ಮಂಗಳೂರು, ಅ.31: ಮಂಗಳೂರಿನ (Mangaluru) ಬಜ್ಬೆ ಬಳಿ ಮೇ 1ರಂದು ನಡೆದಿದ್ದ ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ (Suhas Shetty Murder case) ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ (Chargesheet) ಸಲ್ಲಿಕೆ ಮಾಡಿದೆ. ಈ ಚಾರ್ಜ್‌ಶೀಟ್‌ನಲ್ಲಿ ಸ್ಪೋಟಕ ಅಂಶಗಳನ್ನು ಎನ್ಐಎ ಉಲ್ಲೇಖಿಸಿದೆ. ಪ್ರಮುಖವಾಗಿ ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ಸದಸ್ಯರ ಕೈವಾಡ ಸ್ಪಷ್ಟವಾಗಿದೆ. ಈ ಕುರಿತು ಸ್ಫೋಟಕ ಮಾಹಿತಿಗಳನ್ನು ಎನ್ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 2025ರ ಮೇ 1ರಂದು ಬಜಪೆ ಬಳಿ ಸುಹಾಸ್ ಶೆಟ್ಟಿ ಹತ್ಯೆ ನಡೆದಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು ಮಾತ್ರವಲ್ಲ, ದಕ್ಷಿಣ ಕನ್ನಡದ ಹಲವು ತಾಲೂಕುಗಳು ಬಂದ್ ಆಗಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಈ ಹತ್ಯೆ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದ್ದ ಕಾರಣ, ಪ್ರಕರಣವನ್ನು ಗೃಹ ಇಲಾಖೆ ನಿರ್ದೇಶನದ ಮೇರೆಗೆ ಎನ್ಐಗೆ ಹಸ್ತಾಂತರ ಮಾಡಲಾಗಿತ್ತು.
ಪಿಎಫ್‌ಐ ಭಾರೀ ಸಂಚು
ಎನ್‌ಐಎ ತನಿಖೆಯಿಂದ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ಅತೀ ದೊಡ್ಡ ಸಂಚು ಇರುವುದು ಬಹಿರಂಗವಾಗಿದೆ. ಸುಹಾಸ್ ಶೆಟ್ಟಿಯ ಚಟುವಟಿಕೆಗಳ ಮೇಲೆ ಹಲವಾರು ತಿಂಗಳ ಕಾಲ ಕಣ್ಣಿಟ್ಟಿದ್ದ ತಂಡ ಭಾರಿ ಪ್ಲಾನ್ ಮಾಡಿತ್ತು. ಸುಹಾಸ್ ಶೆಟ್ಟಿ ಹತ್ಯೆ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ತಪ್ಪಿಸಿಕೊಂಡರೆ ಏನು? ಪ್ರತಿದಾಳಿಯಾದರೆ ಹೇಗೆ? ಎಲ್ಲವೂ ಮೊದಲೇ ಪ್ಲಾನ್ ಮಾಡಲಾಗಿತ್ತು. ಹತ್ಯೆಯ ದಿನ ಆರೋಪಿಗಳಿಂದ ಎರಡು ಕಾರುಗಳು ಬಳಕೆ ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಹಿಂಬಾಲಿಸಿ ಹತ್ಯೆ ಮಾಡಲಾಗಿದೆ. ಇನೋವಾ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಮತ್ತೊಂದು ವಾಹನದಿಂದ ಮುಂಭಾಗ ತಡೆ ಒಡ್ಡಲಾಗಿತ್ತು. ಹೀಗಾಗಿ ಸುಹಾಸ್ ಶೆಟ್ಟಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆ ಸಂಚಿನ ರೂವಾರಿ ಅಬ್ದುಲ್ ಸಫ್ವಾನ್ ಅಲಿಯಾಸ್ ಕಳವಾರು ಸಫ್ವಾನ್. ಈತ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಮಾಜಿ ಸದಸ್ಯನಾಗಿದ್ದಾನೆ. ನಿಷೇಧಿತ ಪಿಎಫ್ಐ ಸಂಘಟನೆ ಈಗಲೂ ಸಕ್ರಿಯವಾಗಿದೆ ಎಂಬುದು ಇದರಿಂದ ರುಜುವಾತಾಗಿದೆ.
ಇದನ್ನೂ ಓದಿ: NIA Raid: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 14 ಕಡೆ ಎನ್‌ಐಎ ದಾಳಿ
ಕಳವಾರು ಸಫ್ವಾನ್ ಜೊತೆ ಜೊತೆಗೆ ನಿಯಾಜ್ ಅಲಿಯಾಸ್ ನಿಯಾ, ಮಹಮ್ಮದ್ ಮುಸಾಮಿರ್ ಅಲಿಯಾಸ್ ಮಹಮ್ಮದ್ ಮುಸಾಮೀರ್, ಮಹಮ್ಮದ್ @ ಮುಜಮ್ಮಿಲ್, ನೌಶಾದ್ ಅಲಿಯಾಸ್ ವಾಮಂಜೂರ್ ನೌಶಾದ್ ಅಲಿಯಾಸ್ ಚೊಟ್ಟೆ ನೌಶಾದ್ ಹಾಗೂ ಮತ್ತೊಬ್ಬ ನಿಷೇಧಿದ ಪಿಎಫ್ಐ ಸದಸ್ಯ ಆದಿಲ್ ಮಹರೂಫ್ ಸಹಕಾರ ನೀಡಿದ್ದಾರೆ.
ಹಣಕಾಸು ಒದಗಿಸಿದ್ದುಆದಿಲ್ ಮಹರೂಫ್
ಆದಿಲ್ ಮಹರೂಫ್ (ಅಲಿಯಾಸ್ ಆದಿಲ್) ಈ ಸಂಚಿಗೆ ಹಣಕಾಸು ಒದಗಿಸಿದ್ದು ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಗಳೊಂದಿಗೆ ಕಲಂದರ್ ಶಾಫಿ ಅಲಿಯಾಸ್ ಮಂಡೆ ಶಾಫಿ, ಎಂ. ನಾಗರಾಜ ಅಲಿಯಾಸ್ ನಾಗ @ ಅಪ್ಪು, ರಂಜಿತ್, ಮಹಮ್ಮದ್ ರಿಜ್ವಾನ್ ಅಲಿಯಾಸ್ ರಿಜ್ಜು, ಅಜರುದ್ದೀನ್ ಅಲಿಯಾಸ್ ಅಜರ್ ಅಲಿಯಾಸ್ ಅಜ್ಜು, ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ತನಿಖೆ ಮುಂದುವರಿದಿದೆ. ನಿಷೇಧಿತ ಪಿಎಫ್ಐ ಸಂಘಟನೆ ದೇಶದಲ್ಲಿ ಸಕ್ರಿಯವಾಗಿರುವುದು ಹಾಗೂ ಹಲವಾರು ಸ್ಲೀಪರ್ ಸೆಲ್‌ಗಳು ಇದರ ಪರವಾಗ ಕಾರ್ಯಾಚರಿಸುತ್ತಿರುವುದು ಈ ಘಟನೆಯಿಂದ ಗೊತ್ತಾಗಿದೆ. ದೇಶದಲ್ಲಿ ಇನ್ನಷ್ಟು ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡಲಾಗಿದ್ದು, ಅವರನ್ನೂ ಹತ್ಯಗೈಯಲು ಸಂಚು ಹೆಣೆಯುತ್ತಿರುವುದು ಕೂಡ ತನಿಖೆಯಲ್ಲಿ ಕಂಡುಬಂದಿದೆ.