Mahantesh Bilagi: ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಬದುಕಿನ ಹೃದಯಸ್ಪರ್ಶಿ ಕತೆ
Kalaburagi news: ಮಹಾಂತೇಶ್ ಬೀಳಗಿ ಒಂದೇ ಒಂದು ರೂಪಾಯಿ ಲಂಚ ಪಡೆಯದ ಪ್ರಾಮಾಣಿಕ ಐಎಎಸ್ ಅಧಿಕಾರಿ ಆಗಿದ್ದರು ಎಂದು ಅವರ ಅಭಿಮಾನಿಗಳು, ಜಿಲ್ಲೆಯ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ. ಅವರ ಹಿನ್ನೆಲೆಯೂ ಹೃದಯಸ್ಪರ್ಶಿಯಾಗಿದೆ. ಗಣ್ಯರು ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದು, ಅವರ ಅಂತ್ಯಕ್ರಿಯೆ ಎಂದು ರಾಮದುರ್ಗದಲ್ಲಿ ನಡೆಯಲಿದೆ.
ಮಹಾಂತೇಶ ಬೀಳಗಿ -
ಕಲಬುರಗಿ, ನ.26: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಜಿಲ್ಲೆಯ (kalaburagi news) ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಅವರು ಭೀಕರ ಕಾರು ಅಪಘಾತದಲ್ಲಿ (Road Accident) ಸಹೋದರರೊಂದಿಗೆ ದುರ್ಮರಣ ಹೊಂದಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರೂಪಾಯಿ ಲಂಚಕ್ಕೆ ಬೇಡಿಕೆ ಇಡದ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಅವರ ಪ್ರಾಮಾಣಿಕತೆ ಹಾಗೂ ಅವರು ಐಎಎಸ್ ಅಧಿಕಾರಿಯಾದ ಹಿಂದೆ ಒಂದು ಹೃದಯಸ್ಪರ್ಶಿ ಕತೆ ಇದೆ ಎಂದು ಗೊತ್ತಾಗಿದೆ.
ತಮಗೆ 5 ವರ್ಷವಿದ್ದಾಗ ತಮ್ಮ ತಂದೆಯನ್ನು ಮಹಾಂತೇಶ್ ಬೀಳಗಿ ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿಯನ್ನು ಸಾಕಿ ಓದಿಸಿದರು. ತಮಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ, ತಮ್ಮ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು.
ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು. ತಾನು ಐಎಎಸ್ ಮಾಡಬೇಕು ಎಂಬುದಾಗಿ ಛಲ ತೊಟ್ಟ ಮಹಾಂತೇಶ್ ಬೀಳಗಿ ಅವರು ಕನ್ನಡ ಮಾಧ್ಯಮದಲ್ಲಿ ಓದಿದರೂ, ಎಂಎ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದರು.
ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು
ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿ ಮಹಾಂತೇಶ್ ಬೀಳಗಿ ಅವರು 2012ರಲ್ಲಿ ಐಎಎಸ್ ಪಾಸ್ ಮಾಡಿದರು. ಆ ಬಳಿಕ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸೇವಾವಧಿಯುದ್ದಕ್ಕೂ ಲಂಚ ಪಡೆಯದೆ ಜನ ಸೇವೆಯೇ ಜನಾರ್ದನ ಸೇವೆ ಎಂದು ದುಡಿದರು. ಕೊರೊನಾ ಸಮಯದಲ್ಲಿ ಡಿಸಿಯಾಗಿದ್ದರೂ ಬೀದಿಗಿಳಿದು ಜನಸಾಮಾನ್ಯರಂತೆ ಕೆಲಸ ಮಾಡಿದರು. ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿದ ಸೇವೆಯಂತೂ ಜನಜನಿತ.
ಇಂಥ ಪ್ರಾಮಾಣಿಕ ವ್ಯಕ್ತಿತ್ವದ ಮಹಾಂತೇಶ್, ಕಲಬುರಗಿಯ ಜೀವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಹೋದರರೊಂದಿಗೆ ದುರ್ಮರಣ ಹೊಂದಿದ್ದಾರೆ. ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಹಾಂತೇಶ್ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತರು. ಸಂಬಂಧಿಕರು ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ಬಳಿ ಗೌನಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ವಾಹನಕ್ಕೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಜೀವ ತೆತ್ತಿದ್ದರು.
ಬೆಂಗಳೂರು- ಚೆನ್ನೈ ಹೈವೇಯಲ್ಲಿ ಕಾರು ಅಪಘಾತ, ನಾಲ್ವರು ಸಾವು
ಇಂದು ರಾಮದುರ್ಗದಲ್ಲಿ ಅಂತ್ಯಕ್ರಿಯೆ
ಅವರ ಅಪಾರ ಅಭಿಮಾನಿಗಳಿಗೆ ಇದರಿಂದ ಶಾಕ್ ಆಗಿದ್ದು, ಸಂತಾಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕೂಡ ಮಹಾಂತೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇಂದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಮಹಾಂತೇಶ್ ಅಂತ್ಯಕ್ರಿಯೆ ನಡೆಯಲಿದೆ.