ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ತುಂಗಭದ್ರಾ ಜಲಾಶಯದ 27 ಟಿಎಂಸಿ ನೀರು ಸದ್ಬಳಕೆ: ಆಂಧ್ರ, ತೆಲಂಗಾಣಗಳ ಜತೆ ಚರ್ಚೆ: ಡಿಕೆಶಿ

DK Shivakumar: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ನವಲಿ ಸಮಾನಾಂತರ ಜಲಾಶಯ ಹಾಗೂ ಮತ್ತೊಂದು ಪರ್ಯಾಯ ಯೋಜನೆ ವಿಚಾರವಾಗಿ ಆಂಧ್ರ, ತೆಲಂಗಾಣಗಳ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ 27 ಟಿಎಂಸಿ ನೀರು ಸದ್ಬಳಕೆಗೆ ಕ್ರಮ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Mar 11, 2025 6:57 PM

ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ (Tungabhadra Reservoir) ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ನವಲಿ ಸಮಾನಾಂತರ ಜಲಾಶಯ ಹಾಗೂ ಮತ್ತೊಂದು ಪರ್ಯಾಯ ಯೋಜನೆ ವಿಚಾರವಾಗಿ ಆಂಧ್ರ, ತೆಲಂಗಾಣಗಳ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆಯಿಂದ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ, ಮಾನ್ವಿ ಹಾಗೂ ರಾಯಚೂರು ತಾಲೂಕಿಗೆ ಎರಡು ಏತ ನೀರಾವರಿ ಯೋಜನೆಗಳ ಮೂಲಕ ಕೃಷ್ಣ ನದಿ ಮೂಲಕ ನೀರು ಒದಗಿಸಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್, ಇದು ರಾಜ್ಯಕ್ಕೆ ಪ್ರಮುಖವಾದ ವಿಚಾರ. ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣದಿಂದ 27 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ನವಲಿ ಜಲಾಶಯ ಮಾಡಲು ಯೋಜನೆ ರೂಪಿಸಲಾಗಿದ್ದು, ಈ ಮಧ್ಯೆ ಇದಕ್ಕೆ ತುಂಗಭದ್ರಾ ಮಂಡಳಿಯ ಮುಂದೆ ಪರ್ಯಾಯವಾಗಿ ಪ್ರಸ್ತಾವನೆಯೊಂದು ಬಂದಿದೆ. ಈ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣಗಳು ಪರಿಶೀಲನೆ ಮಾಡುತ್ತಿವೆ. ನಾನು ಈಗಾಗಲೇ ತೆಲಂಗಾಣ ನೀರಾವರಿ ಸಚಿವರ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಚರ್ಚೆ ಮಾಡಲು ಸಮಯ ನೀಡುವುದಾಗಿ ಉಭಯ ರಾಜ್ಯಗಳು ಹೇಳಿದ್ದು, ಸಮಯ ನಿಗದಿಯಾದ ಬಳಿಕ ಆಂಧ್ರ ಪ್ರದೇಶ ಸಿಎಂ ಜತೆ ಚರ್ಚೆ ಮಾಡಿ ಇದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಓದಿ | CM Siddaramaiah: ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ: ಸಿದ್ದರಾಮಯ್ಯ

ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಅಧಿಕಾರಿಗಳು ಭೀಮಾ ನದಿಯ ಯೋಜನೆಗಳ ಮೂಲಕ 58,663 ಹೆಕ್ಟೇರ್ ಪ್ರದೇಶಗಳಲ್ಲಿ ನೀರಾವರಿ ಒದಗಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದು, ಉಪಮುಖ್ಯಮಂತ್ರಿ ಈ ವಿಚಾರವಾಗಿ ಸಮೀಕ್ಷೆ ಮಾಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್ ಅವರು ಬೆಣ್ಣೆತೊರೆ ಹಾಗೂ ಇತರ ನೀರಾವರಿ ಯೋಜನೆ ಮೂಲಕ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಸದಸ್ಯರು ನಿಯೋಗವನ್ನು ಕರೆದುಕೊಂಡು ಈ ಭಾಗದಲ್ಲಿ ಚರ್ಚೆ ಮಾಡಬೇಕು ಎಂದು ಕೇಳಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.