Electricity Price Hike: ವಿದ್ಯುತ್ ಗ್ರಾಹಕರಿಗೆ ಶಾಕ್, ಕೆಇಆರ್‌ಸಿಯಿಂದ ದರ ಏರಿಕೆ
ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ (Electricity Price Hike) ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ.


ಬೆಂಗಳೂರು: ಬಸ್ ಟಿಕೆಟ್ (Bus ticket) ದರ ಹೆಚ್ಚಳ, ಮೆಟ್ರೋ ಪ್ರಯಾಣ ದರ ಸೇರಿದಂತೆ ನಾನಾ ಬಗೆಯ ಬೆಲೆ ಏರಿಕೆಗಳ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ಇದೀಗ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ (Electricity Price Hike) ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ.
ದರಗಳು ಹಂತ ಹಂತವಾಗಿ ಏರಿಕೆಯಾಗಲಿವೆ. 2025-26ರ ಅವಧಿಯಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳವಾಗಲಿದೆ. 2026-27ರ ಅವಧಿಯಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ, 2027-28ರ ಅವಧಿಯಲ್ಲಿ ಪ್ರತಿ ಯೂನಿಟ್‌ಗೆ 34 ಪೈಸೆ ಹೆಚ್ಚಳವಾಗಲಿದೆ. ಈ ಹೆಚ್ಚಳದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 8519 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ಆದರೆ, ಈಗಾಗಲೇ ವಿದ್ಯುತ್ ಸಂಸ್ಥೆಗಳಿಗೆ ಸುಮಾರು 4659 ಕೋಟಿ ರೂಪಾಯಿಗಳಷ್ಟು ಪಿಂಚಣಿ ಮತ್ತು ಗ್ರಾಚ್ಯುಟಿ ಬಾಕಿ ಇದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಆಟೋ ದರ ಏರಿಕೆಗೂ ಸರ್ಕಾರ ಸಮ್ಮತಿ ನೀಡಿತ್ತು. ಇದೀಗ ವಿದ್ಯುತ್ ದರ ಹೆಚ್ಚಳ ಆದೇಶ ಹೊರಡಿಸಲಾಗಿದ್ದು, ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಎಳೆದಂತಾಗಿದೆ.
ಯಾರಿಗೆ ಅನ್ವಯವಾಗಲಿದೆ ದರ ಹೆಚ್ಚಳ?
ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ. ಬಿಜೆಪಿಯವರು ಶ್ರೀಮಂತರ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ದರ ಏರಿಕೆ ಮಾಡುವುದಿಲ್ಲ. ಸ್ವಾಯತ್ತ ಸಂಸ್ಥೆ ದರ ಏರಿಕೆ ಮಾಡುತ್ತದೆ. ಈ ವಿಚಾರದಲ್ಲಿ ಬಿಜೆಪಿ ಆರೋಪ ಸರಿಯಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ ಹೇಳಿದ್ದಾರೆ.
ಪ್ರತಿಪಕ್ಷ ಬಿಜೆಪಿ ಆಕ್ರೋಶ
ವಿದ್ಯುತ್ ದರ ಏರಿಕೆ ವಿಚಾರಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಲೆ ಏರಿಕೆ ಒಂದನ್ನೇ ಅನುಷ್ಠಾನ ಮಾಡುತ್ತಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ಜನರಿಗೆ ಫ್ರೀ ವಿದ್ಯುತ್ ಎಂದು ಹೇಳುತ್ತಾರೆ. ಪಿಡಬ್ಲ್ಯುಡಿ ಇಲಾಖೆ 8 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಹಲವು ಇಲಾಖೆಗಳು ಬಾಕಿ ಬಿಲ್ ಉಳಿಸಿಕೊಂಡಿವೆ. ಸದನದಲ್ಲಿ ಈ ವಿಚಾರಗಳನ್ನ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದರ ಏರಿಕೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ‘ಟಿವಿ9’ಗೆ ಪ್ರತಿಕ್ರಿಯೆ ನಿಡಿದ್ದಾರೆ. ಮುಂದೆ ಪಾರ್ಕ್, ಗಾಳಿ ಸೇವನೆಗೂ ದರ ವಿಧಿಸಬಹುದು. ಸರ್ಕಾರದ ಮೇಲೆ ಹೊರೆ ಜಾಸ್ತಿ ಆಗುತ್ತಿದೆ. ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ದರ ಏರಿಕೆ ಮಾಡಿದ್ದಾರೆ. ಇದರ ವಿರುದ್ಧ ಸದನದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Gold Price Today: ಚಿನ್ನದ ದರದಲ್ಲಿ ಕೊಂಚ ಏರಿಕೆ; ಇಲ್ಲಿದೆ ಇಂದಿನ ರೇಟ್