Cylinder Blast: ಸಿಲಿಂಡರ್ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8ಕ್ಕೆ ಏರಿಕೆ
Cylinder Blast: ಸಿಲಿಂಡರ್ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಹರೀಶ್ ಕೇರ
December 31, 2024
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ (hubballi news) ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ (Gas Cylinder Blast) ಗಾಯಗೊಂಡವರು ದಿನಕ್ಕೊಬ್ಬರಂತೆ ಮೃತಪಡುತ್ತಿದ್ದು, ಮಂಗಳವಾರ ಬೆಳಗ್ಗೆ ಮತ್ತೊಬ್ಬರು ಮೃತಪಡುವ ಮೂಲಕ ಸಾವಿನ ಸಂಖ್ಯೆ 8ಕ್ಕೇರಿದೆ.
ಹುಬ್ಬಳ್ಳಿಯಲ್ಲಿ ಅಗ್ನಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ಪ್ರಕಾಶ ಬಾರಕೇರ (42) ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ ತೇಜಸ್ವರ್ (27) ಮೃತಪಟ್ಟಿದ್ದರು. ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇದೀಗ 9 ಗಾಯಾಳುಗಳ ಪೈಕಿ ಕಿಮ್ಸ್ನಲ್ಲಿ ಓರ್ವ ಗಾಯಾಳು ಮಾಲಾಧಾರಿಗೆ ಚಿಕಿತ್ಸೆ ಮುಂದುವರಿದಿದೆ.
ಮೃತ ಪ್ರಕಾಶ ಬಾರಕೇರ, ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದಾರೆ. ಸೋಮವಾರ ರಾತ್ರಿ ರಾಮನಗರ ನಿವಾಸಿ 26 ವರ್ಷದ ತೇಜಸ್ವರ್ ಸಾತರೆ ಉಸಿರು ಚೆಲ್ಲಿದ್ದಾರೆ. ಮೃತ ತೇಜಸ್ವರ್ 3 ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕುತ್ತಿದ್ದರು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕಿಮ್ಸ್ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಡಿಸೆಂಬರ್ 22ರಂದು ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿದೆ. 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಬೆಂಕಿಯಲ್ಲಿ ಬೆಂದು ಕಿಮ್ಸ್ ಆಸ್ಪತ್ರೆ ಸೇರಿದ್ದರು. ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಗಾಯಾಳುಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಇದೀಗ ಒಬ್ಬ ಗಾಯಾಳು ಮಾತ್ರ ಬದುಕುಳಿದಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: LPG cylinder Blast: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ; ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ 7ಕ್ಕೆ ಏರಿಕೆ