ಮಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಬಸ್ ನಿಲ್ದಾಣದಲ್ಲೇ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ (Bantwal Murder) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಂಟ್ವಾಳದ ಕಕ್ಕೆಪದವು ನಿವಾಸಿ ಲಾವಣ್ಯ ಮೃತ ಯುವತಿ. ಯುವತಿಯ ದೂರದ ಸಂಬಂಧಿ ಚೇತನ್ ಹತ್ಯೆಗೈದ ಆರೋಪಿಯಾಗಿದ್ದಾನೆ.
ಯುವತಿ ನಿರಾಕರಿಸಿದರೂ ಪ್ರೀತಿಸುವಂತೆ ಆರೋಪಿ ಚೇತನ್ ಒತ್ತಾಯಿಸುತ್ತಿದ್ದ. ಇಂದು ಲಾವಣ್ಯ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಕ್ಕೆಪದವು ಹೋಗುವ ಬಸ್ಸಿನಲ್ಲಿ ಕುಳಿತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿ ಬಂದ ಚೇತನ್ ಆಕೆಯನ್ನು ಬಸ್ಸಿನಿಂದ ಇಳಿಸಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಬಂಟ್ವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸ್ಥಳಕ್ಕೆ ಧಾವಿಸಿದ್ದು, ಪರಾರಿಯಾದ ಯುವಕನ ಬಂಧನಕ್ಕೆ ಎರಡು ತಂಡಗಳನ್ನು ರಚಿಸಿದ್ದಾರೆ.
ಗರ್ಭಿಣಿ ಪತ್ನಿಯನ್ನು ಕೊಂದು ಪತಿಯೂ ಆತ್ಮಹತ್ಯೆ!
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಗರ್ಭಿಣಿ ಪತ್ನಿಯನ್ನು ಗಂಡ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜಧಾನಿಯಲ್ಲಿ ನಡೆದಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ (Bengaluru Murder) ಬೆಳಕಿಗೆ ಬಂದಿದೆ. ಮನೋಜ್ (28), ಸ್ವಪ್ನ (26) ದಂಪತಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ದಂಪತಿ ಮನೋಜ್ ಮತ್ತು ಸ್ವಪ್ನ, ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಸ್ತುತ ಸ್ವಪ್ನ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಬೆಂಗಳೂರು ನಿವಾಸಿಯಾದ ಮನೋಜ್, ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಆದರೆ, ಈತ ಕಳೆದ ನಾಲ್ಕು ದಿನದಿಂದ ಕೆಲಸಕ್ಕೆ ಹೋಗಿರಲಿಲ್ಲ. ಇವತ್ತು ಮನೆಯಲ್ಲಿ ಹೆಂಡತಿ ಜೊತೆಗೆ ಗಲಾಟೆ ಶುರುಮಾಡಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿ ನಾಯಿಗೆ ಹಾಕುವ ಬೆಲ್ಟ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಮನೋಜ್ ಕೊಲೆ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ ಬಳಿಕ ಅದೇ ಬೆಲ್ಟ್‌ನಿಂದ ತಾನೂ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ-ಸೊಸೆಯ ಸಾವು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಸದ್ಯ ಮೃತದೇಹಗಳನ್ನ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.