ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕ ಗಂಧಾರ್ ಡೆತ್ ನೋಟ್ (Death Note) ಬರೆದು ಆತ್ಮಹತ್ಯೆ (Self harming) ಡಿಕೊಂಡಿದ್ದ. ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಮ್ಮ ಅಪ್ಪ ಅಣ್ಣ ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದ ಆ ಬಾಲಕ ಏಕಾಏಕಿ ನೇಣಿಗೆ ಶರಣಾಗಿದ್ದು ಎಲ್ಲರಿಗೂ ಶಾಕ್ ಆಗಿತ್ತು. ಆತ್ಮಹತ್ಯೆಗೆ ನಿಖರ ಕಾರಣವನ್ನು ಆತ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರಲಿಲ್ಲ. ಆದರೆ ಈ ಪ್ರಕರಣದ ತನಿಖೆಗೆ ಇಳಿದಾಗ (Bengaluru Crime News) ಹಲವರು ಶಾಕಿಂಗ್ ವಿಚಾರಗಳು ಮುನ್ನೆಲೆಗೆ ಬಂದಿವೆ.
"ನಾನು ಸ್ವರ್ಗ ಸೇರಿದ್ದೇನೆ, ನನಗಾಗಿ ಯಾರೂ ಅಳಬೇಡಿ. ಗುಡ್ ಬೈ ಅಮ್ಮ” ಎಂದು ಮುತ್ತು ಪೋಣಿಸಿದ ರೀತಿಯಲ್ಲಿ ಅಚ್ಚುಕಟ್ಟಾಗಿ ಮರಣ ಪತ್ರ ಬರೆದಿಟ್ಟು 13 ವರ್ಷದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯಕ್ಕೂ ಶಾಕಿಂಗ್ ಆಗಿತ್ತು. ರಾತ್ರಿ ಎಲ್ಲರ ಜೊತೆಗೆ ಊಟ ಮಾಡಿ ಗುಡ್ ನೈಟ್ ಹೇಳಿ ಮಲಗಲು ತನ್ನ ರೂಮಿಗೆ ತನ್ನ ಪ್ರೀತಿಯ ನಾಯಿ ರಾಕಿ ಜೊತೆಗೆ ಹೋಗಿದ್ದ.ತನ್ನ ಅಣ್ಣನ ಗಿಟಾರ್ ಅನ್ನು ಹಾಸಿಗೆ ಮೇಲಿಟ್ಟು, ಅದಕ್ಕೆ ಹೊದಿಸಿ ಅವನೇ ಮಲಗಿರುವಂತೆ ಕಾಣುವಂತೆ ಮಾಡಿದ್ದ. ಆಗಸ್ಟ್ 4ರ ಬೆಳಿಗ್ಗೆ 6 ಗಂಟೆಗೆ ಅವರ ಅಣ್ಣ ನೋಡಿದರೆ ಹಾಸಿಗೆ ಮೇಲೆ ಗಿಟಾರ್ ಇತ್ತು. ಗಿಟಾರ್ ನೇತು ಹಾಕುತ್ತಿದ್ದ ಜಾಗದಲ್ಲಿ ಇವನು ನೇತಾಡುತ್ತಿದ್ದ.
ಎಲ್ಲರೂ ಚುಪ್ಪಿ ಎಂದು ಪ್ರೀತಿಯಿಂದ ಇವನನ್ನು ಕರೆಯುತ್ತಿದ್ದರು. ಈತನ ತಂದೆ, ಮ್ಯೂಸಿಕ್ ಆರ್ಟಿಸ್ಟ್. ತಾಯಿ ಸವಿತಾ ಜಾನಪದ ಗಾಯಕಿ ಹಾಗೂ ಕಲಾವಿದೆ. ಕಳೆದ ಶುಕ್ರವಾರದಂದು ಅವರು ಕಾರ್ಯಕ್ರಮವೊಂದರ ನಿಮಿತ್ತ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ತಾಯಿ ದೂರದಲ್ಲಿದ್ದಾಗಲೇ ಈತ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾಗುವ ಮೊದಲು ಒಂದು ಡೆತ್ ನೋಟ್ ಬರೆದಿದ್ದ. ಈ ಡೆತ್ ನೋಟ್ ನೋಡಿದ ಎಲ್ಲರಿಗೂ ಶಾಕ್ ಆಗಿತ್ತು. ಅದರಲ್ಲಿ ಯಾವುದೇ ನೆಗಟಿವ್ ವಿಚಾರಗಳಿಲ್ಲ, ಯಾರ ಮೇಲೂ ಆರೋಪಗಳಿರಲಿಲ್ಲ. ಯಾವುದೇ ಸಮಸ್ಯೆ ಕೂಡ ಇರಲಿಲ್ಲ. ಹಾಗಿದ್ರೆ ಆ ಡೆತ್‌ನೋಟ್‌ನಲ್ಲಿ ಇದ್ದದ್ದೇನು?
ಡೆತ್‌ನೋಟ್‌ನಲ್ಲಿ ಏನಿತ್ತು?
"ಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರ ಯಾರೆಲ್ಲ ಓದುತ್ತಿದ್ದೀರಾ ಅಳಬೇಡಿ. ಈಗಾಗಲೇ ಸ್ವರ್ಗದಲ್ಲಿದ್ದೇನೆ, ಮತ್ತೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅನ್ನೋದು ನನಗೆ ತಿಳಿದಿದೆ. ನಿಮಗೆ ನೋವಾಗುತ್ತೆ ಅನ್ನೋದು ನನಗೆ ತಿಳಿದಿದೆ. ಈ ಮನೆ ಚೆನ್ನಾಗಿರಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಮೇಲೆ ನಿಮಗೆ ಕೋಪ ಬರುವಂತೆ ನಡೆದುಕೊಂಡಿದ್ದೇನೆ. ನನ್ನಿಂದ ನೊಂದಿದ್ದೀರಾ, ನಿಮಗೆ ತೊಂದರೆ ಕೂಡ ನೀಡಿದ್ದೇನೆ, ಆದರೆ ನನ್ನ ಉದ್ದೇಶ ನಿಮ್ಮನ್ನು ನೋಯಿಸೋದಾಗಿರಲಿಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ.
14 ವರ್ಷಗಳ ಕಾಲ ನಾನು ಬದುಕಿದ್ದು ಅದರಲ್ಲೇ ತೃಪ್ತನಾಗಿದ್ದೇನೆ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನಾನು ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೆ ತಿಳಿಸಿ. ನನ್ನ ಶಾಲಾ ಸ್ನೇಹಿತರಿಗೂ ಈ ಮಾತನ್ನ ಹೇಳಿ. ಐ ಮಿಸ್ ಯೂ ಆಲ್- ಗುಡ್ಬೈ ಅಮ್ಮ" ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದ ಗಂಧಾರ್.
ಈ ಪತ್ರದಲ್ಲಿದ್ದ ಪ್ರಬುದ್ಧತೆ ಶಾಕಿಂಗ್ ಆಗುವಂತಿತ್ತು. ಪೊಲೀಸರಿಗೂ ಇದು ಅನುಮಾನ ಮೂಡಿಸಿತ್ತು. 14 ವರ್ಷದ ಹುಡುಗ ಇಷ್ಟು ಕ್ಲಿಯರ್ ಆಗಿ ಮರಣಪತ್ರ ಬರೆಯೋಕೆ ಸಾಧ್ಯವಾ ಎಂಬ ಸಂದೇಹ ಮೂಡಿತ್ತು. ಆಗಲೇ ಅವರು ಆತನ ಇಂಟರ್‌ನೆಟ್ ಸರ್ಚ್ ಹಿಸ್ಟರಿ, ಆತ ನೋಡುತ್ತಿದ್ದ ವೆಬ್ ಸೀರೀಸ್ ಇತ್ಯಾದಿಗಳ ವಿವರ ಪಡೆದುಕೊಂಡರು. ಅಲ್ಲಿತ್ತು ಎಲ್ಲರೂ ಬೆಚ್ಚಿ ಬೀಳುವಂಥ ಇನ್ನೊಂದು ವಿಷಯ! ಆತ್ಮಹತ್ಯೆಯ ಕಾರಣವೂ ಅದರಲ್ಲೇ ಇತ್ತು.
ಡೆತ್‌ನೋಟ್ ಎಂಬ ಜಪಾನಿ ಸೀರೀಸ್
ಗಂಧಾರ್ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದ ಒಂದು ವೆಬ್ ಸೀರೀಸ್‌ನ ಎಲ್ಲಾ ಸಂಚಿಕೆಗಳನ್ನು ತಪ್ಪದೇ ನೋಡುತ್ತಿದ್ದ. ಅಷ್ಟೇ ಅಲ್ಲದೇ ಆ ವೆಬ್ ಸಿರೀಸ್‌ನಲ್ಲಿ ಬರುವ ಒಂದು ಪಾತ್ರದ ಚಿತ್ರವನ್ನು ಗಂಧಾರ್ ತನ್ನ ರೂಮಿನಲ್ಲಿ ಬಿಡಿಸಿದ್ದ. ರೂಮ್ ತುಂಬೆಲ್ಲಾ ಆತ ಈ ಸೀರೀಸ್‌ನ ಪೋಸ್ಟರ್‌ಗಳನ್ನು ಅಂಟಿಸಿಕೊಂಡಿದ್ದ. ಆ ಸೀರೀಸ್‌ನ ಹೆಸರೇ ಡೆತ್ ನೋಟ್. ಎಡೆಬಿಡದೆ ಇದನ್ನು ನೋಡುತ್ತಿದ್ದ ಗಂಧಾರ್‌ಗೆ ಇದೇ ಡೆತ್ ನೋಟ್ ಪ್ರೇರಣೆಯಾಗಿದೆ ಎಂದು ಇದೀಗ ಅನುಮಾನ ಮೂಡಿದೆ.
'ಡೆತ್ ನೋಟ್' ಇದು ಜಪಾನ್ ಮೂಲದ ಒಂದು ಆನಿಮೇಶನ್ ಟಿವಿ ಸರಣಿ. ತ್ಸುಗುಮಿ ಓಬಾ ಎಂಬವರು ಇದನ್ನು ಬರೆದಿದ್ದಾರೆ. ತೆತ್ಸುರೋ ಅರಾಕಿ ನಿರ್ದೇಶಿಸಿದ, ಮ್ಯಾಡ್‌ಹೌಸ್‌ನಿಂದ ಅನಿಮೇಟ್ ಮಾಡಲ್ಪಟ್ಟ 37 ಕಂತುಗಳ ಈ ಸರಣಿ ಜಪಾನ್‌ನ ನಿಪ್ಪಾನ್ ಟಿವಿಯಲ್ಲಿ 2006ರಿಂದ 2007 ರವರೆಗೆ ಪ್ರಸಾರವಾಯಿತು. ಈ ಸರಣಿ ನಂತರ ಗಳಿಸಿದ ಜನಪ್ರಿಯತೆಯಿಂದಾಗಿ ನೆಟ್‌ಫ್ಲಿಕ್ಸ್‌ಗೂ ಇದೀಗ ಬಂದಿದೆ. ಇದು ಮಂಗಾದ ಕಥೆಯನ್ನು ಆಧರಿಸಿದ್ದು, ಅಮೆರಿಕಾದಲ್ಲಿ ಕಾರ್ಟೂನ್ ನೆಟ್‌ವರ್ಕ್‌ನ ಅಡಲ್ಟ್ ಸ್ಟ್ರೀಮ್‌ನಲ್ಲಿ ಪ್ರಸಾರವಾಯಿತು. ಇದನ್ನು ಆಧರಿಸಿದ ಸಿನಿಮಾಗಳೂ ಬಂದಿವೆ.
ಲೈಟ್ ಯಾಗಮಿ ಎಂಬ ಪ್ರತಿಭಾವಂತ ಪ್ರೌಢಶಾಲಾ ವಿದ್ಯಾರ್ಥಿಗೆ, "ಡೆತ್ ನೋಟ್" ಎಂಬ ಒಂದು ಮ್ಯಾಜಿಕ್ ನೋಟ್‌ಬುಕ್ ಸಿಗುತ್ತದೆ. ಈ ನೋಟ್‌ಬುಕ್‌ನಲ್ಲಿ ಯಾವುದೇ ವ್ಯಕ್ತಿಯ ಹೆಸರು ಬರೆದು, ಅವರ ಮುಖದ ಚಿತ್ರವನ್ನು ಬಿಡಿಸಿದರೆ ಆ ವ್ಯಕ್ತಿಯನ್ನು ಕೊಲ್ಲಬಹುದು. ಆ ಮ್ಯಾಜಿಕ್ ಬುಕ್‌ನಲ್ಲಿ ಯಾರ ಹೆಸರು ಬರೆದು ಅವರು ಹೇಗೆ ಸಾಯಬೇಕು ಎಂದು ಊಹೆ ಮಾಡಿದರೆ ಆ ವ್ಯಕ್ತಿ ಆ ರೀತಿ ಸಾಯುತ್ತಾನೆ. ಬರೆಯುವವನಿಗೆ ಆ ವ್ಯಕ್ತಿಯ ಹೆಸರು ಮತ್ತು ಮುಖ ಗೊತ್ತಿರಬೇಕು. ಈ ಡೆತ್ ನೋಟ್‌ನ ಬಳಕೆಯಿಂದ ಲೈಟ್ ಅಪರಾಧಿಗಳನ್ನು ಸಾಯಿಸುತ್ತಾನೆ. "ಕಿರಾ" ಎಂಬ ಅಡಿಬರಹದಡಿ ಅಪರಾಧ-ಮುಕ್ತ "ಹೊಸ ಜಗತ್ತನ್ನು" ಸೃಷ್ಟಿಸಲು ಯತ್ನಿಸುತ್ತಾನೆ. ಇದರಿಂದ ಜಾಗತಿಕ ತನಿಖೆ ಆರಂಭವಾಗುತ್ತದೆ.
ಲೈಟ್ ಎಂಬ ನಾಯಕ ಮತ್ತು ಎಲ್ ಎಂಬ ಖಳನಾಯಕರ ನಡುವಿನ ತಂತ್ರಗಾರಿಕೆಯ ಯುದ್ಧದ ಈ ಕತೆಯ ಮಂಗಾ ಕಾಮಿಕ್ಸ್‌ನ 30 ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಗಳು ವಿಶ್ವಾದ್ಯಂತ ಮಾರಾಟವಾಗಿವೆ. ಪದಗಳಲ್ಲಿ ಆತ್ಮಗಳು ವಾಸಿಸುತ್ತವೆ ಎಂಬ ಜಪಾನಿನ ಸಾಂಪ್ರದಾಯಿಕ ಕಲ್ಪನೆಯನ್ನು ಈ ಸೀರೀಸ್ ಪೋಷಿಸುತ್ತದೆ. ಅಪರಾಧ ಯಾವುದು, ಯಾವುದು ನ್ಯಾಯ, ಯಾವುದು ಕೊಲೆ ಇತ್ಯಾದಿಗಳ ಬಗ್ಗೆ ಈ ಸರಣಿಯನ್ನು ನೋಡಿದವರಿಗೆ ಮಿಶ್ರ ಭಾವನೆ ಬರುವಂತಿದೆ. ಇದನ್ನು ನೋಡಿದ ಸಣ್ಣ ಮಕ್ಕಳಲ್ಲಿ ಖಿನ್ನತೆ, ಅನಗತ್ಯ ದುಸ್ಸಾಹಸ ಪ್ರವೃತ್ತಿ, ಆತ್ಮಹತ್ಯೆಯ ಯೋಚನೆ ಇತ್ಯಾದಿಗಳು ಮೂಡಿದ್ದು ವಿಶ್ವಾದ್ಯಂತ ಕಂಡುಬಂದಿದೆ.
ಅದರ ಮುಂದುವರಿದ ಭಾಗವೇ ಗಂಧಾರ್ ಆತ್ಮಹತ್ಯೆಯಾ ಎಂಬ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಜೊತೆಗೆ ಆಧ್ಯಾತ್ಮದ ಕಡೆಗೆ ಅತಿಯಾದ ಒಲವು ಇತ್ತು ಎಂದು ಕೂಡ ಹೇಳಲಾಗಿದೆ. ಬಾಲಕ ಗಂಧಾರ್ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಪೋಷಕರೇ, ಇದರಿಂದ ನೀವು ಕಲಿಯಬೇಕಾದ ಪಾಠ ಇಷ್ಟೇ. ನಿಮ್ಮ ಮಕ್ಕಳು ಮೊಬೈಲ್‌ನಲ್ಲಿ ಏನು ನೋಡ್ತಿದ್ದಾರೆ, ಎಷ್ಟು ನೋಡ್ತಿದ್ದಾರೆ, ಅದು ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರ್ತಿದೆ ಅನ್ನೋದನ್ನು ಚೆಕ್ ಮಾಡಿ. ಮಿತಿ ಮೀರಿ ಕ್ರೌರ್ಯದ, ಮೂಢನಂಬಿಕೆ ಬಿತ್ತುವ, ಅಪರಾಧದ ಸಿನಿಮಾ- ವೆಬ್ ಸೀರೀಸ್‌ಗಳನ್ನು ನೋಡೋಕೆ ಬಿಡಬೇಡಿ.
ಇದನ್ನೂ ಓದಿ: Self Harming: ಜಾನಪದ ಗಾಯಕಿಯ ಮಗ, 7ನೇ ತರಗತಿ ವಿದ್ಯಾರ್ಥಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ