ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಪಟ್ಟಂತೆ ಅಕ್ಟೋಬರ್ 31ರ ಒಳಗೆ ತನಿಖೆ ಪೂರ್ಣಗೊಳ್ಳಲಿದೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ (Home minister G Parameshwara) ಮಹತ್ವದ ಸುಳಿವು ನೀಡಿದ್ದು, ಅಕ್ಟೋಬರ್ 31ರ ಒಳಗಾಗಿ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್‌ನಲ್ಲಿ ಎಸ್ಐಟಿ ವರದಿ ನೀಡುವುದಾಗಿ ಹೇಳಿದೆ. ಅಕ್ಟೋಬರ್ 31ರ ಒಳಗೆ ತನಿಖಾ ವರದಿ ಕೊಡಬಹುದು. ಒಂದೆರಡು ದಿನ ಹಿಂದೆ ಮುಂದೆ ಆಗಬಹುದು ಅಷ್ಟೇ. ಎಲ್ಲವನ್ನು ಸೇರಿಸಿ ಕೊಡಲು ಹೇಳಿದ್ದೇವೆ. ಯಾವ ರೀತಿ ವರದಿ ಕೊಡುತ್ತಾರೆ ಎಂದು ನೋಡಬೇಕಿದೆ ಎಂದು ಜಿ ಪರಮೇಶ್ವರ್ ತಿಳಿಸಿದರು.
ಇದುವರೆಗೂ ಏನಾಗಿದೆ?
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯ ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಈ ನಡುವೆ ದೂರುದಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ವಿವರವಾದ ಹೇಳಿಕೆಯನ್ನೂ ನೀಡಿದ್ದ. ದೂರುದಾರ ತಾನೇ ಹೂತಿಟ್ಟಿದ್ದ ತಲೆ ಬುರುಡೆ ಎಂದು ಹೇಳಿ ಅಸ್ಥಿಪಂಜರದ ಸಮೇತ ದೂರು ಕೊಟ್ಟಿದ್ದ. ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಹೆಗಲಿಗೆ ಹಾಕಿತ್ತು. ಚಿನ್ನಯ್ಯನ ಹೇಳಿಕೆ ಮೇಲೆ ಎಸ್ಐಟಿ ತಂಡ 13ಕ್ಕೂ ಹೆಚ್ಚು ಪಾಯಿಂಟ್ಗಳಲ್ಲಿ ಅಸ್ಥಿಪಂಜರದ ಅವಶೇಷಗಳಿಗೆ ಉತ್ಖನನ ನಡೆಸಿದೆ. ಸಿಕ್ಕ ಅವಶೇಷಗಳನ್ನು ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡು ವಿಧಿವಿಜ್ಞಾನ ತನಿಖೆಗೆ ಕಳಿಸಿದ್ದರು.
ಇದನ್ನೂ ಓದಿ: Dharmasthala case: ತಿಮರೋಡಿ ಗಡೀಪಾರು ವಿಚಾರದಲ್ಲಿ ಸುಳ್ಳು ಪ್ರಸಾರ ಮಾಡಿದ ಜಯಂತ್ ಮೇಲೆ ಕೇಸು
ಈ ನಡುವೆ ಅನೇಕರ ವಿಚಾರಣೆ ನಡೆಸಿದ ಬಳಿಕ ದೂರುದಾರನನ್ನೇ ವಶಕ್ಕೆ ಪಡೆಯಲಾಗಿದ್ದು, ಇದೀಗ ದೂರುದಾರ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದಾನೆ. ದೂರುದಾರ ತೋರಿಸಿದ ಜಾಗದಲ್ಲಿ ಅನುಮಾನಾಸ್ಪದ ಅಸ್ಥಿಪಂಜರಗಳು ಸಿಗದ ಹಿನ್ನೆಲೆಯಲ್ಲಿ ಧರ್ಮಸ್ಥಳ ಕೇಸ್ ಹಿಂದೆ ಷಡ್ಯಂತ್ರ ಅಡಗಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ತ್ನ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನೂ ಚಿನ್ನಯ್ಯ ನೀಡಿದ್ದು, ಇದು ಧರ್ಮಸ್ಥಳ ಕ್ಷೇತ್ರದ ವಿರುದ್ಧದ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಲಾಗಿದೆ.
ಈ ನಡುವೆ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಗಳ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಹಾಗೂ ಎಂಡಿ ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ (Karnataka high court) ಅರ್ಜಿ ಸಲ್ಲಿಕೆಯಾಗಿದ್ದು ನ್ಯಾಯಾಲಯ ಈ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ತನಿಖಾ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ.