Union Minister V Somanna: ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಬೇಕಿಲ್ಲ : ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ
ಗುಬ್ಬಿಯ ಮುದಿಗೆರೆ ಸಮೀಪದಿಂದ ಮತ್ತಿಘಟ್ಟ ಗ್ರಾಮದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ. 27 ಕೋಟಿ ಈಗಾಗಲೇ ಹಣ ಬಿಡುಗಡೆಯಾಗಿದೆ. ಈ ಪೈಕಿ ಮೂರು ಕಿಮೀ ಡಿವೈಡರ್ ನಿರ್ಮಾಣ ಆಗಲಿದೆ. ಶಾಸಕರ ಮನವಿ ಮೇರೆಗೆ ಹೆಚ್ಚುವರಿ 7 ಕೋಟಿ ಹಣದಲ್ಲಿ ಚರಂಡಿ ವ್ಯವಸ್ಥೆ ರಸ್ತೆಯ ಎರಡೂ ಬದಿ ನಿರ್ಮಾಣ ಆಗಲಿದೆ

-

ಗುಬ್ಬಿ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಕನಸು ಕಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಅಭಿವೃದ್ದಿ ಕೆಲಸ ನಡೆಸಲು ಯಾವುದೇ ರಾಜಕಾರಣ ಮಾಡದೆ ಯಾವುದೇ ಪಕ್ಷದ ಶಾಸಕ ಸಂಸದರಾಗಿರಲಿ ಅವರನ್ನು ಜೊತೆಗೆ ಕರೆದೊಯ್ಯುವ ಕೆಲಸ ಮಾಡಲು ಸೂಚಿಸಿ ದ್ದಾರೆ ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಮೇಲ್ಸೇತುವೆ ಮತ್ತು ಹೆದ್ದಾರಿ ರಸ್ತೆ ವೈಟ್ ಟ್ಯಾಪಿಂಗ್ ಗುದ್ದಲಿ ಪೂಜೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ಸಾರ್ವಜನಿಕರ ಕೆಲಸ ಯಾವುದೇ ತಡೆ ಇಲ್ಲದೆ ನಡೆಸಲು ಸೂಚನೆ ನೀಡಿದ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳು ರಾಜ್ಯದಲ್ಲಿ ನಿರಂತರ ನಡೆದಿದೆ ಎಂದರು.
ಇದನ್ನೂ ಓದಿ: Gubbi News: ನವಂಬರ್ ಮಾಹೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಕಸಾಪ ಪೂರ್ವಭಾವಿ ಸಭೆಯಲ್ಲಿ ಚಿಂತನೆ
ರೈಲ್ವೆ ಅಭಿವೃದ್ದಿ ಕೆಲಸಗಳಿಗೆ ಕೇಂದ್ರ ಸರ್ಕಾರ ಎರಡು ಲಕ್ಷ ಕೋಟಿಗೂ ಅಧಿಕ ಹಣ ನೀಡಿದೆ. ಈ ಪೈಕಿ ರಾಜ್ಯದಲ್ಲಿ 49 ಸಾವಿರ ಕೋಟಿ ಕೆಲಸ ನಡೆದಿದ್ದು, ತುಮಕೂರು ಜಿಲ್ಲೆಯಲ್ಲಿ 14 ಸಾವಿರ ಕೋಟಿ ಕೆಲಸ ನಡೆದಿದೆ ಎಂದ ಅವರು ಅತಿ ಹೆಚ್ಚು ರೈಲ್ವೆ ಗೇಟ್ ಹೊಂದಿರುವ ಗುಬ್ಬಿ ತಾಲ್ಲೂಕಿ ನಲ್ಲಿ ಸೇತುವೆ ನಿರ್ಮಾಣ ಇನ್ನೂ ಕೆಲವು ಬಾಕಿ ಇದೆ. ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ತುಮಕೂರು ಬೈಪಾಸ್ ಎರಡು ಹಂತದಲ್ಲಿ ಕೆಲಸ ನಡೆದಿದೆ. ಇನ್ನೂ ಬಾಕಿ ಇರುವ 40 ಕಿಮೀ ಕೆಲಸಕ್ಕೆ 2650 ಕೋಟಿ ಮಂಜೂರು ಮಾಡಲಾಗಿದೆ. ಉಳಿದ ಎರಡು ಕೆಲಸ ಡಿಪಿಆರ್ ಮಾಡಲಾಗುತ್ತಿದೆ ಎಂದರು.
ಗುಬ್ಬಿಯ ಮುದಿಗೆರೆ ಸಮೀಪದಿಂದ ಮತ್ತಿಘಟ್ಟ ಗ್ರಾಮದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ. 27 ಕೋಟಿ ಈಗಾಗಲೇ ಹಣ ಬಿಡುಗಡೆಯಾಗಿದೆ. ಈ ಪೈಕಿ ಮೂರು ಕಿಮೀ ಡಿವೈಡರ್ ನಿರ್ಮಾಣ ಆಗಲಿದೆ. ಶಾಸಕರ ಮನವಿ ಮೇರೆಗೆ ಹೆಚ್ಚುವರಿ 7 ಕೋಟಿ ಹಣದಲ್ಲಿ ಚರಂಡಿ ವ್ಯವಸ್ಥೆ ರಸ್ತೆಯ ಎರಡೂ ಬದಿ ನಿರ್ಮಾಣ ಆಗಲಿದೆ ಎಂದರು.
ಅನಿರೀಕ್ಷಿತವಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಂದೆ. ಆದರೆ ಬಹುಮತದ ಆಶೀರ್ವಾದ ಮಾಡಿದ್ದಾರೆ. ಜನತೆಯ ಋಣ ನನ್ನ ಮೇಲಿದೆ. ಈ ನಿಟ್ಟಿನಲ್ಲಿ ನನ್ನ ಖಾತೆಯ ಕೆಲಸಗಳು ಜಿಲ್ಲೆ ಯಲ್ಲಿ ಅಚ್ಚುಕಟ್ಟಾಗಿ ನಡೆಯಲಿದೆ ಎಂದ ಅವರು ನರೇಂದ್ರ ಮೋದಿ ಅವರ ಹುಟ್ಟುಹಬ್ಬ ದೇಶ ವ್ಯಾಪಿ ಅದ್ದೂರಿಯಾಗಿ ನಡೆಯಲಿದೆ. ಅವರ ಕನಸಿನಂತೆ ದೇಶ ಕಟ್ಟುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಾಣ್ಯದ ಎರಡು ಮುಖದಂತೆ ಅಭಿವೃದ್ದಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಗುಬ್ಬಿ ಶಾಸಕರನ್ನು ಬಲವಂತವಾಗಿ ಕಾರ್ಯಕ್ರಮಕ್ಕೆ ಕರೆದು ತಂದಿದ್ದೇನೆ. ತಾಲ್ಲೂಕಿನಲ್ಲಿ ಬಾಕಿ ಇರುವ ಹಾಗೂ ತುರ್ತು ಕೆಲಸಗಳ ಪಟ್ಟಿ ಮಾಡಿ ಕೊಡಿ ಎಂದು ಹೇಳಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಸಂಸದ ಸೋಮಣ್ಣ ಅವರು ಕ್ರಿಯಾಶೀಲ ವ್ಯಕ್ತಿಯಾಗಿ ದ್ದಾರೆ. ಅಭಿವೃದ್ದಿ ಕೆಲಸಗಳಿಗೆ ಪಕ್ಷಾತೀತ ನಿಲುವು ತಾಳುತ್ತಾರೆ. ಚೇಳೂರು ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಬಹು ವರ್ಷದ ಕನಸು. ಇದು ಸೋಮಣ್ಣ ಅವರಿಂದ ಸಾಧ್ಯವಾಗಿದೆ. ಅಜರಾಮರ ಕೆಲಸಗಳು ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಅವರ ವಿರುದ್ಧ ಮಾತನಾಡಿದ್ದೇನೆ. ಆದರೆ ನನ್ನ ಬಳಿ ವಿನಯವಾಗಿ ನಡೆದುಕೊಂಡು ನನಗೆ ಅಚ್ಚರಿ ತಂದಿದೆ. ಇಂತಹ ವ್ಯಕ್ತಿ ಸಮಾಜಕ್ಕೆ ಅತ್ಯವಶ್ಯ ಹಾಗೂ ಔಚಿತ್ಯ ಎನಿಸಿದೆ. ರಾಜಕೀಯ ನಿವೃತ್ತಿ ಘೋಷಿಸದೆ ಮತ್ತೇ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳಿದ ಅವರು ಕೆಲಸಗಳಿಗೆ ಯಾವುದೇ ಶಾಸಕರಾಗಲಿ ಅವರನ್ನು ಸಂಪರ್ಕಿಸಿ ಚರ್ಚಿಸುತ್ತಾರೆ. ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಅವರ ಕಾರ್ಯ ವೈಖರಿ ಜಿಲ್ಲೆಗೆ ನಿರಂತರ ಸಿಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾ ಧ್ಯಕ್ಷೆ ಶ್ವೇತಾ, ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ನಾಗರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಬ್ರಹ್ಮಕಾರ್, ರೈಲ್ವೆ ಸಿಇಓ ಸಂಜಿತ್ ರಾಜೇಶ್ ಶರ್ಮಾ, ಡಿಆರ್ ಎಂಓ ಅತುಷ್ ಸಿಂಗ್, ಪ್ರದೀಪ್ ಪೂರಿ, ಅನುಷ್ ಶರ್ಮಾ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.