Self Harming: ಜಾನಪದ ಗಾಯಕಿಯ ಮಗ, 7ನೇ ತರಗತಿ ವಿದ್ಯಾರ್ಥಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ
ʼ14 ವರ್ಷಗಳ ಕಾಲ ನಾನು ಬದುಕಿದ್ದು ಅದರಲ್ಲೇ ತೃಪ್ತನಾಗಿದ್ದೇನೆ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ' ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ

ಮೃತ ಗಾಂಧಾರ್

ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ (student death) ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿರುವ ಘಟನೆ ನಗರದ ಚೆನ್ನಮ್ಮನಕೆರೆ ಅಚ್ಚುಕಟ್ಟು (Bengaluru) ಪ್ರದೇಶದಲ್ಲಿ ನಡೆದಿದೆ. ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಳಗ್ಗೆ ತಂದೆ ಬಾಲಕನ ರೂಮ್ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಗಾಂಧಾರ್ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿ. ಸವಿತಾ ಅವರು ಕಳೆದ ಶುಕ್ರವಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದರು. ಸದ್ಯ ತಾಯಿ ವಾಪಸ್ ಬರುವವರೆಗೆ ಮರಣೋತ್ತರ ಪರೀಕ್ಷೆ ನಡೆಸದೇ ಇರಲು ತಿರ್ಮಾನಿಸಲಾಗಿದೆ.
ಡೆತ್‌ನೋಟ್‌ನಲ್ಲಿ ʼ14 ವರ್ಷಗಳಲ್ಲಿ ನಾನು ಖುಷಿಯಾಗಿದ್ದೆ, ಇಷ್ಟು ಸಾಕುʼ ಎಂದು ಹುಡುಗ ಬರೆದಿದ್ದಾನೆ. ಡೆತ್‌ನೋಟ್‌ನ ಪೂರ್ಣ ಪಾಠ ಇಲ್ಲಿದೆ:
ʼಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರ ಯಾರೆಲ್ಲ ಓದುತ್ತಿದ್ದೀರಾ ಅಳಬೇಡಿ. ಈಗಾಗಲೇ ಸ್ವರ್ಗದಲ್ಲಿದ್ದೇನೆ, ಮತ್ತೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅನ್ನೋದು ನನಗೆ ತಿಳಿದಿದೆ. ನಿಮಗೆ ನೋವಾಗುತ್ತೆ ಅನ್ನೋದು ನನಗೆ ತಿಳಿದಿದೆ. ಈ ಮನೆ ಚೆನ್ನಾಗಿರಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಮೇಲೆ ನಿಮಗೆ ಕೋಪ ಬರುವಂತೆ ನಡೆದುಕೊಂಡಿದ್ದೇನೆ. ನನ್ನಿಂದ ನೊಂದಿದ್ದೀರಾ, ನಿಮಗೆ ತೊಂದರೆ ಕೂಡ ನೀಡಿದ್ದೇನೆ, ಆದರೆ ನನ್ನ ಉದ್ದೇಶ ನಿಮ್ಮನ್ನು ನೋಯಿಸೋದಾಗಿರಲಿಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ.
14 ವರ್ಷಗಳ ಕಾಲ ನಾನು ಬದುಕಿದ್ದು ಅದರಲ್ಲೇ ತೃಪ್ತನಾಗಿದ್ದೇನೆ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನಾನು ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೆ ತಿಳಿಸಿ. ನನ್ನ ಶಾಲಾ ಸ್ನೇಹಿತರಿಗೂ ಈ ಮಾತನ್ನ ಹೇಳಿ. ಐ ಮಿಸ್ ಯೂ ಆಲ್- ಗುಡ್ಬೈ ಅಮ್ಮʼ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
ಸಾಲಬಾಧೆ ತಾಳಲಾರದೆ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಸಾಲಭಾದೆಯಿಂದ ಮನನೊಂದ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಹಲ್ಯಾಪುರ ಬಳಿ ನಡೆದಿದೆ. ಮನೆಯ ಬಳಿ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಲ್ಯಾಪುರ ಗ್ರಾಮದ ಗುಂಡನಾಯಕ (72) ಲಕ್ಷಮ್ಮ (58) ನೇಣು ಹಾಕಿಕೊಂಡವರು. ಮನೆ ಕಟ್ಟಿಸಲು ಗುಂಡನಾಯಕ ಮತ್ತು ಲಕ್ಷ್ಮಮ್ಮ ಸಾಲ ಮಾಡಿದ್ದರು. ಸಾಲಗಾರರ ಕಿರುಕುಳ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Peacocks Death: ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳು ನಿಗೂಢ ಸಾವು