯರಿಗೆ ಪುರುಷರಷ್ಟೇ ಸ್ವಾತಂತ್ರ ಬೇಕು, ತಪ್ಪು ಮಾಡುವುದು ಸಹಜ ಎಂಬ ಮನೋಭಾವವಿದೆ. ಮಹಿಳೆಯರನ್ನು ಮಹಿಳೆಯಾಗಿ ನೋಡಲು ಇಷ್ಟಪಡುತ್ತಾರೆ ಹೊರತು ದೇವರಂತೆ ಅಲ್ಲ. ಇನ್ನು ಕೆಲವು ಪುರುಷರಲ್ಲಿಯೂ ಹೆಣ್ಣಿನಲ್ಲಿ ಸಾಮಾನ್ಯ ಎಂಬಂತಿರುವ ನಾಚಿಕೆ ಹಾಗೂ ಮೃದುವಾದ ಗುಣಗಳಿರುತ್ತವೆ. ಅದನ್ನು ಮುಕ್ತವಾಗಿ ಹೇಳುವ ಕಾಲದಲ್ಲಿದ್ದೇವೆ. ಹಾಗೆಯೇ ಮ್ಯಾಸ್ಕುಲೈನ್ ಎನರ್ಜಿ ಕೂಡ ಮಹಿಳೆಯರಲ್ಲಿರಬಹುದು. ಇವೆಲ್ಲವನ್ನೂ ಸಮರ್ಪಕವಾಗಿ ತೆರೆ ಮೇಲೆ ತಂದರೆ ಮಾತ್ರ ಜನರಿಗೆ ಆಪ್ತವಾಗುತ್ತದೆʼ ಎಂದು ಹೇಳಿದರು. ಹಾಗೆಯೇ ಸಿನಿಮಾ ಮಾಧ್ಯಮದ ಮೂಲಕವೇ ಕಥೆ ಹೇಳಬೇಕು ಎಂದೇನಿಲ್ಲ ಎಂದ ರಂಜನಿ, ʼಈಗ ಕಥೆಗಳನ್ನು ಇನ್ಸ್‌ಟಾಗ್ರಾಂ ರೀಲ್ಸ್ ಮೂಲಕ ಕೂಡ ಹೇಳಬೇಕು. ಪ್ರತಿ ರೀಲ್ ಹಿಂದೆ ಕೂಡ ಅಷ್ಟೇ ಶ್ರಮ ಆಗುತ್ತಿದೆ. ಸಿನಿಮಾದಲ್ಲಿ ಇರುವ ಅಚ್ಚುಕಟ್ಟುತನ ರೀಲ್ಸ್ ಅಲ್ಲಿ ಇಲ್ಲದಿರುವುದೇ ಅದು ಹೆಚ್ಚು ಸಹಜ ಹಾಗೂ ನೈಜವಾಗಿ ಮೂಡಿಬರುತ್ತದೆʼ ಎಂದರು.
Mangaluru Lit Fest: ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು ಕಾರಣ: ಶತಾವಧಾನಿ ಆರ್. ಗಣೇಶ್
ಬರಹಗಾರನಿಗೆ ಕಲ್ಪನೆ ಮುಖ್ಯ: ಪೂರ್ಣಿಮಾ ಸುರೇಶ್
ಬರವಣಿಗೆ ಹಾಗೂ ನಟನೆ ಬಗ್ಗೆ ಮಾತನಾಡಿದ “ಸು ಫ್ರಂ ಸೋ” ಖ್ಯಾತಿಯ ನಟಿ ಹಾಗೂ ಬರಹಗಾರ್ತಿ ಪೂರ್ಣಿಮಾ ಸುರೇಶ್, 'ಕಲೆ ಎಂದರೆ ಒಂದು ಸೆಳೆತ. ಬದುಕಲು ಬೇಕಾಗಿರುವ ದ್ರವ್ಯ ಕಲೆ. ಬದುಕಿನಲ್ಲಿ ಕಂಡ ಪಾತ್ರಗಳು, ಅನುಭವಗಳೆ ಸಿನಿಮಾದಲ್ಲಿ ಬರುವುದು. ಕಂಡಿದ್ದು, ಕಂಡ ಹಾಗೆ ಹೇಳಿದರೆ ವರದಿ ಆಗುತ್ತದೆ. ಅದಕ್ಕೆ ಕಲಾತ್ಮಕ ಸ್ಪರ್ಶ ಕೊಟ್ಟಾಗ ಬೇರೆ ರೂಪ ಪಡೆದುಕೊಳ್ಳತ್ತದೆ. ಬರಹಗಾರನಿಗೆ ಕಲ್ಪನೆ ಬೇಕೇ ಬೇಕುʼ ಎಂದು ತಿಳಿಸಿದರು.