ಬೆಂಗಳೂರು, ಮೇ 30: ಕರ್ನಾಟಕದ ರಾಜಕೀಯ ವಲಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಅಂತಿಮ ತೆರೆ ಬಿದ್ದಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೂನ್ 3ರಂದು (ಬುಧವಾರ) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಬಲವಾಗಿವೆ.
ಮೂಲಗಳ ಪ್ರಕಾರ, ಬುಧವಾರ (ಜೂನ್ 3) ಸಂಜೆ 4 ಗಂಟೆಯ ಬಳಿಕ ಬೆಂಗಳೂರಿನ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಭವ್ಯ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆಗಳು ಆರಂಭವಾಗಿವೆ ಎನ್ನಲಾಗಿದೆ.
ಇದರ ಮಧ್ಯೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಗೆ ಮುನ್ನವೇ ಡಿ.ಕೆ. ಶಿವಕುಮಾರ್ ರಾಜ್ಯಪಾಲರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಪ್ರಕ್ರಿಯೆ ನಡೆಯುತ್ತದೆ. ಆದರೆ ರಾಜ್ಯಪಾಲರು ಇಂದು ಸಂಜೆ ಧರ್ಮಸ್ಥಳ ಪ್ರವಾಸಕ್ಕೆ ತೆರಳಲಿರುವ ಕಾರಣ, ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಮುಂಚಿತವಾಗಿ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ?
ರಾಜ್ಯಪಾಲರ ಭೇಟಿಯ ವೇಳೆ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಾಥಮಿಕ ಚರ್ಚೆಗಳು ನಡೆಯುವ ಸಾಧ್ಯತೆ ಇದ್ದು, ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದರ ನಂತರ ಸರ್ಕಾರ ರಚನೆಗೆ ಆಹ್ವಾನ ನೀಡುವ ಸಂವಿಧಾನಾತ್ಮಕ ಪ್ರಕ್ರಿಯೆಗಳು ಆರಂಭವಾಗಲಿವೆ.
ಡಿ.ಕೆ. ಶಿವಕುಮಾರ್ ಅವರ ಆಗಮನದ ಹಿನ್ನೆಲೆ ಲೋಕಭವನ ಮತ್ತು ರಾಜಭವನ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಪಿ ಹಾಗೂ ನಗರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಮಾಣವಚನ ಸಮಾರಂಭದಲ್ಲಿ ಹಲವು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹಾಗೂ ಮೈತ್ರಿ ಪಕ್ಷಗಳ ಗಣ್ಯರು ಭಾಗವಹಿಸುವ ಸಾಧ್ಯತೆಯೂ ಇದೆ.
ರಾಜಕೀಯ ವಲಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರದೊಂದಿಗೆ ರಾಜ್ಯದ ಆಡಳಿತ ಮತ್ತು ಸಚಿವ ಸಂಪುಟದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆಯೂ ವ್ಯಕ್ತವಾಗುತ್ತಿದೆ. ಆದಾಗ್ಯೂ, ಕಾಂಗ್ರೆಸ್ ಹೈಕಮಾಂಡ್‌ನ ಅಧಿಕೃತ ಘೋಷಣೆಯ ಬಳಿಕವೇ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.