ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Online Reception: ಇಂಡಿಗೋ ವಿಮಾನ ರದ್ದು; ಹುಬ್ಬಳ್ಳಿಯಲ್ಲಿ ವಧು-ವರನಿಲ್ಲದೇ ನಡೆಯಿತು ಆರತಕ್ಷತೆ, ಆನ್‌ಲೈನ್‌ನಲ್ಲೇ ಆಶೀರ್ವಾದ!

Hubli News: ಬೆಂಗಳೂರಿನಲ್ಲಿ ಸಾಫ್ಟ್‌ವೇರ್​ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಯುವಕ-ಯುವತಿ ಮದುವೆ ಭುವನೇಶ್ವರದಲ್ಲಿ ನ.23ರಂದು ನಡೆದಿತ್ತು. ವಧುವಿನ ತವರು ಹುಬ್ಬಳ್ಳಿಯ ಡಿ.3ರಂದು ಆರತಕ್ಷತೆ ಆಯೋಜಿಸಲಾಗಿತ್ತು. ಆದರೆ, ಇಂಡಿಗೋ ವಿಮಾನ ರದ್ದಾಗಿದ್ದರಿಂದ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ವಧು-ವರ ಇಲ್ಲದೆಯೇ ಆರತಕ್ಷತೆ ನಡೆದಿದೆ.

ಇಂಡಿಗೋ ವಿಮಾನ ರದ್ದು; ಆನ್‌ಲೈನ್‌ನಲ್ಲೇ ನಡೆಯಿತು ಆರತಕ್ಷತೆ!

ಆನ್‌ಲೈನ್‌ ಮೂಲಕ ಆರತಕ್ಷತೆಯಲ್ಲಿ ಭಾಗಿಯಾದ ಟೆಕ್ಕಿ ದಂಪತಿ. -

Prabhakara R
Prabhakara R Dec 5, 2025 8:14 PM

ಹುಬ್ಬಳ್ಳಿ, ಡಿ.5: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ನಡುವೆ ವಿಮಾನ ರದ್ದಾದ ಕಾರಣ ವಧು-ವರ ಇಲ್ಲದೆಯೇ ಆರತಕ್ಷತೆ ಕಾರ್ಯಕ್ರಮ (Hubli News) ನಡೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸಮಾರಂಭಕ್ಕೆ ಆನ್‌ಲೈನ್‌ನಲ್ಲೇ ಮದುಮಕ್ಕಳು ಭಾಗಿಯಾಗಿದ್ದು, ಇಲ್ಲಿಂದಲೇ ಆಪ್ತರು, ಬಂಧುಬಳಗದವರು ಶುಭ ಹಾರೈಸಿದ್ದಾರೆ.

ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನವದಂಪತಿ ಇಲ್ಲದೆಯೇ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ನವೆಂಬರ್ 23ರಂದು ಭುವನೇಶ್ವರದಲ್ಲಿ ಟೆಕ್ಕಿಗಳ ಮದುವೆಯಾಗಿತ್ತು. ಹುಬ್ಬಳ್ಳಿಯ ಮೇಧಾ ಮತ್ತು ಭುವನೇಶ್ವರದ ಸಂಗಮದಾಸ್ ಅವರ ಮದುವೆ ನೆರವೇರಿದ್ದು, ಬುಧವಾರ ಹುಬ್ಬಳ್ಳಿಯಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಬಂದು ಬಾಂಧವರು ಸಮಾರಂಭಕ್ಕೆ ಆಗಮಿಸಿದ್ದರು. ಆದರೆ ವಿಮಾನವಿಲ್ಲದೇ ವಧು-ವರರು ಬಾರದ ಕಾರಣ ಆನ್ನೈನ್ ಲ್ಲಿಯೇ ಭಾಗವಹಿಸಿದ್ದಾರೆ. ವಧು -ವರರೇ ಇಲ್ಲದೆ ಆರತಕ್ಷತೆ ಸಮಾರಂಭದಲ್ಲಿ ಬಂಧು ಬಾಂಧವರು ಭಾಗಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್​ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಒಡಿಶಾದ ಭುವನೇಶ್ವರದ ಸಂಗ್ರಾಮ್ ದಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರು ಒಪ್ಪಿ ಇಬ್ಬರ ಮದುವೆಯನ್ನು ಭುವನೇಶ್ವರದಲ್ಲಿ ನ.23ರಂದು ಮಾಡಿದ್ದರು.

ಆನ್‌ಲೈನ್‌ ಮೂಲಕ ಆರತಕ್ಷತೆಯಲ್ಲಿ ದಂಪತಿ ಭಾಗಿಯಾದ ವಿಡಿಯೋ



ವಧುವಿನ ತವರು ಹುಬ್ಬಳ್ಳಿಯ ಡಿ.3ರಂದು ಆರತಕ್ಷತೆ ಆಯೋಜಿಸಲಾಗಿತ್ತು. ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಧು-ವರರು ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಡಿ.2ಕ್ಕೆ ವಿಮಾನ ಬುಕ್‌ ಮಾಡಿದ್ದರು. ಆದರೆ, ಡಿ.2ರ ಬೆಳಗ್ಗೆ 9ರಿಂದ ಮರುದಿನ ಬೆಳಗಿನವರೆಗೆ ವಿಮಾನ ವಿಳಂಬವಾಗುತ್ತಿದೆ ಎಂದು ಹೇಳಿಕೊಂಡೇ ಬಂದಿದ್ದ ಇಂಡಿಗೋ ಸಿಬ್ಬಂದಿ, ಡಿ.3ರ ಬೆಳಗ್ಗೆ ವಿಮಾನ ರದ್ದಾಗಿದೆ ಎಂದಿದ್ದರು. ಹೀಗಾಗಿ, ಬರಲು ಸಾಧ್ಯವಾಗಿಲ್ಲ. ಇದರಿಂದ ವಧು-ವರ ಮತ್ತು ವರನ ಪೋಷಕರು ಭುವನೇಶ್ವರದಲ್ಲಿಯೇ ಉಳಿಯುವಂತಾಗಿದೆ.

600ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು; ಪ್ರಯಾಣಿಕರಿಗೆ ಕ್ಷಮೆ ಕೇಳಿದ CEO

ಇತ್ತ ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿ, ಸಂಬಂಧಿಕರು ಅವರಿಗಾಗಿ ಕಾಯುತ್ತಿದ್ದರು. ಅವರು ಬರಲು ಸಾಧ್ಯವಿಲ್ಲ ಎಂಬುವುದು ಗೊತ್ತಾಗಿದ್ದರಿಂದ ಹುಬ್ಬಳ್ಳಿಯಲ್ಲಿ ವಧುವಿನ ತಂದೆ - ತಾಯಿಯೇ ವಧು - ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರ ಮುಗಿಸಿದರು. ಅತ್ತ ವಧು-ವರ ತಯಾರಾಗಿ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಆರತಕ್ಷತೆ ಮುಗಿಸಿದರು. ಬಂದ ಸಂಬಂಧಿಕರು ವರ್ಚುವಲ್ ಮೂಲಕ ವಧು-ವರರನ್ನು ಕಂಡು, ಆಶೀರ್ವಾದ ಮಾಡಿ, ಹುಡುಗಿಯ ತಂದೆ - ತಾಯಿಗೆ ಗಿಫ್ಟ್ ಕೊಟ್ಟು ಹೋಗಿದ್ದಾರೆ.