ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahantesh Bilagi Death: ಜೇವರ್ಗಿ ಬಳಿ ಭೀಕರ ಕಾರು ಅಪಘಾತ; ಹಿರಿಯ ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ಸಾವು

Kalaburagi Car Accident: ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಮಂಗಳವಾರ ಕಾರು ಅಪಘಾತಕ್ಕೀಡಾಗಿದೆ. ಈ ಹಿಂದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರನ್ನು ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಎಂಡಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಕಾರು ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ಸಾವು

ಮೃತ ಐಎಎಸ್‌ ಅಧಿಕಾರಿ ಮಹಂತೇಶ್‌ ಬೀಳಗಿ -

Prabhakara R
Prabhakara R Nov 25, 2025 8:18 PM

ಕಲಬುರಗಿ, ನ.25: ಜಿಲ್ಲೆಯ ಜೇವರ್ಗಿ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಎಂಡಿ ಮಹಾಂತೇಶ್ ಬೀಳಗಿ (Mahantesh Bilagi Death) ಸೇರಿ ಮೂವರು ಮೃತಪಟ್ಟಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಮಂಗಳವಾರ ಕಾರು ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಐದು ಜನ ತೆರಳುತ್ತಿದ್ದಾಗ, ಜೇವರ್ಗಿ ತಾಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಾಯಿ ಅಡ್ಡಬಂದಿದೆ. ಅದನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಹಾಂತೇಶ್ ಬೀಳಗಿ, ಅವರ ಸೋದರ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ.

ಮಹಾಂತೇಶ್ ಬೀಳಗಿ ಅವರು ಹಿರಿಯ ಐಎಎಸ್ ಅಧಿಕಾರಿಯಾಗಿದ್ದರು. ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರನ್ನು ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಎಂಡಿಯಾಗಿ ವರ್ಗಾವಣೆ ಮಾಡಲಾಗಿತ್ತು.

1974ರ ಮಾರ್ಚ್ 27ರಂದು ಜನಿಸಿದ್ದ ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್​ನ IAS ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ

ಸಿಎಂ ಸಿದ್ದರಾಮಯ್ಯ ಸಂತಾಪ

ಮಹಾಂತೇಶ್ ಬೀಳಗಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನೋವುಂಟು ಮಾಡಿದೆ.

ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಸಿಎಂ ಸಂತಾಪದ ಪೋಸ್ಟ್‌ ಇಲ್ಲಿದೆ



ದಕ್ಷ ಅಧಿಕಾರಿಯ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ: ಡಿಸಿಎಂ ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿಗಳಾದ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು, ಜತೆಗೆ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಜನಪರ ಕಾರ್ಯಗಳ‌ ಮೂಲಕ ಹೆಸರುವಾಸಿಯಾಗಿದ್ದ ದಕ್ಷ ಅಧಿಕಾರಿಯ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ‌ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ತಿಳಿಸಿದ್ದಾರೆ.