ಧಾರವಾಡ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಬೌದ್ಧ ಸನ್ಯಾಸಿ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಏಪ್ರಿಲ್ 29 ರಂದು ಧಾರವಾಡದ ಹಳಿಯಾಳ ರಸ್ತೆಯಲ್ಲಿ ಬೌದ್ಧ ಸನ್ಯಾಸಿಯ ಶವ ಪತ್ತೆಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ನಿವಾಸಿ ತಾಶಿ ದೊಂದೂಪ (49) ಕೊಲೆಯಾಗಿದ್ದ ಬೌದ್ಧ ಸನ್ಯಾಸಿ. ಕೇಸ್ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಮೃತದೇಹದ ಮುಖದ ಮೇಲೆ ಗಾಯವಿದ್ದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎಂದು ಗೊತ್ತಾಗಿತ್ತು. ಮೂವರು ಹಂತಕರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅರೆಸ್ಟ್ ಆಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಂಕೇತ್ ಯಾದವ್ (24), ವೈಭವ್ ಚವ್ಹಾನ್ (30), ಸಿದ್ದೇಶ್ ಬೋಸ್ಲೆ(19) ಎಂಬುವರನ್ನು ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಗುಂಜನ್ ಆರ್ಯ, ಏಪ್ರಿಲ್ 29ರಂದು ಮಧ್ಯಾಹ್ನ ಹಳಿಯಾಳ ಸೇತುವೆ ಬಳಿ ಅನಾಮಿಕ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಬಂದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದರು. ಅದು ಸ್ವಾಭಾವಿಕ ಸಾವಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಶವದ ಗುರುತು ಪತ್ತೆ ಹಚ್ಚುವ ಸಲುವಾಗಿ ಮುಂಡಗೋಡು ಬೌದ್ಧ ಕ್ಯಾಂಪ್ ಅನ್ನು ಸಂಪರ್ಕಿಸಿದ್ದೆವು. ಅವರು ಶವ ಗುರುತು ಪತ್ತೆ ಹಚ್ಚಿದ್ದರು. ಹೆಚ್ಚಿನ ತನಿಖೆ ಕೈಗೊಂಡು, ಈ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.
ಗಂಡನನ್ನು ಬಿಟ್ಟು ಬರದಿದ್ದಕ್ಕೆ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಂದ ಲವರ್!
ಮುಂಡಗೋಡದಲ್ಲಿ ಕೊಲೆ ಮಾಡಿದ ಹಂತಕರು ಕಾರಿನಲ್ಲಿ ಶವದೊಂದಿಗೆ ಕೊಲ್ಹಾಪುರದತ್ತ ಪಯಣ ಬೆಳೆಸಿದ್ದರು. ಆದರೆ ಮಾರ್ಗಮಧ್ಯೆ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಕಾರಿನ ಚಲನವಲನ ಗಮನಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಣದ ಉದ್ದೇಶದಿಂದ ನಡೆದ ಕೊಲೆ ಇದಾಗಿದ್ದು, ಸನ್ಯಾಸಿ ಬಳಿ ಹಣವಿದೆ ಎಂದು ಆರೋಪಿಗಳು ಅಪಹರಿಸಿದ್ದರು. ಸನ್ಯಾಸಿ ಬಳಿ ಹಣ ಸಿಗದ ಹಿನ್ನೆಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರನ್ನು ಪತ್ತೆ ಹಚ್ಚಿ, ಪ್ರಕರಣ ಭೇದಿಸಲಾಯಿತು ಎಂದು ಹೇಳಿದರು.