ಹುಬ್ಬಳ್ಳಿ: ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ವಿತರಿಸಿ, ಹೊಸ ಸೂರಿನಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತೆ ಶುಭ ಹಾರೈಸಿದರು.
ಈ ವೇಳೆ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಸಂತೋಷ್ ಲಾಡ್, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಹುಬ್ಬಳ್ಳಿ ಮನೆ ಪಡೆದ ಕೆಲವು ಫಲಾನುಭವಿಗಳ ಅನಿಸಿಕೆಗಳು
![]()
ನಾವು ಈ ಮನೆಗಾಗಿ ಬರೋಬ್ಬರಿ 13 ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದೆವು. ಅಂದಿನಿಂದ ಇಂದಿನವರೆಗೆ ನಮ್ಮ ಸ್ವಂತ ಮನೆಯ ಕನಸು ಕೈಗೂಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು, ಯೋಜನೆಯ ನಿಯಮದಂತೆ ಅಂದೇ 78 ಸಾವಿರ ರೂಪಾಯಿಗಳನ್ನು ಕಂತಿನ ರೂಪದಲ್ಲಿ ಪಾವತಿಸಲಾಗಿತ್ತು. ಈಗ ಮನೆ ಕೈಸೇರುತ್ತಿರುವುದು ನೆಮ್ಮದಿ ತಂದಿದೆ ಎಂದು ಅವರು ತಿಳಿಸಿದರು. ಇಷ್ಟು ವರ್ಷಗಳ ನಂತರ ನಮ್ಮ ಹಕ್ಕು ನಮಗೆ ಸಿಕ್ಕಿದೆ. ಹೊಸ ಮನೆಯನ್ನು ಹಸ್ತಾಂತರಿಸುತ್ತಿರುವ ಸರ್ಕಾರಕ್ಕೆ ನಾವು ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇವೆ.
ಸರೋಜಾದೇವಿ ನಾಗೇದ್ರಸಾ ಪೂಜಾರಿ, ಮಂಟೂರ ರಸ್ತೆ, ಹಬ್ಬಳ್ಳಿ
![]()
ದೈಹಿಕ ಅಶಕ್ತತೆಯಿಂದಾಗಿ ನಮಗೆ ಬೇರೆಯವರಂತೆ ದುಡಿಯಲು ಆಗುವುದಿಲ್ಲ. ಸ್ವಂತ ಮನೆ ಎಂಬುದು ನಮಗೆ ಕನಸಾಗಿತ್ತು. ನಮ್ಮ ಕಷ್ಟವನ್ನು ಅರಿತ ಸರ್ಕಾರವು ನಮಗೆ ಮನೆ ಮಂಜೂರು ಮಾಡಿದೆ. ಈಗ ನಾವ ನೆಮ್ಮದಿಯಿಂದ ತಲೆ ಚಾಚಲು ಒಂದು ಆಸರೆ ಸಿಕ್ಕಿದೆ.
ಮೋದಿನಸಾಬ ಜಂಡಿರಸಾಬ ಕಾಗದಗರ, A-8 Block HouseNo-1, ಹುಬ್ಬಳ್ಳಿ
![]()
ಇಷ್ಟು ದಿನ ಬಾಡಿಗೆ ಕಟ್ಟಲು ಸಾಧ್ಯವಾಗದೆ ನಾವು ಪಡಬಾರದ ಕಷ್ಟ ಪಟ್ಟಿದ್ದೇವೆ. ಸಂಸಾರ ನಡೆಸುವುದು ಒಂದು ದೊಡ್ಡ ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ನಮಗೆ ಕೇವಲ ಕನಸಿನ ಮಾತಾಗಿತ್ತು. ಆದರೆ ಇಂದು ನಮಗೆ ಆಸರೆಯಾಗಿ ನಿಂತು ಮನೆ ಕಟ್ಟಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇಂದಿನ ದುಬಾರಿ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬುದು ಗಗನಕುಸುಮವಾಗಿತ್ತು. ಆದರೆ ಸರ್ಕಾರದ ಈ ಯೋಜನೆಯು ಹಲವು ನಿರಾಶ್ರಿತ ಕುಟುಂಬಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಮ್ಮ ಆದಾಯವೆಲ್ಲ ಬಾಡಿಗೆಗೇ ಸರಿಯಾಗುತ್ತಿತ್ತು, ಇನ್ನು ಮನೆ ಕಟ್ಟಲು ಹಣ ಎಲ್ಲಿಂದ ತರುವುದು? ಎಂದು ಫಲಾನುಭವಿಗಳು ತಮ್ಮ ಹಳೆಯ ಕಹಿ ದಿನಗಳನ್ನು ನೆನಪಿಸಿಕೊಂಡರು. ನಿರಾಶ್ರಿತರಿಗೆ ಆದ್ಯತೆಯ ಮೇಲೆ ಮನೆ ಕಟ್ಟಿ ಕೊಡುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಇಂದು ನೂರಾರು ಕುಟುಂಬಗಳು ಸುರಕ್ಷಿತವಾದ ಸೂರಿನಡಿ ವಾಸಿಸುವಂತಾಗಿದೆ. ಕೇವಲ ಇಟ್ಟಿಗೆ-ಮಣ್ಣಿನ ಗೋಡೆಯಲ್ಲ, ಇದು ನಮಗೆ ಕುಟುಂಬಗಳ ಭವಿಷ್ಯದ ಭರವಸೆಯಾಗಿದೆ ಎಂದು ಹೇಳಿದರು.
ಸುಧಾ ಸೀತಾರಾಮ ಸರ್ವದೇ, A-4 Block HouseNo-3, ಹುಬ್ಬಳ್ಳಿ
![]()
ಮೂವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಬದುಕುತ್ತಾ ಸ್ವಂತ ಮನೆಯ ಕನಸನ್ನೇ ನಂಬಿಕೊಂಡಿದ್ದೆ. ಅನೇಕ ಬಾರಿ ಅರ್ಜಿ ಹಾಕಿ ನಿರಾಸೆಯಾದೆ. ಇಂದು ಕಾಂಗ್ರೆಸ್ ಸರ್ಕಾರ ನಮಗೆ ಮನೆ ಹಕ್ಕು ನೀಡಿರುವುದು ನಮ್ಮ ಕುಟುಂಬಕ್ಕೆ ಭದ್ರತೆ ತಂದಿದೆ. ಮಕ್ಕಳ ಭವಿಷ್ಯದ ಬಗ್ಗೆ ಇರುವ ಆತಂಕ ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ನಾನು ಮತ್ತು ನನ್ನ ಕುಟುಂಬ ಸದಾ ಋಣಿಯಾಗಿರುತ್ತೇವೆ. ನಮ್ಮಂತಹ ಸಾಮಾನ್ಯ ಜನರ ಬದುಕಿಗೆ ಆಸರೆಯಾದ ಸರ್ಕಾರಕ್ಕೆ ಧನ್ಯವಾದಗಳು.
ಪವನ ಪರಶುರಾಮ ಮುಂಡರಗಿ, ಹಕ್ಕು ಪತ್ರ ಫಲಾನುಭವಿ, ಪಡದಯ್ಯನ ಹಕ್ಕಲ, ಹುಬ್ಬಳ್ಳಿ
![]()
ಬಿಸಿಲಿನಲ್ಲಿ ಬೆಂದು ಸುಸ್ತಾದವನಿಗೆ ತಂಪಾದ ನೆರಳು ಸಿಕ್ಕಂತಾಗಿದೆ. ಇದು ಸರ್ಕಾರದಿಂದ ಮನೆ ಪಡೆದ ಫಲಾನುಭವಿಯೊಬ್ಬರ ಮನದಾಳದ ಮಾತುಗಳು. ದೀರ್ಘಕಾಲದ ಕಾಯುವಿಕೆಯ ನಂತರ ತಮಗೆ ಮಂಜೂರಾದ ಮನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ ಜನರು, ಸರ್ಕಾರದ ಈ ಜನಪರ ಕಾರ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಸಿಲಿನಲ್ಲಿ ಅಲೆಯುವವರಿಗೆ ನೆರಳು ಸಿಕ್ಕರೆ ಎಷ್ಟು ಖುಷಿಯಾಗುತ್ತದೆಯೋ, ಅಷ್ಟೇ ಸಂತೋಷ ನಮಗೆ ಈ ಮನೆ ಸಿಕ್ಕಿದ್ದಕ್ಕೆ ಆಗಿದೆ. ನಮಗೆ ಆಸರೆ ನೀಡಿದ ಸರ್ಕಾರಕ್ಕೆ ಧನ್ಯವಾದಗಳು. ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸರ್ಕಾರವು ಇತ್ತೀಚಿನ ದಿನಗಳಲ್ಲಿ ವಸತಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಮಲವ್ವ ಭರಮಪ್ಪ ಚಲವಾದಿ A-2 Block HouseNo-1 ಹುಬ್ಬಳ್ಳಿ
1.50 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಐತಿಹಾಸಿಕ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಅಧಿಕ ಜನಸ್ತೋಮ ಭಾಗವಹಿಸಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ರುಚಿ, ಶುಚಿಯಾದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮಕ್ಜೆ ಆಗಮಿಸಿದ್ದವರಿಗೆ ಶಿಸ್ತುಬದ್ಧವಾಗಿ ಆಹಾರ ವಿತರಣೆಗೆ ವ್ಯವಸ್ಥೆಗೆ ವ್ಯಾಪಕ ಸಿದ್ಧತೆ ಮಾಡಲಾಗಿತ್ತು. ರುಚಿಕರವಾದ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಶಿಸ್ತುಬದ್ಧವಾಗಿ ವಿತರಣೆ ಮಾಡಲಾಯಿತು. ಭಾರೀ ಜನಸಂದಣಿ ಇದ್ದರೂ ಸಹ, ಬೆಳಗ್ಗೆ 30 ಸಾವಿರಕ್ಕೂ ಅಧಿಕ ಜನರಿಗೆ ಉಪಹಾರ ವಿತರಿಸಲಾಯಿತು.
ಊಟ, ಉಪಹಾರ ವಿತರಣೆಗೆ ಒಟ್ಟು 124 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಬೆಳಗಿನ ಉಪಹಾರವಾಗಿ 30,000 ಜನರಿಗೆ ಉಪ್ಪಿಟ್ಟು ವಿತರಣೆ ಮಾಡಲಾಗಿದೆ. ನಂತರ ಮಧ್ಯಾಹ್ನದ ಊಟವಾಗಿ ಪಲಾವ್, ಮೊಸರನ್ನ, ಮೈಸೂರು ಪಾಕ್ ಹಾಗೂ ಸೇರುವಾ ನೀಡಲಾಯಿತು.
ಒಟ್ಟು 1.50 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಲ್ಲದೆ, 2 ಲಕ್ಷ ಜನರಿಗೆ ವಾಟರ್ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ, ಊಟದ ಸಿದ್ಧತೆಗಾಗಿ 300 ಜನ, ಊಟದ ವಿತರಣೆಗಾಗಿ 200 ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಯಕ್ಕೆ 150 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಊಟದ ನಂತರ ಜನರಿಗೆ ಕೈ ತೊಳೆಯುವ ವ್ಯವಸ್ಥೆಗೆ 20 ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗಿತ್ತು.
ಆಹಾರ ವಿತರಣೆಯಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅಡಿಗೆ ತಯಾರಿಕೆ, ಊಟ ಬಡಾವಣೆ ಮತ್ತು ಸ್ವಚ್ಛತಾ ಕಾರ್ಯಗಳು ವಿವಿಧ ವಿಭಾಗದ ಕಾರ್ಮಿಕರ ಸಮನ್ವಯದಿಂದ ನಡೆದವು. ಜನಸಂದಣಿ ಹೆಚ್ಚಿದ್ದರೂ ಸಹ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಒಟ್ಟಾರೆ ಭಾರೀ ಜನಸಾಗರದ ನಡುವೆಯೂ ಆಹಾರ ವ್ಯವಸ್ಥೆಯನ್ನು ಅತ್ಯುತ್ತಮವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಬಳಗಾನೂರಮಠ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ, ಜವಾಹರ ಜೋಗಿ, ಚೇತನಕುಮಾರ ಅವರ ನೇತೃತ್ವದಲ್ಲಿ ಸಮರ್ಥವಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲಾಯಿತು. ಅದ್ಭುತವಾದ ಕಾರ್ಯಕ್ರಮ ಮತ್ತು ರುಚಿಕರವಾದ ಊಟದಿಂದ ತೃಪ್ತರಾದ ಸಾರ್ವಜನಿಕರು, ಆಯೋಜಕರು ನಿರ್ವಹಿಸಿದ ಕಾರ್ಯವನ್ನು ಶ್ಲಾಘಿಸಿದರು.
ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ; ಸರ್ಕಾರದಿಂದ ಕಠಿಣ ಮಾರ್ಗಸೂಚಿ
ಖರ್ಗೆ ಭೇಟಿಯಾದ ಸಿಎಂ
ಕಾರ್ಯಕ್ರಮಕ್ಕೂ ಮುನ್ನಾ AICC ಅಧ್ಯಕ್ಷರೂ, ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹುಬ್ಬಳ್ಳಿ ಹೋಟೆಲಿನಲ್ಲಿ ಸಿಎಂ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ ಖಾನ್, ಮಾಜಿ ಸಚಿವರಾದ ನಾಗೇಂದ್ರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.