ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಕೃಷ್ಣ ಭೈರೇಗೌಡಗೆ ಬೆಂಗಳೂರು ನಗರ, ಡಾ. ಜಿ. ಪರಮೇಶ್ವರ್‌ಗೆ ತುಮಕೂರು ಜವಾಬ್ದಾರಿ
DK Shivakumar: ಕೆಲವು ಜಿಲ್ಲೆಗಳ ತಾತ್ಕಾಲಿಕ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ -
ಬೆಂಗಳೂರು, ಜೂ. 25: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಿದ 3 ವಾರಗಳ ಬಳಿಕ ಇದೀಗ ಕೆಲವು ಜಿಲ್ಲೆಗಳಿಗೆ ತಾತ್ಕಾಲಿಕ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರ ಮತ್ತು ಹಾಸನದ ಉಸ್ತುವಾರಿ ನೀಡಲಾಗಿದೆ.
ಇನ್ನು ಕರಾವಳಿಯ ಪ್ರಭಾವಿ ನಾಯಕ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಜವಾಬ್ದಾರಿ ನೀಡಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ ತುಮಕೂರು ಮತ್ತು ಚಿತ್ರದುರ್ಗದ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಖಾತೆ ಹಂಚಿಕೆ ವೇಳೆ ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿ ಬಳಿಕ ತಣ್ಣಗಾದ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಬಡವರಿಗೆ ನಿವೇಶನದ ಬದಲು ಮನೆ ಕಟ್ಟಿ ಕೊಡಲು ಆದ್ಯತೆ ನೀಡಿ: ಸಿಎಂ ಡಿ.ಕೆ. ಶಿವಕುಮಾರ್
ಯಾರಿಗೆ ಯಾವ ಜಿಲ್ಲೆ?
- ಡಾ. ಜಿ. ಪರಮೇಶ್ವರ್-ತುಮಕೂರು ಮತ್ತು ಚಿತ್ರದುರ್ಗ
- ಕೃಷ್ಣ ಭೈರೇಗೌಡ-ಬೆಂಗಳೂರು ನಗರ ಮತ್ತು ಹಾಸನ
- ರಾಮಲಿಂಗಾರೆಡ್ಡಿ-ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
- ಕೆ.ಎಚ್. ಮುನಿಯಪ್ಪ-ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
- ಡಾ. ಯತೀಂದ್ರ ಸಿದ್ದರಾಮಯ್ಯ-ಮೈಸೂರು ಮತ್ತು ಚಾಮರಾಜನಗರ
- ಯು.ಟಿ. ಖಾದರ್-ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ
- ಎಂ.ಬಿ. ಪಾಟೀಲ್-ವಿಜಯಪುರ ಮತ್ತು ಬಾಗಲಕೋಟೆ
- ಪ್ರಿಯಾಂಕ್ ಖರ್ಗೆ-ಕಲಬುರಗಿ ಮತ್ತು ಯಾದಗಿರಿ
- ಸತೀಶ್ ಜಾರಕಿಹೊಳಿ-ಬೆಳಗಾವಿ, ಧಾರವಾಡ ಮತ್ತು ಹಾವೇರಿ
- ಕೆ.ಜೆ. ಜಾರ್ಜ್-ಚಿಕ್ಕಮಗಳೂರು ಮತ್ತು ದಾವಣಗೆರೆ
- ಈಶ್ವರ ಖಂಡ್ರೆ-ಬೀದರ್ ಮತ್ತು ಗದಗ
- ಭೈರತಿ ಸುರೇಶ್-ಕೋಲಾರ ಮತ್ತು ಚಿಕ್ಕಬಳ್ಳಾಪುರ
- ಡಾ. ಶರಣಪ್ರಕಾಶ್ ಪಾಟೀಲ್-ರಾಯಚೂರು ಮತ್ತು ಕೊಪ್ಪಳ
ತಾತ್ಕಾಲಿಕ ಹೊಣೆಗಾರಿಕೆ?
ಈ ಮಧ್ಯೆ ಇದು ಪೂರ್ಣ ಪ್ರಮಾಣದ ಅಧಿಕೃತ ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲ, ಬದಲಿಗೆ ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಾಗಿ ಮಾತ್ರ ಸಚಿವರಿಗೆ ಈ ತಾತ್ಕಾಲಿಕ ಹೊಣೆಗಾರಿಕೆಯನ್ನು ನೀಡಲಾಗಿದೆ ಎನ್ನುವ ಮಾತೂ ಕೇಳಿ ಬಂದಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರ ಎಕ್ಸ್ ಪೋಸ್ಟ್:
ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ "ಸ್ವಂತ ಮನೆ" ಎನ್ನುವುದು ಜೀವಮಾನದ ಅತಿ ದೊಡ್ಡ ಕನಸು. ಈ ಕನಸನ್ನು ನನಸು ಮಾಡುವುದು ನಮ್ಮ ಸರ್ಕಾರದ ಪರಮ ಆದ್ಯತೆಯಾಗಿದೆ.
— DK Shivakumar (@DKShivakumar) June 24, 2026
ಇಂದು ವಿಧಾನಸೌಧದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರಗತಿಯಲ್ಲಿರುವ ಯೋಜನೆಗಳ ವೇಗವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣವೇ ಸೌಲಭ್ಯ ತಲುಪಿಸಲು… pic.twitter.com/DDXaqhLB2x
ವಸತಿ ಯೋಜನೆಗೆ ವೇಗ ನೀಡಲು ಸೂಚನೆ
ಬಡವರು ಮತ್ತು ಮಧ್ಯಮ ವರ್ಗದವರ ಪಾಲಿನ ಬಹುದೊಡ್ಡ ಕನಸಾದ ಸ್ವಂತ ಮನೆಯನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರಗತಿಯಲ್ಲಿರುವ ಯೋಜನೆಗಳ ವೇಗವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣವೇ ಸೌಲಭ್ಯ ತಲುಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.
ಬಡವರಿಗೆ ಬರಿ ನಿವೇಶನ ಕೊಡುವ ಬದಲು, ತಲೆ ಮೇಲೊಂದು ಭದ್ರವಾದ ಸೂರು ಕಲ್ಪಿಸಲು ಮನೆ ಕಟ್ಟಿ ಕೊಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.