ಮಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. (Moodubidire Police inspector Case) ಅವರನ್ನು ಅಮಾನತುಗೊಳಿಸಿ (Suspension) ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಜ್ಯ ಮಹಿಳಾ ಆಯೋಗವು, ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೊ ಮತ್ತು ಆಡಿಯೊದಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಲು ಸೂಚನೆ
ಈ ಪ್ರಕರಣದ ಬಗ್ಗೆ ಎರಡು ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಮಂಗಳೂರು ಕಮಿಷನರ್ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದರು. ಅಲ್ಲದೇ ಸದ್ಯ ಸಂತ್ರಸ್ತ ಮಹಿಳೆಯರು ಜೀವ ಭಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿದ್ದರು. ನಾನು ಸದಾ ಸಂತ್ರಸ್ತೆಯರ ಪರವಾಗಿರುತ್ತೇನೆ. ಇನ್ಸ್‌ಪೆಕ್ಟರ್ ಸಂದೇಶ್‌ರಿಂದ ಬೇರೆ ಯಾರಾದರೂ ಶೋಷಣೆಗೆ ಒಳಗಾಗಿದ್ದರೆ ಅವರು ಧೈರ್ಯವಾಗಿ ಬಂದು ದೂರು ನೀಡಲಿ ಎಂದು ನಾಗಲಕ್ಷ್ಮೀ ಚೌಧರಿ ತಿಳಿಸಿದ್ದರು.
ಏನಿದು ಪ್ರಕರಣ?
ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಹಲವು ಮಹಿಳೆಯರಿಂದ ಗಂಭೀರ ಆರೋಪಗಳು ಕೇಳಿಬಂದಿವೆ. ಕೌಟುಂಬಿಕ ಸಮಸ್ಯೆಗೆ ನ್ಯಾಯ ಕೇಳಲು ಹೋಗುವ ಮಹಿಳೆಯರಿಗೆ ಈ ಇನ್ಸ್‌ಪೆಕ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಮಹಿಳೆಯೊಬ್ಬರ ಗಂಡನನ್ನು ಬಂಧಿಸಿ ಬಳಿಕ ಆತನ ಬಿಡುಗಡೆಗೆ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ದುಡ್ಡು ಕೊಡದಿದ್ದರೆ ತನ್ನ ಜತೆ ಮಲಗಬೇಕು ಎಂದು ಕಿರುಕುಳ ನೀಡಿದ್ದರು ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಸಂತ್ರಸ್ತೆಯ ಮಗನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಫಸ್ಟ್ ರಿಯಾಕ್ಷನ್ ಏನು?
ಇಷ್ಟೇ ಅಲ್ಲದೇ ಮತ್ತಿಬ್ಬರು ಮಹಿಳೆಯರ ಜತೆ ಅಸಭ್ಯವಾಗಿ ನಡೆದುಕೊಂಡಿರುವ ಬಗ್ಗೆ ಆಡಿಯೊ ಮತ್ತು ವಿಡಿಯೊ ವೈರಲ್ ಆಗಿದ್ದರಿಂದ ಈ ಕೇಸ್ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಹೀಗಾಗಿ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.