ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಭ್ರಷ್ಟ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಎಚ್ಚರಿಕೆ

DK Shivakumar: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿ ಗೌಡ ಅವರು, ಕೆಂಪೇಗೌಡ ಬಡಾವಣೆ ವಿಚಾರವಾಗಿ ಪ್ರಶ್ನೆ ಕೇಳಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹೇಳಿದಾಗ, ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅವರನ್ನು ಅಮಾನತು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Aug 14, 2025 5:26 PM

ಬೆಂಗಳೂರು: ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅವರನ್ನು ಅಮಾನತು ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಗುಡುಗಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿ ಗೌಡರು, ಕೆಂಪೇಗೌಡ ಬಡಾವಣೆ ವಿಚಾರವಾಗಿ ಪ್ರಶ್ನೆ ಕೇಳಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಗುರುವಾರ ಹೇಳಿದರು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಉತ್ತರಿಸಿದರು.

ʼಹಿರಿಯ ನಾಯಕರಾದ ಜವರೇಗೌಡರು ಅನೇಕ ಆರೋಪ ಮಾಡಿದ್ದಾರೆ. ಇಂತಹ ಪ್ರಕರಣ ನಡೆಯುತ್ತಿದ್ದರೆ, ಯಾರು, ಯಾರಿಗೆ ಹಣ ನೀಡಿದ್ದಾರೆ ಎಂದು ರೈತರಿಂದ ದೂರು ಬರೆಸಿ ಕೊಡಿ. ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಣ ಪಡೆದಿರುವ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಆಮೇಲೆ ತನಿಖೆ ನಡೆಸಲಾಗುವುದು. ಭೂಮಿ ಕಳೆದುಕೊಂಡ ರೈತನ ಕಷ್ಟ ಏನು ಎಂಬ ಅರಿವು ನಮಗಿದೆ. ಅವರಿಗೆ ಸಿಗುತ್ತಿರುವುದು 9,600 ಅಡಿಗಳು ಮಾತ್ರ. ಅಭಿವೃದ್ಧಿ ಆದ ನಂತರ ಆತನಿಗೆ ಸ್ವಲ್ಪ ಹಣ ಸಿಗಬಹುದು. 2013ರಲ್ಲಿ ಯುಪಿಎ ಸರ್ಕಾರ ತೆಗೆದುಕೊಂಡ ದಿಟ್ಟ ತೀರ್ಮಾನದ ನಂತರ ಎರಡು, ಮೂರು ಹಾಗೂ ನಾಲ್ಕು ಪಟ್ಟು ಹಣ ನೀಡುವ ತೀರ್ಮಾನವಾಗಿದೆ. ನಾವು 60:40 ಅನುಪಾತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆ ಜಾರಿಗೆ ತಂದಿದ್ದೇವೆʼ ಎಂದರು.

ಭೂಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಭೂಮಿಯನ್ನು ಬಿಡಲಾಗಿದೆ ಎಂಬ ಅಂಶವನ್ನು ಮಾನ್ಯ ಸದಸ್ಯರು ಹೇಳಿದ್ದು, ಕಾನೂನು ಬಾಹಿರವಾಗಿ ಬಿಟ್ಟಿದ್ದರೆ ಅದನ್ನು ತನಿಖೆ ಮಾಡಲು ಸಿದ್ಧವಿದ್ದೇವೆ. ಅಧಿಸೂಚನೆ ಹೊರಡಿಸಿದ ನಂತರ ಮಾರ್ಗಸೂಚಿಯಂತೆ ಎಲ್ಲವನ್ನೂ ನಡೆಸಬೇಕು. ತಮಗೆ ಬೇಕಾದವರ ಜಮೀನು ಕೈಬಿಡಲು ಸಾಧ್ಯವಿಲ್ಲ. ಆ ಭಾಗದ ಜನಪ್ರತಿನಿಧಿಯಾಗಿ ನೀವು ನಮಗೆ ಪ್ರಸ್ತಾವನೆ ನೀಡಿ. ನಾನು ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಪ್ರತಿ ವರ್ಷ 1 ಸಾವಿರ ಕೋಟಿ ರೂ. ನಷ್ಟ

“ಶಿವರಾಮ ಕಾರಂತ ಬಡವಾಣೆಯು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಿರ್ಮಾಣವಾಗುತ್ತಿದ್ದು, ಈಗ ಒಂದು ಹಂತಕ್ಕೆ ಬಂದಿದೆ. ಸರ್ಕಾರ ಸುಮಾರು 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಇದುವರೆಗೂ ಒಬ್ಬ ರೈತನಿಗೂ ಅಲ್ಲಿ ನಿವೇಶನ ನೀಡಲು ಆಗಿಲ್ಲ. ಈ ವಿಚಾರ ಹೇಳಲು ನನಗೆ ನೋವಾಗುತ್ತದೆ. ನಾನು ಬಂದ ನಂತರ ಅರ್ಜಿ ಹಾಕಲು ಅವಕಾಶ ನೀಡಿದೆ. ಆದರೆ ಹೈಕೋರ್ಟ್ ಅರ್ಜಿ ಸ್ವೀಕಾರದಲ್ಲೂ ಯಥಾಸ್ಥಿತಿ ಕಾಯುವಂತೆ ಆದೇಶಿಸಿದೆ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಜತೆ ಚರ್ಚೆ ಮಾಡುತ್ತಿದ್ದು, ರೈತರ ಆಕ್ಷೇಪದ ವಿಚಾರವಿದ್ದರೆ ಅದನ್ನು ವಿಚಾರಣೆ ಮಾಡಲಿ, ಆದರೆ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಿದರೆ ಕಷ್ಟವಾಗುತ್ತದೆ. ಈ ತಡೆಯಾಜ್ಞೆ ಇರುವ ಕಾರಣ ಸರ್ಕಾರಕ್ಕೆ ಪ್ರತಿ ವರ್ಷ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಈ ಜಮೀನು ಅಧಿಸೂಚನೆಯಾಗಿ 15 ವರ್ಷವಾಗಿದೆ. ಆ ಭಾಗದ ಕೆಲವು ರೈತರಿಗೆ ಒಂದು ರೂಪಾಯಿ ಹಣ ಕೂಡ ಸಿಕ್ಕಿಲ್ಲ. ಜಮೀನೂ ಇಲ್ಲವಾಗಿದೆ. ಸರ್ಕಾರ ಬಂಡವಾಳ ಹಾಕಿದ್ದು, ಈಗ ಅರ್ಜಿ ಮೂಲಕ ಬಂದ ಹಣದಿಂದ ಈ ರೈತರಿಗೆ ಹಣ ಪಾವತಿಸಲು ನೆರವಾಗುತ್ತದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಜಮೀನು ಕಳೆದುಕೊಂಡವರಿಗೆ ನಿವೇಶನ ಹಂಚುವ ವ್ಯವಸ್ಥೆ ಮಾಡುತ್ತೇನೆ. ನ್ಯಾಯಾಲಯ ಈ ವಿಚಾರದಲ್ಲಿ ಆದಷ್ಟು ಬೇಗ ವಿನಾಯಿತಿ ನೀಡುವ ವಿಶ್ವಾಸವಿದೆʼ ಎಂದರು.

ಈ ಪ್ರಕ್ರಿಯೆಯಲ್ಲಿ ಎಲ್ಲಾದರೂ ಅಕ್ರಮವಾಗಿದ್ದರೆ ದೂರು ಕೊಡಿ, ನಾವು ಯಾವುದೇ ಕ್ರಮಕ್ಕೂ ಸಿದ್ಧ. ನಿಮ್ಮ ಹಾಗೂ ರೈತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಪಾಲಿಕೆ ವತಿಯಿಂದಲೇ ಸರ್ ಎಂ.ವಿ. ಬಡಾವಣೆಯಲ್ಲಿ ಆಸ್ಪತ್ರೆ ನಿರ್ಮಾಣ

ಉಮಾಶ್ರೀ ಅವರು ಬಿಡಿಎ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 2ನೇ ಬ್ಲಾಕ್‌ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎ ನಿವೇಶನ 2011 ರಲ್ಲಿ ಮಂಜೂರು ಮಾಡಿರುವ ಬಗ್ಗೆ ಕೇಳಿದಾಗ, ʼನಾವು ಅಧಿಕಾರಕ್ಕೆ ಬಂದ ನಂತರ ನಿವೇಶನ ಹಸ್ತಾಂತರ ಮಾಡಲಾಗಿದೆ. ಪಾಲಿಕೆ ವತಿಯಿಂದಲೇ ಆಸ್ಪತ್ರೆ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಹಣ ಪಾವತಿಸಲಾಗಿದೆ. ಮುಂದೆ ಆರೋಗ್ಯ ಇಲಾಖೆ ನೆರವನ್ನು ಪಡೆಯುತ್ತೇವೆ. ಸದ್ಯಕ್ಕೆ ಪಾಲಿಕೆ ವತಿಯಿಂದಲೇ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಇದು ತಡವಾಗುತ್ತಿರುವುದಕ್ಕೆ ಕಾರಣವೇನು ಎಂದು ಪರಿಶೀಲಿಸಿ, ಅಧಿಕಾರಿಗಳಿಂದ ವಿಳಂಬವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.

ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧವಿಲ್ಲ

ಎಚ್.ಎಸ್. ಗೋಪಿನಾಥ್ ಅವರು ಪೆರಿಫೆರಲ್ ರಿಂಗ್ ರಸ್ತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, ʼಫೆರಿಫೆರಲ್ ರಿಂಗ್ ರಸ್ತೆ 2ಕ್ಕೆ ಮೊದಲ ಅಧಿಸೂಚನೆ ಬಂದಿದ್ದು 2005-06 ರಲ್ಲಿ. ಆದರೆ ಯಾವುದೇ ಸರ್ಕಾರ ಇದನ್ನು ಡಿನೋಟಿಫಿಕೇಷನ್ ಮಾಡಲಿಲ್ಲ. ಡಿನೋಟಿಫಿಕೇಶನ್ ಮಾಡದೇ ಪ್ಲಾನ್‌ಗಳಿಗೆ ಅನುಮತಿ ನೀಡಿಲ್ಲ. ಈಗ ಇದು ನನ್ನ ಕಾಲಕ್ಕೆ ಬಂದಿದೆ. ಇದನ್ನು ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ. ಇದು ನನ್ನ ವೈಯಕ್ತಿಕ ಹಾಗೂ ಸರ್ಕಾರದ ತೀರ್ಮಾನ. ಇದು ನೈಸ್ ರಸ್ತೆಗೆ ಪರ್ಯಾಯವಾಗಿ ಬರುತ್ತಿರುವ ರಸ್ತೆ. ಪಿಆರ್ ಆರ್ 1ಕ್ಕೆ 26 ಸಾವಿರ ಕೋಟಿ ರೂ. ಬೇಕಾಗಿದೆ. ಅಂದಿನ ಕಾಲದಲ್ಲೇ ಮಾಡಿದ್ದರೆ 4-5 ಸಾವಿರ ಕೋಟಿಯಲ್ಲಿ ಮುಗಿಯುತ್ತಿತ್ತು. ಬಿಡಿಎ ವ್ಯಾಪ್ತಿಯಲ್ಲಿ ಹೊಸ ಪರಿಹಾರ ನೀತಿ ಬರುವುದಿಲ್ಲ. ಆದರೂ ನಾವು ರೈತರಿಗೆ ತೊಂದರೆ ಮಾಡಬಾರದು ಎಂದು ಉತ್ತಮ ಪರಿಹಾರ ನೀಡಲಾಗುತ್ತಿದೆʼ ಎಂದರು.

ಪಿಆರ್ ಆರ್ 2 ಕೂಡ ಆರ್ಥಿಕವಾಗಿ ಸರಿದೂಗಬೇಕು. ಇದಕ್ಕೆ 27 ಸಾವಿರ ಕೋಟಿ ಸಾಲ ಮಾಡಲು ಆಗುವುದಿಲ್ಲ. ಇಲ್ಲಿ ಕೆಲವರು ಮನೆ ಕಟ್ಟಿದ್ದಾರೆ, ಕೆಲವರು ಕಟ್ಟಿಲ್ಲ ಎಂದು ಹೇಳಿದ್ದೀರಿ. ನಾವು ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ಪ್ರತಿ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ನಿಮ್ಮ ಸಲಹೆಗಳಿದ್ದರೆ ನೀಡಿ. ಆದರೆ ಈ ರಸ್ತೆ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಈ ಭಾಗದಲ್ಲಿ ಒಂದೇ ಕಡೆ 5 ಸಾವಿರ ಮನೆ ಇವೆ. ಎಲ್ಲವನ್ನು ಕೆಡವಲು ಆಗುತ್ತದೆಯೇ ಎಂಬ ಪ್ರಶ್ನೆ ಇದೆ. ಹೀಗಾಗಿ ಈ ಭಾಗದಲ್ಲಿ ಪರ್ಯಾಯ ಮಾರ್ಗ ಇದೆಯೇ ಎಂದು ಪರಿಶೀಲಿಸುತ್ತೇವೆ. ಪರಿಷತ್ ಸದಸ್ಯರಾಗಿ, ಆ ಭಾಗದ ಜನಪ್ರತಿನಿಧಿಯಾಗಿರುವುದರಿಂದ ನಿಮ್ಮನ್ನು ನಮ್ಮ ಅಧಿಕಾರಿಗಳ ಜತೆ ಕೂರಿಸಿ ಚರ್ಚೆಗೆ ಅವಕಾಶ ನೀಡುತ್ತೇನೆ. ನಿಮಗೆ ಯಾವುದು ಉತ್ತಮವೆನಿಸುತ್ತದೆಯೋ ಆ ಸಲಹೆ ನೀಡಿ. ಆದರೆ ಯೋಜನೆ ಕೈಬಿಡಲು ಸಾಧ್ಯವಿಲ್ಲʼ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿಕೆಶಿ

ಇಲ್ಲಿ ಪರಿಹಾರವನ್ನು ರೈತರಿಗೆ ನೀಡುತ್ತೀರೋ, ಅಥವಾ ಅಲ್ಲಿ ಮನೆ ಕಟ್ಟುಕೊಂಡಿರುವವರಿಗೆ ನೀಡುತ್ತೀರೋ ಎಂದು ಕೇಳಿದಾಗ, ʼಯಾರು ಆ ಜಾಗದಲ್ಲಿ ಇದ್ದಾರೋ, ಯಾರ ಬಳಿ ದಾಖಲೆಗಳಿವೆಯೋ ಅವರಿಗೆ ಪರಿಹಾರ ನೀಡುತ್ತೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದರು.