ಬೆಂಗಳೂರು: ರಾಜ್ಯಾದ್ಯಂತ ಸದ್ಯ ಚಳಿಗಾಲದ ಒಣ ಹವೆ ಮುಂದುವರಿದಿದ್ದು, ಮುಂಜಾನೆ ಹಾಗೂ ರಾತ್ರಿಯ ವೇಳೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಹಗಲಿನಲ್ಲಿ ಬಿಸಿಲಿನ (Karnataka Weather) ವಾತಾವರಣ ಕಂಡುಬರುತ್ತಿದ್ದರೂ, ಮುಂಜಾನೆ ಮಂಜು ಕವಿದ ವಾತಾವರಣ ಸಾಮಾನ್ಯವಾಗಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಮುನ್ಸೂಚನೆಯ ಪ್ರಕಾರ, ಇಂದು (ನವೆಂಬರ್ 21) ಮತ್ತು ನಾಳೆ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯ ಮುನ್ಸೂಚನೆಯಿಲ್ಲ. ಆದರೆ, ನವೆಂಬರ್ 23 ಹಾಗೂ 24ರ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಇಂದು ಸಂಪೂರ್ಣ ಒಣ ಹವೆ ಇರಲಿದೆ. ಕಳೆದ ಕೆಲವು ದಿನಗಳಿಂದ ಮಳೆ ಬಿಡುವು ನೀಡಿದ್ದು, ಕರಾವಳಿ ತೀರದಲ್ಲಿ ಶುಷ್ಕ ಗಾಳಿ ಬೀಸುತ್ತಿದೆ. ಇಂದು ಮತ್ತು ನಾಳೆ ಯಾವುದೇ ಮಳೆಯ ಮುನ್ಸೂಚನೆಯಿಲ್ಲದಿದ್ದರೂ, ನವೆಂಬರ್ 24ರಿಂದ 26ರವರೆಗೆ ಕರಾವಳಿಯ ಕೆಲವೆಡೆ ಗುಡುಗು ಸಹಿತ ಚದುರಿದ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿದಿದೆ. ಈ ಭಾಗದಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ಕನಿಷ್ಠ ತಾಪಮಾನದಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಚಳಿಯ ಅನುಭವ ಹೆಚ್ಚಾಗಿದೆ. ಇಂದು ಮತ್ತು ನಾಳೆ ಒಣ ಹವೆ ಇರಲಿದ್ದು, ನವೆಂಬರ್ 24ರಿಂದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಹಾಗೂ ಇಬ್ಬನಿ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಕಾಣಿಸಿಕೊಳ್ಳಲಿದೆ. ನವೆಂಬರ್ 23ರಿಂದ ದಕ್ಷಿಣ ಒಳನಾಡಿನಲ್ಲಿ ಹವಾಮಾನ ಬದಲಾಗಲಿದ್ದು, ನವೆಂಬರ್ 24ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.