DG-IGP Karnataka: ನೂತನ ಡಿಜಿ-ಐಜಿಪಿಯಾಗಿ ಡಾ. ಎಂ.ಎ. ಸಲೀಮ್ ನೇಮಕ; ರಾಜ್ಯ ಸರ್ಕಾರದಿಂದ ಅಧಿಸೂಚನೆ
DG-IGP Karnataka: 1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಸಲೀಂ ಅವರು ಸಿಐಡಿಯ ಡಿಜಿಪಿ ಆಗಿದ್ದರು. ಅಲೋಕ್ ಮೋಹನ್ ನಿವೃತ್ತರಾದ ನಂತರ ಹಂಗಾಮಿ ಡಿಜಿಪಿಯಾಗಿ ಸಲೀಮ್ ಅವರನ್ನು ನೇಮಕ ಮಾಡಲಾಗಿತ್ತು. ಇವರು ಮೇ 21ರಿಂದ ಪ್ರಭಾರ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

-

ಬೆಂಗಳೂರು: ರಾಜ್ಯ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿ-ಐಜಿಪಿ) (DG-IGP Karnataka) ಡಾ. ಎಂ. ಎ. ಸಲೀಮ್ (Dr. M.A. Saleem) ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ್ ಅವರು ಶನಿವಾರ ಅಧಿಸೂಚನೆ ಹೊರಡಿಸಿದ್ದಾರೆ.
ಅಪರಾಧ ತನಿಖಾ ವಿಭಾಗ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯಾಗಿರುವ ಡಾ. ಎಂ. ಎ. ಸಲೀಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಮಹಾ ನಿರ್ದೇಶಕರಾಗಿ (ಪೊಲೀಸ್ ಪಡೆ ಮುಖ್ಯಸ್ಥರು) ನೇಮಕ ಮಾಡಲಾಗಿದೆ. ಐಪಿಎಸ್ (ವೇತನ) ನಿಯಮಗಳು, 2016ರ ವೇತನ ಮ್ಯಾಟ್ರಿಕ್ಸ್ ಪ್ರಕಾರ ಮಾಸಿಕ 2,25,000 ರೂ. ವೇತನ ನಿಗದಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಸಲೀಂ ಅವರು ಅಲೋಕ್ ಮೋಹನ್ ನಿವೃತ್ತರಾದ ನಂತರ ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡರು. ಡಾ. ಸಲೀಂ ಪ್ರಸ್ತುತ ಸಿಐಡಿಯ ಡಿಜಿಪಿ ಆಗಿದ್ದಾರೆ. ಇದರ ಜತೆಗೆ ರಾಜ್ಯದ ಡಿಜಿಪಿ ಮತ್ತು ಐಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸುತ್ತಿದ್ದರು.
ಈ ಹಿಂದೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ. ಅಲೋಕ್ ಮೋಹನ್ ಅವರು 2025ರ ಏಪ್ರಿಲ್ 30ರಂದು ನಿವೃತ್ತರಾಗಿದ್ದರು. ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಿಸಲಾಗಿತ್ತು. ಅಲೋಕ್ ಮೋಹನ್ ಅವರ ನಿವೃತ್ತಿಯ ಬಳಿಕ ಡಾ. ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಈಗ ಕೇಂದ್ರ ಗೃಹ ಇಲಾಖೆಯಿಂದ ಮೂವರು ಡಿಜಿಪಿ ರ‍್ಯಾಂಕ್‌ನ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಪರಿಗಣಿಸಿ, ಡಾ. ಸಲೀಂ ಅವರನ್ನು ಕಾಯಂ ಡಿಜಿಪಿಯಾಗಿ ಆಯ್ಕೆ ಮಾಡಲಾಗಿದೆ. ಇವರು ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.