10 ಮಹಿಳಾ ಜಸ್ಟೀಸ್‌ಗಳಿಂದ ಕಲಾಪ
ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆ
ಧಾರವಾಡ ಹೈಕೋರ್ಟ್‌ನ ಧಾರವಾಡ ಪೀಠ ಶನಿವಾರ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಬೆಳಗ್ಗೆಯಿಂದ ನಡೆದ ಕಲಾಪದಲ್ಲಿ ಎಲ್ಲ ನ್ಯಾಯಮೂರ್ತಿಗಳು ಮಹಿಳೆಯರೇ.! ಒಂದು ಕಡೆ ಮಹಿಳಾ ನ್ಯಾಯಮೂರ್ತಿಗಳೇ ಕಲಾಪ ನಡೆಸುತ್ತಿದ್ದರೆ, ಇನ್ನೊಂದೆಡೆ ಸರಕಾರದ ಪರ ಕೇಸನ್ನು ನಡೆಸಿದ್ದು ಕೂಡ ಮಹಿಳಾ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು.!
ಹೌದು, ಇದೀಗ ಸಂಸತ್ ಸೀಟುಗಳಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕು ಅನ್ನೋ ಚರ್ಚೆ ಮುಂಚೂಣಿಯಲ್ಲಿದೆ. ಇದೇ ವೇಳೆ ಧಾರವಾಡ ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ಮಹಿಳೆಯೇ ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು.
ಇನ್ನು ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಲು ಸಂಪೂರ್ಣ ಮಹಿಳಾ ಕಾನೂನು ಅಧಿಕಾರಿ ಗಳ ತಂಡವನ್ನು ನೇಮಿಸಿ ಅಡ್ವೋಕೇಟ್ ಜನರಲ್ ಕಚೇರಿ ಆದೇಶ ಮಾಡಿತ್ತು. ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿರುವ ಈ ವಿಶೇಷ ಶನಿವಾರದ ಕಲಾಪದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದರು. ಒಂದು ಕಡೆ ಮಹಿಳಾ ನ್ಯಾಯಮೂರ್ತಿಗಳು ಪ್ರಕರಣ ಗಳನ್ನು ವಿಚಾರಣೆ ನಡೆಸಿದರೆ, ಮತ್ತೊಂದೆಡೆ ಸರಕಾರದ ಪರವಾಗಿ ಸರಕಾರಿ ಮಹಿಳಾ ವಕೀಲರು ವಾದ ಮಂಡಿಸಿದರು. ಇನ್ನು ಈ ವಕೀಲರ ತಂಡದ ನೇತೃತ್ವವನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ವಹಿಸಿದ್ದರು.
ಇದನ್ನೂ ಓದಿ: Dharwad Rain: ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಧಾರವಾಡದ ಕಲಘಟಗಿ; ವಿಡಿಯೊ ವೈರಲ್
ಒಟ್ಟು ಏಳು ವಿಶೇಷ ಮಹಿಳಾ ನ್ಯಾಯಪೀಠಗಳ ಮುಂದೆ ಹಾಜರಾಗಿ ಸರಕಾರದ ವಾದ ಮಂಡಿಸಲು ಮಹಿಳಾ ಪರ ಸರಕಾರಿ ವಕೀಲರು ಹಾಗೂ ಹೈಕೋರ್ಟ್ ಸರಕಾರಿ ವಕೀಲರಿಗೆ ಪ್ರತ್ಯೇಕವಾಗಿ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು.
ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಹೆಚ್ಚುವರಿ ಸರಕಾರಿ ವಕೀಲರಾದ ನಂದಿನಿ ಸೋಮಾಪುರ, ಪ್ರಮೋಧಿನಿ ಕಿಶನ್, ಸಾವಿತ್ರಮ್ಮ, ಬಿ.ಪಿ. ರಾಧಾ, ಸುನಿತಾ ಸೆಕ್ವೇರಿಯಾ, ಮಮತಾ ಶೆಟ್ಟಿ, ಮಾಲಾ ಬಿ. ಭೂಟೆ, ವಿ.ಹೇಮಲತಾ, ಆರ್.ಕೆ. ಪ್ರತಿಭಾ, ಸರಕಾರಿ ವಕೀಲರಾದ ವಿ. ಸೂರ್ತಿ, ಗಿರಿಜಾ ಹಿರೇಮಠ, ರಶ್ಮಿ ಪಟೇಲ್, ರಶ್ಮಿ ರಾವ್, ಕೀರ್ತಿಲತಾ ಪಾಟೀಲ್, ರತ್ನಮಾಲಾ, ಎಸ್. ಚಾಂದನಿ, ಆರ್. ಸೌಮ್ಯ, ವಹೀದಾ, ಮತ್ತು ದೀಪ್ತಿ ಅಲ್ವಾ ಅವರನ್ನು ನಿಯೋಜನೆ ಮಾಡಲಾಗಿತ್ತು.
ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಗಳು ಇಡೀ ದಿನದ ಕಲಾಪಗಳು ನಡೆಸಿದವು. ಅದಕ್ಕಾಗಿ ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರತ್ಯೇಕ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ನ್ಯಾಯಪೀಠಗಳನ್ನು ರಚನೆ ಮಾಡಲಾಗಿತ್ತು.
ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾ. ಕೆ.ಜಿ. ಶಾಂತಿ ಅವರನ್ನೊಳಗೊಂಡ ಪೀಠವು ಎಲ್ಲ ವಿಭಾಗೀಯ ಪೀಠದಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ಪ್ರಾಥಮಿಕ ವಿಚಾರಣೆ, ಅರ್ಜಿಗಳು, ಆದೇಶಗಳು ಹಾಗೂ ಅಂತಿಮ ವಿಚಾರಣೆಯನ್ನು ನಡೆಸಿದವು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಅಧಿಸೂಚನೆಯಂತೆ ಹಿರಿಯ ನ್ಯಾ. ಅನು ಶಿವರಾಮನ್ ಹಾಗೂ ನ್ಯಾ. ಕೆ. ಜಿ. ಶಾಂತಿ, ನ್ಯಾ. ಜ್ಯೋತಿ ಮೂಲಿಮನಿ ಹಾಗೂ ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕೆನ್ನಾಗಂಟಿ ಹಾಗೂ ನ್ಯಾ. ಕೆ. ಎಸ್.ಹೇಮಲೇಖಾ ಅವರ ನೇತೃತ್ವದ ಮೂರು ವಿಭಾಗೀಯ ನ್ಯಾಯಪೀಠಗಳು ಕಲಾಪ ನಡೆಸಿದವು.
ಇದರ ಜತೆಗೆ ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾ ವಿತಸ್ತ ಗಂಜು, ನ್ಯಾ. ಕೆ. ಬಿ. ಗೀತಾ, ನ್ಯಾ. ರಾಜೇಶ್ವರಿ ಎನ್. ಹೆಗ್ಡೆ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠಗಳಲ್ಲಿ ಕಲಾಪಗಳು ನಡೆದವು.
ನ್ಯಾಯಾಂಗದ ಕ್ಷೇತ್ರಗಳಲ್ಲೂ ಮಹಿಳೆಯರ ದೃಷ್ಟಿಕೋನ ಅಗತ್ಯ
ಧಾರವಾಡ: ಕಾನೂನು ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅವರ ದೃಷ್ಟಿಕೋನಕ್ಕೆ ಮಹತ್ವ ನೀಡಬೇಕು ಎಂದು ನ್ಯಾಯಮೂರ್ತಿ ಅನು ಶಿವರಾಮನ ಹೇಳಿದರು. ಧಾರವಾಡ ಹೈಕೋರ್ಟ್ ಬೆಂಚ್ ಸಭಾಂಗಣದಲ್ಲಿ ಧಾರವಾಡ ಬೆಂಚ್ ವಕೀಲರ ಸಂಘ ಉದ್ಘಾಟಿಸಿ ಮಾತನಾಡಿದರು.
ಕುಟುಂಬ, ಪೋಕ್ಸೋ, ಸೇವಾ, ತೆರಿಗೆ, ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎಲ್ಲ ರೀತಿಯ ಪ್ರಕರಣಗಳ ವಿಚಾರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ದೃಷ್ಟಿಕೋನ ಅಗತ್ಯವಾಗಿದೆ. ಕಾನೂನಿನ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ದೃಷ್ಟಿಕೋನ ಸೇರಿದ್ದಾಗ ಮಾತ್ರ ನ್ಯಾಯಾಂಗ ವ್ಯವಸ್ಥೆ ಹೆಚ್ಚು ಸಮಗ್ರ, ಸಮಾನ ಹಾಗೂ ನ್ಯಾಯಯುತವಾಗಿರುತ್ತದೆ ಎಂದರು.
ನ್ಯಾಯಮೂರ್ತಿ ಪಿ.ಎಸ್ ಹೇಮಲೇಖಾ ಮಾತನಾಡಿ, ಕೆಲವು ನಿರ್ದಿಷ್ಟ ಕಾನೂನು ಕ್ಷೇತ್ರಗಳಲ್ಲಿ ಮಹಿಳೆಯರೇ ಇರಬೇಕು ಎಂಬ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ, ಮಹಿಳೆಯರು ಲಿಂಗ-ತಟಸ್ಥ ವೃತ್ತಿಪರರಾಗಿ ಸಮಾಜದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸುತ್ತಿದ್ದು, ಪುರುಷರಿಗೆ ಸಮಾನವಾಗಿ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ನ್ಯಾಯಮೂರ್ತಿ ಎಸ್. ಸುನಿಲ್ ದತ್ತ ಯಾದವ ಮಾತನಾಡಿದರು. ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ, ನ್ಯಾಯಮೂರ್ತಿ ಲಲಿತಾ ಕೆನ್ನಗಂಟೆ, ನ್ಯಾಯಮೂರ್ತಿ ಡಾ. ಚಿನುಕೂರು ಸುಮಲತಾ, ನ್ಯಾಯಮೂರ್ತಿ ತಾರಾ ಗಂಜೂರ, ನ್ಯಾಯಮೂರ್ತಿ ರಾಜೇಶ್ವರಿ. ಎನ್. ಹೆಗಡೆ, ನ್ಯಾಯಮೂರ್ತಿ ಗೀತಾ ಕೆ.ಬಿ, ನ್ಯಾಯಮೂರ್ತಿ ಕೆ.ಜಿ ಶಾಂತಿ, ನ್ಯಾಯಮೂರ್ತಿ ನರೇಂದ್ರ ಪ್ರಸಾದ, ನ್ಯಾಯಮೂರ್ತಿ ಪಿ. ಶ್ರೀಸುಧಾ ಹಾಗೂ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಇದ್ದರು.