ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ಲವ್, ಸೆಕ್ಸ್, ದೋಖಾ ಪ್ರಕರಣಕ್ಕೆ (Puttur News) ಸಂಬಂಧಿಸಿ ಸಂತ್ರಸ್ತ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಮಗು ಜನಿಸಿ ಒಂದು ತಿಂಗಳು ಕಳೆದರೂ ಕಂದಮ್ಮನನ್ನು ನೋಡಲು, ಆರೋಪಿ ಯುವಕ ಕೃಷ್ಣ ಜೆ. ರಾವ್ ಮತ್ತು ಆತನ ಕುಟುಂಬಸ್ಥರೂ ಯಾರೂ ಬಾರದಿರುವುದು ಕಂಡುಬಂದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ಅಳಲು ತೋಡಿಕೊಳ್ಳುತ್ತಾ, ಕಣ್ಣೀರು ಹಾಕಿದ್ದಾಳೆ. ಅಲ್ಲದೇ ಸುಮ್ಮನೆ ಜೈಲಿನಲ್ಲಿ ಇರುವ ಬದಲು ಮದುವೆ ಆಗಲಿ ಎಂದು ಮನವಿ ಮಾಡಿದ್ದಾಳೆ.
ಮಗುವಿಗೆ ಒಂದು ತಿಂಗಳಾಯ್ತು. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ತಾಯಿ ಕೆಲಸಕ್ಕೆ ಹೋಗಲೇ ಬೇಕು. ನಮಗೆ ಆರ್ಥಿಕವಾಗಿ ಯಾರ ಬೆಂಬಲ ಇಲ್ಲ. ತಂದೆ ಮಾಡಿದ ತಪ್ಪಿಗೆ ಮಗುವಿಗ್ಯಾಕೆ ಶಿಕ್ಷೆ. ಸ್ಥಳ ಮಹಜರಿಗೆ ಹೋದಾಗಲೂ ಕೃಷ್ಣನ ತಂದೆ ಒರಟಾಗಿ ನಡೆದುಕೊಂಡರು. ಮಗುವಿನ ಮುಖವನ್ನೂ ನೋಡಿಲ್ಲ. ಸುಮ್ಮನೆ ಜೈಲಿನಲ್ಲಿ ಇರುವ ಬದಲು ಮದುವೆ ಆಗಲಿ. ಆತ ಜೈಲಿನಲ್ಲಿ ಇರೋದು ನನಗೂ ನೋವಾಗುತ್ತೆ. ದಯವಿಟ್ಟು ಹಠ ಬಿಟ್ಟು ಮದುವೆಯಾಗು ಎಂದು ಆರೋಪಿ ಕೃಷ್ಣ ಜೆ. ರಾವ್‌ಗೆ ಮನವಿ ಮಾಡಿದ್ದಾಳೆ.
ಏನಿದು ಪ್ರಕರಣ?
ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಆರೋಪಿ ಕೃಷ್ಣ ಜೆ. ರಾವ್, ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಗರ್ಭಿಣಿಯಾದ ವಿಚಾರ ತಿಳಿದು ಮದುವೆಯಾಗಲು ನಿರಾಕರಿಸಿದ್ದ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ರಾವ್ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಂತ್ರಸ್ತ ಯುವತಿ ಹಾಗೂ ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ಓದುವಾಗ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿಕೊಂಡಿದ್ದರು. 2024ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮನೆಯಲ್ಲಿ ಯಾರೂ ಇಲ್ಲದಾಗ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ. ಇದರಿಂದ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಯುವತಿ ಕೃಷ್ಣ ರಾವ್ ಗೆ ತಿಳಿಸಿದ್ದಳು. ಇದರಿಂದ ಮದುವೆಯಾಗಲು ಕೃಷ್ಣ ರಾವ್ ನಿರಾಕರಿಸಿದ್ದ.
ಈ ಸುದ್ದಿಯನ್ನೂ ಓದಿ | Belagavi News: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ; ಮೂವರ ಬಂಧನ
ಇದರಿಂದ ನೊಂದ ಯುವತಿ ಜೂನ್ 24ರಂದು ರಾತ್ರಿ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಕೃಷ್ಣ ರಾವ್ ತಲೆ ಮರೆಸಿಕೊಂಡಿದ್ದ. ಪುತ್ತೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು.