Darshan Bail Cancelled: ಮತ್ತೆ ಜೈಲು ಪಾಲಾದ ದರ್ಶನ್ ಮುಂದಿನ ನಡೆ ಏನು? ʼದಿ ಡೆವಿಲ್ʼ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮುಂದೂಡಿಕೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ, ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತೆ ಜೈಲು ಪಾಲಾಗಲಿದ್ದಾರೆ. ಈ ಮಧ್ಯೆ ದರ್ಶನ್ ಅಭಿನಯದ ʼಡಿ ಡೆವಿಲ್ʼ ಚಿತ್ರದ ಹಾಡಿನ ರಿಲೀಸ್ ಮುಂದೂಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಹಾಡು ಆಗಸ್ಟ್ 15ರ ಬೆಳಗ್ಗೆ 10:05ಕ್ಕೆ ರಿಲೀಸ್ ಆಗಬೇಕಿತ್ತು.


ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ, ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ (Actor Darshan) ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಅವರು ಮತ್ತೆ ಜೈಲು ಪಾಲಾಗಲಿದ್ದಾರೆ (Darshan Bail Cancelled). ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಈ ಮಧ್ಯೆ ʼದಿ ಡೆವಿಲ್ʼ (The Devil) ಚಿತ್ರದ ಮೊದಲ ಹಾಡಿನ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ. ಆಗಸ್ಟ್ 15ರ ಬೆಳಗ್ಗೆ 10:05ಕ್ಕೆ ʼದಿ ಡೆವಿಲ್ʼ ಸಿನಿಮಾದ ʼಇದ್ರೆ ನೆಮ್ದಿಯಾಗ್ ಇರ್ಬೇಕ್' ಹಾಡು ಬಿಡುಗಡೆಯಾಗಬೇಕಿತ್ತು. ಇದೀಗ ದರ್ಶನ್ ಮತ್ತೆ ಜೈಲು ಪಾಲಾದ ಹಿನ್ನೆಲೆಯಲ್ಲಿ ಹಾಡಿನ ರಿಲೀಸ್ ಅನ್ನು ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನಷ್ಟೇ ಘೋಷಿಸಬೇಕಿದೆ.
ಪ್ರಕಾಶ್ ವೀರ್ ನಿರ್ದೇಶನದ ʼದಿ ಡೆವಿಲ್ʼ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಹಾಡಿಗಾಗಿ ಕಾದು ಕುಳಿತ್ತಿದ್ದರು. 2023ರಲ್ಲಿ ತೆರೆಕಂಡ ʼಕಾಟೇರʼದ ಬಳಿಕ ದರ್ಶನ್ ಅಭಿನಯದ ಯಾವ ಸಿನಿಮಾವೂ ರಿಲೀಸ್ ಆಗಿಲ್ಲ. ಈ ಹಿನ್ನೆಲೆಯಲ್ಲ ʼದಿ ಡೆವಿಲ್ʼ ಭಾರಿ ನಿರೀಕ್ಷೆ ಮೂಡಿಸಿದ್ದು, ಜಾಮೀನು ಪಡೆದು ಹೊರ ಬಂದ ಬಳಿಕ ದರ್ಶನ್ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅಲ್ಲದೆ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿದ್ದಾರೆ. ಹೀಗಾಗಿ ಈ ವರ್ಷ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ. ಈ ಮಧ್ಯೆ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದು, ಸಿನಿಮಾದ ಭವಿಷ್ಯದ ಬಗ್ಗೆ ಮತ್ತೆ ಆತಂಕ ಮೂಡಿದೆ. ಹಾಡಿನ ರಿಲೀಸ್ ಡೇಟ್ ಮುಂದೂಡಿಕೆಯಾದ ಬಗ್ಗೆ ನಿರ್ಮಾಣ ಸಂಸ್ಥೆ ಶ್ರೀ ಜೈಮಾತಾ ಕಂಬೈನ್ಸ್ ಇದೀಗ ಅಧಿಕೃತವಾಗಿ ಘೋಷಿಸಿದೆ.
The song release scheduled for tomorrow has been cancelled for now. pic.twitter.com/D7AkG5xXtL
— Shri Jaimatha Combines (@sjmcfilms) August 14, 2025
ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್
ದರ್ಶನ್ ಮುಂದಿನ ಆಯ್ಕೆ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆ. ಹಾಗಾದರೆ ದರ್ಶನ್ ಮುಂದಿನ ಆಯ್ಕೆ ಏನು ಎನ್ನುವ ಪ್ರಶ್ನೆ ಮೂಡಿದೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿರುವ ಕಾರಣ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿಲ್ಲ. ಆದ್ದರಿಂದ ದರ್ಶನ್ ಕನಿಷ್ಠ 6 ತಿಂಗಳ ಕಾಲ ದರ್ಶನ್ ಜೈಲಿನಲ್ಲಿ ಕಡ್ಡಾಯವಾಗಿ ಕಾಲ ಕಳೆಯಲೇಬೇಕಾಗಿದೆ. ಅದಾದ ಬಳಿಕ ಜಾಮೀನಿಗೆ ಮತ್ತೊಮ್ಮೆ ಅರ್ಜಿ ಹಾಕಬಹುದಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಆರೋಗ್ಯದ ನೆಪದಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಅವಕಾಶವೂ ದರ್ಶನ್‌ಗೆ ಇದೆ. ಗಂಭೀರ ಆರೋಗ್ಯದ ಸಮಸ್ಯೆ ಇದ್ದಲ್ಲಿ ಮಾತ್ರವೇ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗಲಿದೆ ಎನ್ನಲಾಗಿದೆ.
ಆದೇಶ ಸ್ವಾಗತಿಸಿದ ನಟಿ ರಮ್ಯಾ
ʼʼಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನು ರದ್ದುಗೊಂಡಿದೆ. ಇದು ಕಾನೂನಿನ ಮುಂದೆ ಎಲ್ಲರೂ ಸಮಾನ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ನಮ್ಮ ಕರ್ತವ್ಯವನ್ನು ನಾವು ಮಾಡೋಣ. ಕಾನೂನಿನ ಮೇಲೆ ನಂಬಿಕೆ ಇಡೋಣ. ಹಾದಿ ಕಷ್ಟ ಇರಬಹುದು. ಆದರೆ ಕೊನೆಯಲ್ಲಿ ಬರವಸೆಯ ಬೆಳಕು ಇದ್ದೇ ಇದೆ. ಕಾನೂನನ್ನು ಎಂದೂ ಕೈಗೆ ತಗೋಬೇಡಿ. ನ್ಯಾಯ ಎಲ್ಲರಿಗೂ ಸಿಕ್ಕೇ ಸಿಗುತ್ತದೆʼʼ ಎಂದು ಅವರು ಬರೆದುಕೊಂಡಿದ್ದಾರೆ.