Mysuru Dasara 2025: 3 ಸಾವಿರ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ; ಗಿನ್ನೆಸ್ ದಾಖಲೆ ಬರೆದ ಈ ಬಾರಿಯ ದಸರಾ
ಈ ವರ್ಷದ ಮೈಸೂರು ದಸರಾ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 3ಸಾವಿರಕ್ಕೂ ಅಧಿಕ ಡ್ರೋನ್ ಕಲಾಕೃತಿಗಳ ನಿರ್ಮಾದ ಮೂಲಕ ಈ ದಾಖಲೆ ದಸರಾ ಸಂಭ್ರಮವನ್ನು ಮತ್ತಷ್ಟು ಮೆರುಗುಗೊಳಿಸಿದೆ. ಈ ಕುರಿತ ವರದಿ ಇಲ್ಲಿದೆ.
ಸೆಪ್ಟೆಂಬರ್ 28 ರಂದು ಬನ್ನಿಮಂಟಪದ ಟಾರ್ಚ್‌ಲೈಟ್ ಪೆರೇಡ್ ಮೈದಾನದಲ್ಲಿ ಐತಿಹಾಸಿಕ ಡ್ರೋನ್ ಪ್ರದರ್ಶನದೊಂದಿಗೆ ಈ ಬಾರಿಯ ಮೈಸೂರು ದಸರಾದ ಮೆರುಗು ಮತ್ತಷ್ಟು ಹೆಚ್ಚಿದೆ.
ಆಗಸದಲ್ಲಿ ಮೂಡಿ ಬಂಡ 2,983 ಡ್ರೋನ್‌ಗಳ ಕಲಾಕೃತಿಯು ಲಕ್ಷಾಂತರ ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು. ಈ ಅದ್ಭುತ ಪ್ರದರ್ಶನವು ಮೈಸೂರು ದಸರಾವನ್ನು ಗಿನ್ನೆಸ್ ವಿಶ್ವ ದಾಖಲೆಗಳಿಗೆ ಅಧಿಕೃತವಾಗಿ ಸೇರಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.
ದಸರಾ ಮಹೋತ್ಸವದ ಭಾಗವಾಗಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ದಾಖಲೆಯ ಡ್ರೋನ್ ಪ್ರದರ್ಶನವನ್ನು ಆಯೋಜಿಸಿತು. ಆರಂಭದಲ್ಲಿ, ತಂಡವು 2024 ರ ಕಾರ್ಯಕ್ರಮದ ಪ್ರಮಾಣವನ್ನು ಪ್ರತಿಬಿಂಬಿಸುವ 1,500 ಡ್ರೋನ್‌ಗಳನ್ನು ನಿಯೋಜಿಸಲು ಯೋಜಿಸಿತ್ತು - ಆದರೆ ನಂತರ ಸಂಖ್ಯೆಯನ್ನು 3,000 ಕ್ಕೆ ಹೆಚ್ಚಿಸಿತು, ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಬೆರಗುಗೊಳಿಸುವ ಚಿತ್ರವನ್ನು ರೂಪಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರೋಮಾಂಚಕಾರಿ ಡ್ರೋನ್ ಪ್ರದರ್ಶನದ ಕೇಂದ್ರಬಿಂದುವಾಗಿದ್ದ ಹುಲಿಯ ಚಿತ್ತಾರ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಈ ಸಾಧನೆಯನ್ನು ಅಧಿಕೃತವಾಗಿ ಮೌಲ್ಯೀಕರಿಸಲು, CESC ಲಂಡನ್‌ನಿಂದ ವಾಯುಯಾನ ಎಂಜಿನಿಯರ್‌ಗಳು, ಲೆಕ್ಕಪರಿಶೋಧಕರು ಮತ್ತು ಕಾನೂನು ತಜ್ಞರನ್ನು ಒಳಗೊಂಡ ಪ್ರಮಾಣೀಕರಣ ತಂಡವನ್ನು ಕರೆಸಿತು.
ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರನ್ನು ರಂಜಿಸಿದವು.