Dharwad Munciplity: ಇಂದಿನಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ: ರಾಜ್ಯ ಸರ್ಕಾರ ಘೋಷಣೆ
ಹುಬ್ಬಳ್ಳಿ- ಧಾರವಾಡವನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಇತ್ತೀಚೆಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿತ್ತು. ಇಂದಿನಿಂದ ಅಧಿಕೃತವಾಗಿ ಧಾರವಾಡ ಮಹಾನಗರ ಪಾಲಿಕೆ ಎಂದು ಕರ್ನಾಟಕ ಸರ್ಕಾರದಿಂದ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.
ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ (Dharwad municipality) ಆಗಬೇಕು ಎಂಬ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಇಂದಿನಿಂದ ಅಧಿಕೃತವಾಗಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಕಾರ್ಯಾಚರಿಸಲಿದೆ. ಈ ಕುರಿತು ಸರ್ಕಾರದಿಂದ (State government) ಗಜೆಟ್ ಸೂಚನೆ (gazette notification) ನೀಡಲಾಗಿದೆ.
ಹುಬ್ಬಳ್ಳಿ- ಧಾರವಾಡವನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಇತ್ತೀಚೆಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿತ್ತು. ಇಂದಿನಿಂದ ಅಧಿಕೃತವಾಗಿ ಧಾರವಾಡ ಮಹಾನಗರ ಪಾಲಿಕೆ ಎಂದು ಕರ್ನಾಟಕ ಸರ್ಕಾರದಿಂದ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬೆಂಗಳೂರು ನಂತರದ ದೊಡ್ಡ ಪಾಲಿಕೆಯಾಗಿತ್ತು. ಆದರೆ ಅನುದಾನ ಹಂಚಿಕೆ, ಅಭಿವೃದ್ಧಿ, ಅಧಿಕಾರ ಹಂಚಿಕೆ ಎಲ್ಲದರಲ್ಲಿಯೂ ಧಾರವಾಡಕ್ಕೆ ತಾರತಮ್ಯ ಆಗುತ್ತಲೇ ಇತ್ತು. ಹೀಗಾಗಿ ಹುಬ್ಬಳ್ಳಿಯಿಂದ ಬೇರ್ಪಡಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕೊಡಿ ಎನ್ನುವುದು ದಶಕಗಳ ಹೋರಾಟವಾಗಿತ್ತು.
ಇದಕ್ಕಾಗಿಯೇ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ರಚನೆಯಾಗಿ ಹೋರಾಟವೂ ನಡೆದಿತ್ತು. ಅನೇಕ ಸಿಎಂಗಳಿಗೂ ಮನವಿ ಸಲ್ಲಿಸಲಾಗಿತ್ತು. ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿಯೇ ಈ ಬಗ್ಗೆ ಧಾರವಾಡ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರ ವರದಿ ಕೇಳಿತ್ತು. ಸರ್ಕಾರಕ್ಕೆ ಪೂರಕ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಅನುಮೋದಿಸಲಾಗಿತ್ತು.
ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ ಎಂದು ಸರ್ಕಾರ ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಹೊರಡಿಸಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಸಾರ್ವಜನಿಕರು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿವಿ ಗೋಪುರ, ಬೆಂಗಳೂರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿದೆ.