ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ; ಸರ್ಕಾರದಿಂದ ಕಠಿಣ ಮಾರ್ಗಸೂಚಿ

Fitness Certificate for Private buses: ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ

ಸಾಂದರ್ಭಿಕ ಚಿತ್ರ -

Prabhakara R
Prabhakara R Jan 23, 2026 11:10 PM

ಬೆಂಗಳೂರು: ಸ್ಲೀಪರ್ ಕೋಚ್ ಬಸ್‌ಗಳ ಅಗ್ನಿ ಅವಘಡಗಳ ಹೆಚ್ಚಳ ಹಾಗೂ ವಾಹನಗಳನ್ನು ಪರಿಶೀಲಿಸದೆ ನಿಯಮಬಾಹಿರವಾಗಿ ಸಾಮರ್ಥ್ಯ ಪ್ರಮಾಣಪತ್ರ (ಎಫ್‌ಸಿ) ನೀಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು, ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ (Fitness Certificate) ನೀಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು, ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾಗುವುದು. ರಾಜ್ಯದಲ್ಲಿ ಸಂಭವಿಸಿರುವ ಸ್ಲೀಪರ್ ಕೋಚ್ ಬಸ್‌ಗಳ ಅಗ್ನಿ ಅವಘಡಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಿಗೆ ಸುರಕ್ಷತಾ ಮಾನದಂಡಗಳು

  • ಚಾಲಕನ ಆಸನದ ಹಿಂಭಾಗದಲ್ಲಿ ತುರ್ತು ನಿರ್ಗಮನ ದ್ವಾರದ ವ್ಯವಸ್ಥೆ ಇರಬೇಕು
  • ಸ್ವೀಪರ್ ಬರ್ತ್‌ಗಳಲ್ಲಿ 'ಸೈಡರ್ ಓಪನ್' ಕಡ್ಡಾಯ
  • ಒಂದು ತಿಂಗಳೊಳಗೆ ಅಗ್ನಿ ಪತ್ತೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು
  • ಕನಿಷ್ಠ 10 ಕೆ.ಜಿ. ತೂಕದ ಅಗ್ನಿಶಾಮಕ ಉಪಕರಣಗಳನ್ನು ಬಸ್ ನಲ್ಲಿ ಇರಿಸಬೇಕು
  • ಬಸ್ ಕವಚ ನಿರ್ಮಾಣ ಸಂಸ್ಥೆಯ ಮಾನ್ಯತೆ ಪರಿಶೀಲನೆ ನಂತರವೇ ನೋಂದಣಿ ಪ್ರಕ್ರಿಯೆ
  • ಚಾಸಿಸ್‌ಗೆ ಅನಧಿಕೃತ ವಿಸ್ತರಣೆ ಮಾಡಲು ನಿರ್ಬಂಧ
  • ಅನುಮೋದಿತ ಪರೀಕ್ಷಾ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ

ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ: ರೇಬೀಸ್ ತಡೆಗಟ್ಟಲು ಈ ಮಾರ್ಗಸೂಚಿ ಪಾಲಿಸಿ

ನಿಯಮ ಬಾಹಿರವಾಗಿ ಎಫ್‌ಸಿ ನೀಡಿದ್ದ ಮೋಟಾರು ವಾಹನ ನಿರೀಕ್ಷಕ ಅಮಾನತು

ಬೆಂಗಳೂರು: ಗುಜರಾತ್ ರಾಜ್ಯದ ವಾಹನಗಳನ್ನು ಪರಿಶೀಲಿಸದೇ ನಿಯಮ ಬಾಹಿರವಾಗಿ ವಾಹನ ಸಾಮರ್ಥ್ಯ ಪ್ರಮಾಣಪತ್ರ ನೀಡಿದ್ದ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು.

ಗುಜರಾತ್‌ ರಾಜ್ಯದ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿದಾಗ, 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38-ಎ (ಎಫ್‌ಸಿ) ನೀಡಿರುವುದು ಕಂಡು ಬಂದಿತ್ತು. ಆದರೆ, ಅದೇ ದಿನ ಆ ವಾಹನಗಳು ಗುಜರಾತ್‌ನಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಿದ್ದವು. ಎಫ್‌ಸಿಯನ್ನು ನಿಸಾ‌ರ್ ಅಹಮದ್ ಅನುಮೋದಿಸಿರುವುದಾಗಿ ಗುಜರಾತ್‌ನ ಗಾಂಧಿನಗರ ಸಾರಿಗೆ ಆಯುಕ್ತರ ಕಚೇರಿಯ ಉಪ ನಿರ್ದೇಶಕ ತಿಳಿಸಿದ್ದರು.

ಈ ಮಾಹಿತಿ ಪಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತ ಎ.ಎಂ.ಯೋಗೇಶ್ ಅವರಿಗೆ ಸೂಚನೆ ನೀಡಿದ್ದರು. ಹೀಗಾಗಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.