ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr N Someshwara Column: ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತುಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

-

ಕಂದನ ಕೊಡು ಶಿವನೆ ಬಂಧನ ಪಡಲಾರೆ |

ಬಂಜೆಂಬ ಶಬುದ ಹೊರಲಾರೆ | ಭೂಮಿ ಮ್ಯಾಲ

ಹಂಗಿನ ಬಾನ ಉಣಲಾರೆ !

ನಮ್ಮ ಭಾರತೀಯ ಸಮಾಜವು, ಹುಟ್ಟುವಾಗಲೇ ಪ್ರತಿಯೊಬ್ಬರೂ ನಾಲ್ಕು ಋಣಗಳನ್ನು ಹೊತ್ತುಕೊಂಡು ಹುಟ್ಟುತ್ತಾರೆ ಎಂದು ನಂಬಿದೆ. ದೈವ ಋಣ, ಪಿತೃಋಣ, ಆಚಾರ್ಯ ಋಣ ಹಾಗೂ ಸಮಾಜ ಋಣ. ಪಿತೃಋಣವು ತೀರಬೇಕಾದರೆ ತಲೆತಲಾಂತರದಿಂದ ಬಂದ ಹಿರಿಯರ ವಂಶವಾಹಿಗಳನ್ನು ಮುಂದಿನ ತಲೆಮಾರಿಗೆ ಸಾಗಿಸಬೇಕು. ಹಾಗೆ ಸಾಗಿಸಲಿಲ್ಲ ವೆಂದರೆ ಅವರಿಗ ಋಣಮುಕ್ತಿಯಿಲ್ಲ ಎನ್ನುವ ನಂಬಿಕೆಯಿದೆ.

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತು ಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

ಎರಡನೆಯದು ಕ್ಷೇತ್ರ. ಅಂದರೆ ಗರ್ಭಾಶಯ. ಒಂದು ಸಸಿ ಮೊಳೆಯಬೇಕಾದರೆ ಹೇಗೆ ಮಣ್ಣು ಫಲವತ್ತಾಗಿ ಇರಬೇಕೋ, ಹಾಗೆಯೇ ಗರ್ಭಾಶಯವೂ ಎಲ್ಲ ರೀತಿಯ ಅನಾರೋಗ್ಯ ಗಳಿಂದ ಮುಕ್ತವಾಗಿರಬೇಕು. ಮೂರನೆಯದು ಅಂಬು. ಅಂಬು ನೀರನ್ನು ಒಳಗೊಂಡಂತೆ ಎಲ್ಲ ಪೋಷಕಾಂಶಗಳು. ಈ ಶೀರ್ಷಿಕೆಯ ವ್ಯಾಪ್ತಿಯಲ್ಲಿ ಹಾರ್ಮೋನುಗಳೂ ಬರುತ್ತವೆ. ರಕ್ತದಲ್ಲಿರುವ ಪ್ಲಾಸ್ಮಾದ ಮೂಲಕ ಎಲ್ಲ ಪೋಷಕಾಂಶಗಳ ಪೂರೈಕೆಯಾಗುತ್ತದೆ.

ನಾಲ್ಕನೆಯದು ಬೀಜ. ಬೀಜ ಎಂದರೆ ಇದು ಅಂಡಾಣು (ಓವಮ್) ಮತ್ತು ವೀರ್ಯಾಣು ಗಳನ್ನು (ಸ್ಪರ್ಮ್) ಸೂಚಿಸುತ್ತದೆ. ಎರಡೂ ಶುದ್ಧವಾಗಿರಬೇಕು ಹಾಗೂ ಪರಿಪೂರ್ಣ ಓಜಸ್ಸಿನಿಂದ (ಜೀವಶಕ್ತಿ ಹಾಗೂ ಚೈತನ್ಯ) ಕೂಡಿರಬೇಕು. ಈ ನಾಲ್ಕು ಗರ್ಭ ಸಂಭವ ಸಾಮಾಗ್ರಿಗಳಲ್ಲಿ, ಯಾವುದಾದರೊಂದು ಸಾಮಾಗ್ರಿಯು ದೋಷಯುಕ್ತವಾಗಿದ್ದರೆ, ಅವರಿಗೆ ಸಹಜ ಮಕ್ಕಳಾಗುವುದಿಲ್ಲ ಎನ್ನುವುದನ್ನು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ. ಇದೇ ಆಶಯವನ್ನು ಆಧುನಿಕ ವೈದ್ಯಕೀಯ ವಿಜ್ಞಾನವು ವ್ಯಕ್ತಪಡಿಸುತ್ತದೆ.

ಬಂಜೆಂಬ ಶಬುದ: ನಮ್ಮ ದೇಶದ ಒಟ್ಟು ದಂಪತಿಗಳಲ್ಲಿ ಶೇ.10-15ರಷ್ಟು ದಂಪತಿಗಳಿಗೆ ಸಂತಾನಭಾಗ್ಯವಿಲ್ಲ. ಅಂದರೆ 27.5-30 ದಶಲಕ್ಷ ದಂಪತಿಗಳಿಗೆ ಮಕ್ಕಳಿಲ್ಲ. ಮಕ್ಕಳಾಗ ದಿರಲು ಕಾರಣಗಳು ಶೇ.30-40ರಷ್ಟು ಗಂಡಸರಲ್ಲೂ ಹಾಗೂ ಶೇ. 30-40ರಷ್ಟು ಹೆಂಗಸರಲ್ಲೂ ಇರುತ್ತವೆ. ಶೇ. 20-30ರಷ್ಟು ಪ್ರಕರಣಗಳಲ್ಲಿ ಮಿಶ್ರ ಅಥವಾ ಅವ್ಯಕ್ತ ಕಾರಣಗಳಿರುತ್ತವೆ. ಇಂಥವರಿಗೆ ಸಂಜೀವಿನಿಯಂತೆ ದೊರೆತಿದೆ ಪ್ರನಾಳ ತಂತ್ರಜ್ಞಾನ ಅಥವ ಕೃತಕ ಗರ್ಭಧಾರಣಾ ಚಿಕಿತ್ಸೆ (ಐವಿಎಫ್- ಇನ್ ವಿಟ್ರೊ ಫರ್ಟಿಲೈಜ಼ೇಷನ್). ಈ ತಂತ್ರಜ್ಞಾನವು ಮನುಕುಲಕ್ಕೆ ಲಭ್ಯವಾದ ಇತಿಹಾಸದ ಬಗ್ಗೆ ಒಂದು ಸಂಕ್ಷಿಪ್ತ ಪಕ್ಷಿನೋಟ ವನ್ನು ಹರಿಸೋಣ.

ಇದನ್ನೂ ಓದಿ: Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

ಲೂಯೀಸ್ ಜಾಯ್ ಬ್ರೌನ್: 1978ರ ಜುಲೈ 25. ರಾತ್ರಿ 11 ಗಂಟೆ 47 ನಿಮಿಷ. ಇಂಗ್ಲೆಂಡ್, ಓಲ್ಡ್‌ಹ್ಯಾಮ್, ಮಿಲ್‌ಟೌನಿನ ಜಿಲ್ಲಾ ಆಸ್ಪತ್ರೆ. ಮಗುವಿನ ಅಳುವಿಗಾಗಿ ಎಲ್ಲರೂ ಕಾದಿದ್ದರು. ನಡುರಾತ್ರಿಯಲ್ಲಿ ಮಗುವಿನ ಚೀತ್ಕಾರವು ಆಸ್ಪತ್ರೆಯ ಅಂಗಳದಲ್ಲಿ ಪ್ರತಿಧ್ವನಿ ಸುತ್ತಿರುವಂತೆಯೇ ಎಲ್ಲರ ಮುಖಗಳಲ್ಲಿ ಸಂತೋಷವು ಕಾಣಿಸಿಕೊಳ್ಳುವುದರ ಜತೆಯಲ್ಲಿ ಸದ್ದಿಲ್ಲದೆ ಒಂದು ಜಾಗತಿಕ ದಾಖಲೆಯೂ ಸ್ಥಾಪನೆಯಾಯಿತು.

ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ತಾಯಿಯ ಬೆಚ್ಚನೆಯ ಗರ್ಭದಲ್ಲಿ ಅಂಕುರ ವೊಡೆಯದೆ, ಪ್ರಯೋ ಗಾಲಯದ ತಣ್ಣನೆಯ ಗಾಜಿನ ತಟ್ಟೆಯಲ್ಲಿ ಗರ್ಭಕಟ್ಟಿ, ಈಗ ಪೂರ್ಣರೂಪದ ಮಗುವು ಬೆಳೆದು, ಈಗಷ್ಟೇ ಅದರ ಸಿಸೇರಿ ಯನ್ ಪ್ರಸವದ ಮೂಲಕ ಜಗತ್ತಿಗೆ ಬಂದಿತ್ತು. ಈ ಒಂದು ಘಟನೆಯು ವೈದ್ಯಕೀಯ ಇತಿಹಾಸಕ್ಕೇ ಮಹಾತಿರುವನ್ನು ಕೊಟ್ಟಿತು!

ಪ್ರಜನನ ವಿಜ್ಞಾನ ಅಥವಾ ರಿ-ಪ್ರೊಡಕ್ಟಿವ್ ಮೆಡಿಸಿನ್ ಹಿಂದೆಂದೂ ಕಾಣದಂಥ ಚಿಮ್ಮು ಹಲಗೆಯನ್ನು ಏರಿ, ಲಕ್ಷಾಂತರ ತಾಯಂದಿರನ್ನು ‘ಬಂಜೆ’ ಎಂಬ ಶಬ್ದದಿಂದ ಮುಕ್ತಿಯನ್ನು ನೀಡಿತು. ‘ಬಾಲಕರಿಲ್ಲದ ಬಾಲೀದ್ಯಾತರ ಜನ್ಮ, ಬಾಳೆಲೆ ಹಾಸ್ಯುಂಡು ಬೀಸಿ ಒಗೆದಂಗ’ ಎಂದು ಹೆಣ್ಣಿನ ಜೀವವನ್ನೇ ಅವಹೇಳನ ಮಾಡುತ್ತಿದ್ದ ಈ ಸಮಾಜಕ್ಕೆ, ಮೊದಲ ಬಾರಿಗೆ ಬೀಯಿಗೆ ಬೀಗವನ್ನು ಹಾಕಿಕೊಳ್ಳುವಂತೆ ಮಾಡಿತು.

ದಂಪತಿಗಳು: ಒಂದು ಮಗುವನ್ನು ಹಡೆದರೆ ಮಾತ್ರ ಹೆಣ್ಣಿನ ಜೀವನವು ಸಾರ್ಥಕತೆ ಯನ್ನು ಪಡೆಯಲು ಸಾಧ್ಯ ಎಂಬ ನಂಬಿಕೆಯು ಇಂಗ್ಲೆಂಡಿನಲ್ಲೂ ಇತ್ತು. ಬ್ರಿಟನ್ನಿನ ಬ್ರಿಸ್ಟಲ್ ನಗರದಲ್ಲಿ ಲೆಸ್ಲಿ ಬ್ರೌನ್ ಮತ್ತು ಜಾನ್ ಬ್ರೌನ್ ಎಂಬ ದಂಪತಿಗಳು. ಜಾನ್ ಬ್ರಿಟಿಷ್ ರೈಲ್ವೆಯಲ್ಲಿ ಟ್ರಕ್ ಚಾಲಕನಾಗಿ ಕೆಲಸವನ್ನು ಮಾಡುತ್ತಿದ್ದ. ಅವರು ಮದುವೆ ಯಾಗಿ ಒಂಬತ್ತು ವರ್ಷಗಳಾಗಿದ್ದವು. ಆದರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ಕೊರಗು ಇಬ್ಬರನ್ನೂ ತೀವ್ರವಾಗಿ ಕಾಡುತ್ತಿತ್ತು. ಲೆಸ್ಲಿ ಬ್ರೌನ್‌ಳ ಗರ್ಭನಾಳಗಳಲ್ಲಿ ತಡೆಯಿದ್ದ ಕಾರಣ, ವೀರ್ಯಾಣುವು ಅಂಡಾಣುವಿನೊಡನೆ ಮಿಲನವಾಗುವ ಸಂದರ್ಭವೇ ಬರುತ್ತಿರಲಿಲ್ಲ. ಹಾಗಾಗಿ ಕ್ಷೇತ್ರದೋಷದ ಕಾರಣ ಅವರಿಗೆ ಮಕ್ಕಳಾಗಿರಲಿಲ್ಲ.

Screenshot_2 ಋ

1976. ಒಲ್ಡ್‌ಹ್ಯಾಮ್ ನಗರದಲ್ಲಿ ಪ್ಯಾಟ್ರಿಕ್ ಸ್ಟೆಪ್‌ಟೋ (1913-1988) ಎಂಬ ಪ್ರಸೂತಿತಂತ್ರ ವೈದ್ಯರಿದ್ದರು. ಆತನನ್ನು ಭೇಟಿಯಾಗುವಂತೆ ಲೆಸ್ಲಿಗೆ ಯಾರೋ ಸೂಚಿಸಿದರು. ಪ್ಯಾಟ್ರಿಕ್, ರಾಬರ್ಟ್ ಎಡ್ವರ್ಡ್ಸ್ (1925-2013) ಎಂಬ ಅಂಗಕ್ರಿಯಾ ವಿಜ್ಞಾನಿ ಹಾಗೂ ಜೀನ್ ಪರ್ಡಿ (1945-1985) ಎಂಬ ನರ್ಸ್-ಭ್ರೂಣತ ಜ್ಞಳ ಜತೆಯಲ್ಲಿ ಸುಮಾರು ದಶಕಗಳಿಂದ ಪ್ರನಾಳ ಶಿಶು (ಕೃತಕ ಗರ್ಭಧಾರಣೆ) ಪ್ರಯೋಗಗಳಲ್ಲಿ ತೊಡಗಿದ್ದರು. ಆದರೂ ಅವರಿಗೆ ಯಶಸ್ಸು ದೊರೆತಿರಲಿಲ್ಲ. ಈ ಬಗ್ಗೆ ಅವರಿಗೆ ನಿರಾಸೆಯಾಗಿದ್ದರೂ, ಭರವಸೆಯನ್ನು ಕಳೆದುಕೊಂಡಿರ ಲಿಲ್ಲ.

ತಮ್ಮ ಪ್ರಯೋಗಗಳನ್ನು ನಿಷ್ಠೆಯಿಂದ ನಡೆಸುತ್ತಿದ್ದರು. ಈ ಪ್ರಯೋಗದಲ್ಲಿ ಭಾಗಿಯಾ ಗಲು ಲೆಸ್ಲಿ ಒಪ್ಪಿಗೆ ಪತ್ರಕ್ಕೆ ಸಹಿಯನ್ನು ಹಾಕಿದಳು. ‘ತಾನೊಂದು ಪ್ರಯೋಗ ದಲ್ಲಿ ಪಾಲುಗೊಳ್ಳುತ್ತಿದ್ದೇನೆ. ಈ ರೀತಿಯ ಪ್ರಯೋಗದ ಮೂಲಕ ಇದುವರೆಗೂ ಒಂದು ಮಗುವೂ ಹುಟ್ಟಿಲ್ಲ. ಒಂದು ವೇಳೆ ಈ ಪ್ರಯೋಗವು ಯಶಸ್ವಿಯಾದರೆ, ಇಡೀ ಜಗತ್ತಿನಲ್ಲಿ ಪ್ರನಾಳ ಶಿಶುವನ್ನು ಪಡೆದ ಮೊದಲ ತಾಯಿ ತಾನಾಗಲಿದ್ದೇನೆ’ ಎಂಬ ಕಲ್ಪನೆಯೂ ಆಕೆಗೆ ಇರಲಿಲ್ಲ.

ತ್ರಿಮೂರ್ತಿಗಳು: ಪ್ಯಾಟ್ರಿಕ್ ಸ್ಟೆಪ್‌ಟೋ ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ತಜ್ಞರಾಗಿದ್ದರು. ಅಂದಿನ ದಿನಗಳಲ್ಲಿ ಅನೇಕ ವೈದ್ಯರು ‘ಉದರದರ್ಶಕ’ವು ಒಂದು ಅಪಾಯಕಾರಿ ಆಟಿಕೆ, ಅದರ ಸಹವಾಸವೇ ಬೇಡ ಎಂದು ಸುಮ್ಮನಿದ್ದರು. ರಾಬರ್ಟ್ ಎಡ್ವರ್ಡ್ ಅಂಗಕ್ರಿಯಾ ವಿಜ್ಞಾನಿಯಾಗಿದ್ದರು. ತಾವು ಭಾಗಿಯಾಗಿರುವ ಪ್ರಯೋಗದಲ್ಲಿ ಅಪಾರ ಭರವಸೆಯನ್ನು ಪಡೆದಿದ್ದರು. ‌ಸ್ತ್ರೀಯರ ಒಡಲಿನಿಂದ ಪ್ರತ್ಯೇಕಿಸಿದ ಅಂಡಾಣುವನ್ನು, ಪ್ರಯೋಗಾಲಯದ ಪರಿಸರದಲ್ಲಿ ಹೇಗೆ ಆರೋಗ್ಯಕರವಾಗಿ ಬೆಳೆಸಬೇಕು ಎನ್ನುವ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿದ್ದರು. ಜೀನ್ ಪರ್ಡಿ ಜಗತ್ತಿನ ಮೊದಲ ಭ್ರೂಣವಿಜ್ಞಾನಿ. ತನ್ನ ಪುಟ್ಟ ಪ್ರಯೋ ಗಾಲಯದಲ್ಲಿ ನೂರಾರು ಗಂಟೆಗಳ ಕಾಲ ಜೀವಕೋಶಗಳ ದ್ವಿಗುಣಗೊಳ್ಳುವಿಕೆಯನ್ನು ನೋಡಿ ಅಪಾರ ಅನುಭವವನ್ನು ಪಡೆದ ಹೆಣ್ಣು ಮಗಳಾಗಿದ್ದಳು.ಈ ತ್ರಿಮೂರ್ತಿಗಳಿಗೆ ಮೂರು ರೀತಿಯ ತೊಂದರೆಗಳು ಕಾಡುತ್ತಿದ್ದವು. ಮೊದಲನೆಯದಾಗಿ ಸರಕಾರವು ಪ್ರನಾಳ ಶಿಶುವಿನ ಯಾವ ಪ್ರಯೋಗಗಳಿಗೂ ಹಣಕಾಸಿನ ನೆರವನ್ನು ನೀಡುವುದಿಲ್ಲ ಎಂದು ಘೋಷಿಸಿತ್ತು.

ಎರಡನೆಯದಾಗಿ ಸಮಾಜದಿಂದ ಬಂಧ ಪ್ರತಿರೋಧ. ‘ನೀವೇ ದೇವರು ಆಗಲು ಹೊರಟಿ ದ್ದೀರಿ. ಅದು ಅಸಾಧ್ಯವಾದದ್ದರಿಂದ ನೀವು ದೆವ್ವವನ್ನು (ಫ್ರಾಂಕೆನ್ಸ್‌ಸ್ಟೀನ್) ಸೃಜಿಸುವುದು ಖಚಿತ’ ಎಂದು ಮೂದಲಿಸಿದರು. ಮೂರನೆಯದಾಗಿ ದೊಡ್ಡ ಆಸ್ಪತ್ರೆಗಳ ಆಡಳಿತ ವರ್ಗದವರ ಹಾಗೂ ಈ ಕ್ಷೇತ್ರದ ಹಿರಿಯ ವೈದ್ಯರು ಇವರಿಗೆ ತಾಂತ್ರಿಕ ಸಹಕಾರ ವನ್ನು ಬಿಡಿ, ಸಹಾನುಭೂತಿಯನ್ನೂ ತೋರಲಿಲ್ಲ. ಹಾಗಾಗಿ ಮೂವರು ಯಾವುದೇ ಒಂದು ಅನುಕೂಲತೆಗಳಿಲ್ಲದ, ಹಣಕಾಸಿನ ಕೊರತೆ ಸದಾ ಕಾಡುತ್ತಿದ್ದ, ಅನಾಮಧೇಯ ಆಸ್ಪತ್ರೆ ಯಲ್ಲಿ ತಮ್ಮ ಪ್ರಯೋಗಗಳನ್ನು ನಡೆಸುತ್ತಿದ್ದರು.

ಪವಾಡ: 1977ರ ನವೆಂಬರ್ 10. ಲೆಸ್ಲಿಯ ಉದರದಲ್ಲಿ ರಂಧ್ರವನ್ನು ಕೊರೆದು, ಉದರ ದರ್ಶಕವನ್ನು ಆ ರಂಧ್ರದಲ್ಲಿ ತೂರಿಸಿ, ಲೆಸ್ಲಿ ಬ್ರೌನಳ ಒಂದೇ ಒಂದು ಅಂಡಾಣುವನ್ನು ಪ್ರತ್ಯೇಕಿಸಿದರು. ಆ ಅಂಡಾಣುವನ್ನು ಗಾಜಿನ ತಟ್ಟೆಯಲ್ಲಿಟ್ಟರು. ರಾಬರ್ಟ್ ಎಡ್ವರ್ಡ್ಸ್ ಆ ಗಾಜಿನ ತಟ್ಟೆಯೊಳಗೆ ಜಾನ್‌ನ ವೀರ್ಯವನ್ನು ಸೇರಿಸಿದರು. ಎರಡು ದಿನಗಳಾದವು. ಸೂಕ್ಷ್ಮದರ್ಶಕದಲ್ಲಿ ನೋಡಿದರು. ಅಂಡಾಣು-ವೀರ್ಯಾಣುಗಳೆರಡೂ ಸೇರಿ ಗರ್ಭವನ್ನು ಕಟ್ಟಿದ್ದವು. ಅಷ್ಟು ಮಾತ್ರವಲ್ಲ, ಅವು ನಿಗದಿತ ಅವಧಿಗೆ ಅನುಗುಣವಾಗಿ ದ್ವಿವಿಭಜನೆ ಗೊಂಡು ಎಂಟು ಜೀವಕೋಶಗಳ ಒಂದು ಎಳೇ ಎಳೇ ಭಾವಿ ಭ್ರೂಣಕ್ಕೆ ನಾಂದಿಯನ್ನು ಹಾಡಿದ್ದವು. ಅದನ್ನು ಎಚ್ಚರಿಕೆಯಿಂದ ಎತ್ತಿಕೊಂಡು, ಅದನ್ನು ಲೆಸ್ಲಿಯ ಗರ್ಭಾಶಯದ ಮೆತ್ತೆಯಲ್ಲಿ ಮಲಗಿಸಿದರು. ಆ ಎಳೇ ಎಳೇ ಭಾವಿ ಭ್ರೂಣವು ನಿಧಾನವಾಗಿ ಗರ್ಭಾಶಯದ ಮೆತ್ತೆಯಲ್ಲಿ ನಾಟಿಕೊಂಡಿತು.

ಒಂದಷ್ಟು ದಿನಗಳಾದ ಮೇಲೆ ಗರ್ಭಧಾರಣಾ ಪರೀಕ್ಷೆಯನ್ನು (ಪ್ರೆಗ್ನನ್ಸಿ ಟೆಸ್ಟ್) ಮಾಡಿದರು. ಇತ್ಯಾತ್ಮಕ ಫಲಿತಾಂಶವು ಬಂದಿತು. ಅಂದರೆ ‘ಗರ್ಭ ಕಟ್ಟಿದೆ’ ಎನ್ನುವುದಕ್ಕೆ ಪುರಾವೆಯು ದೊರೆಯಿತು. ಈ ಸುದ್ಧಿಯು ಅದು ಹೇಗೋ ಆಸ್ಪತ್ರೆಯ ಗೋಡೆಗಳಿಂದ ಹೊರಗೆ ಹರಡಿತ್ತು. ಜಗತ್ತಿನ ಎಲ್ಲ ಮಾಧ್ಯಮಗಳು ಒಮ್ಮೆಲೇ ಓಲ್ಡ್ ಹ್ಯಾಮ್ ಜನರಲ್ ಹಾಸ್ಪಿಟಲ್ ಮೇಲೆ ಮುಗಿಬಿದ್ದವು. ಈಗ ನಿಜವಾದ ಸಮಸ್ಯೆಯು ಆರಂಭವಾಯಿತು. ಮಾಧ್ಯಮದವರ ಉಪಟಳವನ್ನು ಸಹಿಸಲಾಗದೆ ಆಸ್ಪತ್ರೆಯವರು ಪೊಲೀಸರ ನೆರವನ್ನು ಪಡೆದರು.

‘ದೇವರೇ ಆಗಲು ಹೊರಟ ಪಾಖಂಡಿಗಳ ಆಸ್ಪತ್ರೆಯ ಮೇಲೆ ಬಾಂಬ್ ಹಾಕಿ ನೆಲಸಮ ಮಾಡುತ್ತೇವೆ’ ಎಂಬ ಬೆದರಿಕೆಯ ಕರೆಗಳು ಬಂದವು. ಪಾಪರಾಜಿಗಳ (ಪ್ರಖ್ಯಾತ ಜನರ ಛಾಯಾಚಿತ್ರವನ್ನು ತೆಗೆದು ಹೆಚ್ಚಿನ ಬೆಲೆಗೆ ಪತ್ರಿಕೆಗಳಿಗೆ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿರುವ ಖಾಸಗಿ ಛಾಯಾಗ್ರಾಹಕರು) ಕಾಟವನ್ನು ತಡೆಯುವುದು ಒಂದು ದೊಡ್ಡ ಸವಾಲಾಗಿತ್ತು.

1978ರ ಜುಲೈ 25ರಂದು ರಾತ್ರಿ 11.47 ನಿಮಿಷಗಳಿಗೆ ಲೆಸ್ಲಿಯ ಉದರವನ್ನು ಛೇದಿಸಿ, ಸಿಸೇರಿಯನ್ ಮೂಲಕ ಪ್ರಸವ ಮಾಡಿಸಿದರು. ವೈದ್ಯರು ಇಡೀ ಪ್ರಸವ ಪ್ರಕ್ರಿಯೆಯನ್ನು ಚಿತ್ರೀಕರಿಸಿದರು. ‘ಪ್ರನಾಳ ಶಿಶುವಿನ ತಂತ್ರಜ್ಞಾನದ ಮೂಲಕ ಆರೋಗ್ಯವಂತ ಶಿಶುವನ್ನು ಪಡೆಯಲು ಸಾಧ್ಯ’ ಎನ್ನುವುದನ್ನು ಜಗತ್ತಿಗೆ ತೋರಿಸಬೇಕಾಗಿತ್ತು. ಹಾಗಾಗಿ ಪ್ರಸವದ ಪ್ರತಿಯೊಂದು ಘಟ್ಟವನ್ನು ದಾಖಲಿಸಿದರು.

ಬ್ರೌನ್ ದಂಪತಿಗಳು ತಮ್ಮ ಮಗುವಿಗೆ ಲೂಯೀಸ್ ಜಾಯ್ ಬ್ರೌನ್ ಎಂಬ ಹೆಸರನ್ನು ನೀಡಿದರು. ಈಗ ಹೊಸ ಸಮಸ್ಯೆಯು ಉದ್ಭವವಾಯಿತು. ಎಲ್ಲರಿಗೂ ಮಗುವನ್ನು ನೋಡುವ, ಮಾತನಾಡಿಸುವ, ಎತ್ತಿ ಮುದ್ದಾಡುವ ಆಸೆ. ಇದು ಕಿರಿಕಿರಿಯ ಮಟ್ಟವನ್ನು ತಲುಪಿದಾಗ, ಬ್ರೌನ್ ಕುಟುಂಬಕ್ಕೆ ಖಾಸಗಿ ಕ್ಷಣಗಳೇ ಇಲ್ಲದಂತಾದವು.

ಮತ್ತೊಂದು ಕಡೆಯಿಂದ ಬ್ರೌನ್ ದಂಪತಿಗಳಿಗೆ ಅವಹೇಳನಕಾರಿ ಪತ್ರಗಳು, ಟೆಲಿಫೋನ್ ಕರೆಗಳು, ಗಾಜಿನ ಚೂರುಗಳ, ಪ್ಲಾಸ್ಟಿಕ್ ಭ್ರೂಣಗಳ ಪಾರ್ಸೆಲ್ಲುಗಳು ಬರಲಾರಂಭಿಸಿದವು. ಲೂಯೀಸ್ ಬ್ರೌನ್ ‘ಆತ್ಮರಹಿತ’ಳಾಗಿ ಹುಟ್ಟಿದ್ದಾಳೆ ಎಂಬ ಸುದ್ಧಿಯು ದೊಡ್ಡ ಪ್ರಮಾಣ ದಲ್ಲಿ ಹರಡಿತು.

ಉತ್ತರ ದೊರೆಯಿತು: ಲೂಯೀಸ್ ಬ್ರೌನ್ ಸಹಜ ಮಗುವಲ್ಲ ಎನ್ನುವ ನಾನಾ ಕ್ಯಾತೆಗಳಿಗೆ ವೈಜ್ಞಾನಿಕ ಉತ್ತರವನ್ನು ನೀಡುವ ದಿನವೂ ಬಂದಿತು. ಬ್ರೌನ್ ದಂಪತಿಗಳು ಎರಡನೆಯ ಸಲ ಪ್ರನಾಳಶಿಶು ತಂತ್ರಜ್ಞಾನದ ಮೂಲಕ ಮತ್ತೊಂದು ಹೆಣ್ಣುಮಗು, ನಟಾಲಿಯನ್ನು ಪಡೆದರು. ನಟಾಲಿಯು ದೊಡ್ಡವಳಾಗಿ, ಸಹಜ ರೀತಿಯಲ್ಲಿ ಮಗುವೊಂದಕ್ಕೆ ಜನ್ಮವನ್ನು ನೀಡಿ, ಪ್ರನಾಳ ಶಿಶುವಿನ ತಂತ್ರಜ್ಞಾನದಿಂದ ಆರೋಗ್ಯವಂತ ಮಕ್ಕಳು ಹುಟ್ಟುತ್ತಾರೆ ಎನ್ನುವುದಕ್ಕೆ ಪುರಾವೆಯನ್ನು ಒದಗಿಸಿದಳು.

ನಂತರ 2006ರಲ್ಲಿ ಲೂಯೀಸ್ ಬ್ರೌನ್, ಯಾವುದೇ ವೈದ್ಯಕೀಯ ತಂತ್ರಜ್ಞಾನದ ನೆರವಿಲ್ಲದೆ ನೈಜವಾಗಿ ಕ್ಯಾಮೆರೂನ್ ಎಂಬ ಮಗುವಿಗೆ ಜನ್ಮವಿತ್ತಳು. ಇಂದು ಜಗತ್ತಿ ನಾದ್ಯಂತ ಕೃತಕ ಗರ್ಭಧಾರಣಾ ತಂತ್ರಜ್ಞಾನದ ಮೂಲಕ 12 ದಶಲಕ್ಷ ಮಕ್ಕಳು ಹುಟ್ಟಿದ್ದಾರೆ. ಬಂಜೆಂಬ ಶಬುದದಿಂದ ಮುಕ್ತಿಯನ್ನು ಪಡೆದಿದ್ದಾರೆ. ಲೂಯೀಸ್ ಬ್ರೌನ್ ಬ್ರಿಸ್ಟಲ್ ನಗರದ ಶಿಪ್ಪಿಂಗ್ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈಗ ಆಕೆಗೆ 48 ವರ್ಷಗಳು.

ಮಹಾ ದುರಂತ: ಲೂಯೀಸ್ ಬ್ರೌನ್ ಹುಟ್ಟಿ, ಸರಿಯಾಗಿ 67 ದಿನಗಳ ನಂತರ, 1978ರ ಅಕ್ಟೋಬರ್ 3ರಂದು ಕನುಪ್ರಿಯ ಅಗರವಾಲ್ (ದುರ್ಗಾ) ಎಂಬ ಮಗುವು ಇದೇ ಕೃತಕ ಗರ್ಭಧಾರಣಾ ತಂತ್ರಜ್ಞಾನದ ಮೂಲಕ ಭಾರತದಲ್ಲಿ ಹುಟ್ಟಿತು. ಈ ತಂತ್ರಜ್ಞಾನವನ್ನು ಸ್ವತಂತ್ರವಾಗಿ ರೂಪಿಸಿ, ಮಗುವಿನ ಜನನಕ್ಕೆ ಕಾರಣರಾದವರು ಡಾ.ಸುಭಾಶ್ ಮುಖ್ಯೋ ಪಾಧ್ಯಾಯ (1931-1981) ಎಂಬ ವೈದ್ಯರು. ತಮ್ಮ ಪುಟ್ಟ ಅಪಾರ್ಟ್ಮೆಂಟಿನ ರೆಫ್ರಿಜರೇಟ ರನ್ನು ಬಳಸಿಕೊಂಡು ಈ ತಂತ್ರಜ್ಞಾನವನ್ನು ರೂಪಿಸಿಕೊಳ್ಳುವಲ್ಲಿ ಅವರು ಅನೇಕ ವಿಶ್ವದಾಖಲೆಗಳನ್ನು ಮಾಡಿದರು.

ಇವರು ಅಂಡಾಶಯವು ಹೆಚ್ಚು ಹೆಚ್ಚು ಅಂಡಗಳನ್ನು ಉತ್ಪಾದಿಸುವಂತೆ ಪ್ರಚೋದನೆ ಯನ್ನು ನೀಡುವ ಗೊನಡೋಟ್ರೋಫಿನ್ನುಗಳನ್ನು ಮೊದಲ ಬಾರಿಗೆ ಬಳಸಿದರು. ಇವರು ಉದರ ದರ್ಶಕದ ಬದಲು ಯೋನಿ ಮುಖಾಂತರ ಅಂಡಾಣುಗಳನ್ನು ಸಂಗ್ರಹಿಸಿದರು. ಇದು ಕಡಿಮೆ ವೆಚ್ಚದ ಹಾಗೂ ಹೆಚ್ಚು ಸುರಕ್ಷತೆಯ ವಿಧಾನವಾಗಿದೆ.

ಇವರು 8 ಜೀವಕೋಶಗಳ ಎಳೇಭ್ರೂಣವನ್ನು ಕಾಪಾಡಲು ‘ಶೀತಲಸಂರಕ್ಷಣೆ’ (ಕ್ರಯೋ ಪ್ರಿಸರ್ವೇಶನ್) ತಂತ್ರಜ್ಞಾನವನ್ನು ರೂಪಿಸಿದರು. ಅಗತ್ಯ ಬಿದ್ದಾಗ ಶೀತಲೀಕರಣಕ್ಕೆ ಒಳಗಾಗಿದ್ದ ಭ್ರೂಣವನ್ನು ಕೋಣೆಯ ಉಷ್ಣತೆಗೆ ತಂದು ಗರ್ಭಾಶಯದಲ್ಲಿ ನಾಟಿಸ ಬಹುದು ಎನ್ನುವುದನ್ನೂ ತೋರಿಸಿಕೊಟ್ಟರು.

ಮುಖೋಪಾಧ್ಯಾಯ ಅವರ ಬುದ್ಧಿವಂತಿಕೆ, ಪ್ರಯೋಗಶೀಲತೆ, ಸಂಶೋಧನಾ ಸಾಮರ್ಥ್ಯ ವನ್ನು ಕಂಡು ಕರುಬಿದ ಅವರ ಸಹುದ್ಯೋಗಿಗಳೇ, ಅವರ ಮೇಲೆ ಆರೋಪಗಳನ್ನು ಹೊರಿಸಿ, ಸರಕಾರಿ ವಿಚಾರಣೆಯು ನಡೆಯುವಂತೆ ಮಾಡಿದರು. ‘ಜಗತ್ತಿನಲ್ಲಿ ಯಾರೂ ಮಾಡದೇ ಇರುವಂಥ ಸಂಶೋಧನೆಯನ್ನು ಸರಕಾರಿ ಕಾಲೇಜಿನ ವೈದ್ಯನೊಬ್ಬನು ಮಾಡುತ್ತಾನೆ ಎಂದರೆ ಅದು ನಂಬಲಸಾಧ್ಯ’ ಎಂದು ಅವಮಾನವನ್ನು ಮಾಡಿದರು. ಮುಖೋಪಾಧ್ಯಾಯ ಅವರು ಜೂನ್ 1981ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

20 ವರ್ಷಗಳ ನಂತರ, ಡಾ.ಟಿ.ಸಿ ಆನಂದಕುಮಾರ್ ಎಂಬ ವೈದ್ಯರು ಕೃತಕ ಗರ್ಭಧಾರಣಾ ತಂತ್ರಜ್ಞಾನದ ಮೂಲಕ, ‘ಹರ್ಷ’ ಎನ್ನುವ ಭಾರತದ ಮೊದಲ ಪ್ರನಾಳಶಿಶುವಿನ ಜನನಕ್ಕೆ ಕಾರಣರಾದರು ಎನ್ನುವ ಸುದ್ಧಿಯು ಪತ್ರಿಕೆಗಳಲ್ಲಿ ಬಂದಿತು.

ಆದರೆ ಆನಂದಕುಮಾರ್ ಅವರು, ಮುಖೋಪಾಧ್ಯಾಯ ಅವರ ಕೈಬರಹದ ಟಿಪ್ಪಣಿ ಗಳನ್ನೆಲ್ಲ ಅಧ್ಯಯನ ಮಾಡಿ, ಅವರೇ ‘ಭಾರತೀಯ ಕೃತಕ ಗರ್ಭಧಾರಣಾ ತಂತ್ರಜ್ಞಾನದ ಪಿತಾಮಹ’ ಎಂದು ಘೋಷಿಸಿದರು. ಮುಖೋಪಾಧ್ಯಾಯರ ಜೀವನ್ನು ಆಧರಿಸಿದ ‘ಏಕ್ ಡಾಕ್ಟರ್ ಕಿ ಮೌತ್’ ಎನ್ನುವ ಚಿತ್ರವು ಅಂತರ್ಜಾಲದಲ್ಲಿ ದೊರೆಯುತ್ತಿದೆ.