Employment News: 86 ಲಕ್ಷ ಭಾರತೀಯರಿಗೆ ಉದ್ಯೋಗ ಕೊಟ್ಟ ನೇರ ಮಾರುಕಟ್ಟೆ; 8 ರಾಜ್ಯಗಳಿಂದ 1854 ಕೋಟಿ ರೂ. ವಹಿವಾಟು
Employment News: ಈಶಾನ್ಯ ಭಾರತದ ಎಲ್ಲಾ 8 ಸಹೋದರ ರಾಜ್ಯಗಳು ಮಾರಾಟದಲ್ಲಿ ಜಿಗಿತ ಕಂಡಿವೆ. 2022-23ರಲ್ಲಿ ಹಿಂದಿನ ವರ್ಷಕ್ಕಿಂತ 255 ಕೋಟಿ ರೂ. ಹೆಚ್ಚುವರಿ ವಹಿವಾಟು ಸೇರಿದಂತೆ 1854 ಕೋಟಿ ರೂ. ದಾಟಿದೆ ಎಂಬುದನ್ನು ಭಾರತೀಯ ನೇರ ಮಾರಾಟ ಸಂಘ ಗುವಾಹಟಿಯಲ್ಲಿ ಆಯೋಜಿಸಿದ್ಧ 2ನೇ ಈಶಾನ್ಯ ನೇರ ಮಾರಾಟ ಸಮ್ಮೇಳನದಲ್ಲಿ ದೃಢಪಡಿಸಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವತ್ತ ಹೆಜ್ಜೆಯಿಡುವ ಜತೆ ಜತೆಗೆ ಆಂತರಿಕವಾಗಿ ಸಹ ʼನೇರ ಮಾರುಕಟ್ಟೆʼ ಯಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿದೆ. 86 ಲಕ್ಷ ಭಾರತೀಯರಿಗೆ ಸ್ವಯಂ ಉದ್ಯೋಗ (Employment News) ಕೊಟ್ಟಿದೆ. ಈ ಮೂಲಕ ಈಶಾನ್ಯ ಭಾರತ ನೇರ ಮಾರಾಟದ ಉದ್ಯಮದಲ್ಲಿ ಹೊಸದಿಗಂತಕ್ಕೆ ನಾಂದಿ ಹಾಡಿದೆ. ಈಶಾನ್ಯ ಭಾರತ, ನೇರ ಮಾರಾಟದಲ್ಲಿ ಪ್ರಸ್ತುತ 1854 ಕೋಟಿ ರೂ. ಅಧಿಕ ವಹಿವಾಟು ನಡೆಸುವ ಮೂಲಕ ಒಟ್ಟಾರೆ ಶೇ.16ರಷ್ಟು ಬೆಳವಣಿಗೆ ಸಾಧಿಸಿದೆ. ಕೇಂದ್ರ ಸರ್ಕಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಂಬಲಿತ ಯೋಜನೆಗಳ ಬಲದಿಂದ ಮತ್ತಷ್ಟು ಹೆಚ್ಚಿನ ಬೆಳವಣಿಗೆ ಸಾಧಿಸುವ ಸಾಧ್ಯತೆ ನಿಚ್ಚಳವಾಗಿದೆ.
ಈಶಾನ್ಯ ಭಾರತದ ಎಲ್ಲಾ 8 ಸಹೋದರ ರಾಜ್ಯಗಳು ಮಾರಾಟದಲ್ಲಿ ಜಿಗಿತ ಕಂಡಿವೆ. 2022-23ರಲ್ಲಿ ಹಿಂದಿನ ವರ್ಷಕ್ಕಿಂತ 255 ಕೋಟಿ ರೂ. ಹೆಚ್ಚುವರಿ ವಹಿವಾಟು ಸೇರಿದಂತೆ 1854 ಕೋಟಿ ರೂ. ದಾಟಿದೆ ಎಂಬುದನ್ನು ಭಾರತೀಯ ನೇರ ಮಾರಾಟ ಸಂಘ ಗುವಾಹಟಿಯಲ್ಲಿ ಆಯೋಜಿಸಿದ್ಧ 2ನೇ ಈಶಾನ್ಯ ನೇರ ಮಾರಾಟ ಸಮ್ಮೇಳನದಲ್ಲಿ ದೃಢಪಡಿಸಿದೆ.
ನೇರ ಮಾರಾಟ ಉದ್ಯಮದ (DSI) 21,282 ಕೋಟಿ ರೂ. ರಾಷ್ಟ್ರೀಯ ವಹಿವಾಟಿನಲ್ಲಿ ಶೇ.8.7ರಷ್ಟು ಪಾಲನ್ನು ಈಶಾನ್ಯ ಭಾರತ ಪ್ರದೇಶವೇ ಹೊಂದಿದ್ದು, 4.2 ಲಕ್ಷಕ್ಕೂ ಹೆಚ್ಚು ನೇರ ಮಾರಾಟಗಾರರಿಗೆ ಸ್ವಯಂ-ಆದಾಯದ ಅವಕಾಶ ಕಲ್ಪಿಸಿದೆ ಎಂದು IDSA ಬಹಿರಂಗಪಡಿಸಿದೆ.
ದೇಶದಲ್ಲೇ 9ನೇ ಅತಿದೊಡ್ಡ ಮಾರುಕಟ್ಟೆ ಅಸ್ಸಾಂ
ದೇಶದಲ್ಲಿ 9ನೇ ಅತಿ ದೊಡ್ಡ ನೇರ ಮಾರಾಟ ಮಾರುಕಟ್ಟೆ ಅಸ್ಸಾಂ. ಇದು 1,009 ಕೋಟಿ ರೂ. ನೇರ ವಹಿವಾಟು ನಡೆಸಿ ವರ್ಷಕ್ಕೆ ಶೇ.13 ರಷ್ಟು ಬೆಳವಣಿಗೆ ದಾಖಲಿಸಿದೆ. ಅಲ್ಲದೇ, ಶೇ.4.7ರಷ್ಟು ರಾಷ್ಟ್ರೀಯ ಮಾರುಕಟ್ಟೆ ಪಾಲನ್ನು ಹೊಂದಿದೆ. 2.4 ಲಕ್ಷಕ್ಕೂ ಅಧಿಕ ನೇರ ಮಾರಾಟಗಾರರು ಅಸ್ಸಾಂ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ವರದಿಯನ್ನು IDSA ಬಹಿರಂಗಪಡಿಸಿದೆ.
ಏಳು ರಾಜ್ಯಗಳ ಕೊಡುಗೆ
ಅಸ್ಸಾಂ ಹೊರತುಪಡಿಸಿ ಈಶಾನ್ಯ ಭಾರತದ ಇತರ ಏಳು ರಾಜ್ಯಗಳು ನೇರ ಮಾರುಕಟ್ಟೆ ವಹಿವಾಟಿನಲ್ಲಿ 845 ಕೋಟಿ ರೂ. ಕೊಡುಗೆ ನೀಡುತ್ತವೆ. ನಾಗಾಲ್ಯಾಂಡ್ 227 ಕೋಟಿ ರೂ., ಮಿಜೋರಾಂ 156 ಕೋಟಿ ರೂ., ಅರುಣಾಚಲ ಪ್ರದೇಶ 78 ಕೋಟಿ ರೂ., ತ್ರಿಪುರ 72 ಕೋಟಿ ರೂ., ಮೇಘಾಲಯ 19 ಕೋಟಿ ರೂ. ಮತ್ತು ಸಿಕ್ಕಿಂ 5 ಕೋಟಿ ರೂ. ವಹಿವಾಟು ದಾಖಲಿಸಿವೆ. ನೇರ ಮಾರುಕಟ್ಟೆಯಲ್ಲಿ ಮಿಜೋರಾಂ ಶೇ.31, ಸಿಕ್ಕಿಂ ಶೇ.25, ನಾಗಾಲ್ಯಾಂಡ್ ಶೇ.22.7 ಮತ್ತು ಮಣಿಪುರ ಶೇ.20ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿವೆ.
ಬೊಕ್ಕಸಕ್ಕೆ ವಾರ್ಷಿಕ 300 ಕೋಟಿ ಕೊಡುಗೆ
ಈಶಾನ್ಯ ರಾಜ್ಯಗಳ ಬೊಕ್ಕಸಕ್ಕೆ ಈ ನೇರ ಮಾರಾಟ ಉದ್ಯಮ ವಾರ್ಷಿಕವಾಗಿ ಸುಮಾರು 300 ಕೋಟಿ ರೂ. ಕೊಡುಗೆ ನೀಡುತ್ತಿದೆ. ಇದು ಆಯಾ ಪ್ರದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಸಹ ಬಲಪಡಿಸುತ್ತದೆ ಎಂದು ಐಡಿಎಸ್‌ಎ (IDSA) ವರದಿಯಲ್ಲಿ ಉಲ್ಲೇಖಿಸಿದೆ.
DSI ಗೆ ಈಶಾನ್ಯ ಭಾರತವು ಪ್ರಮುಖ ಮತ್ತು ಆದ್ಯತೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಶೇ.12ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತಿರುವ ಈ ಉದ್ಯಮ ಸುಮಾರು 86 ಲಕ್ಷ ಭಾರತೀಯರಿಗೆ ಸ್ವಯಂ ಉದ್ಯೋಗ ಒದಗಿಸಿ ಕೊಟ್ಟಿದೆ. ಐಡಿಎಸ್‌ಎ ಸದಸ್ಯ ಕಂಪನಿಗಳು ಗ್ರಾಹಕರ ಹಿತಾಸಕ್ತಿ ಮತ್ತು ಈ ಪ್ರದೇಶದ 4.2 ಲಕ್ಷಕ್ಕೂ ಅಧಿಕ ನೇರ ಮಾರಾಟಗಾರರ ಹಿತಾಸಕ್ತಿ ಕಾಪಾಡುವಲ್ಲಿ ಬದ್ಧವಾಗಿವೆ.
10 ರಾಜ್ಯಗಳಲ್ಲಿ ಮೇಲ್ವಿಚಾರಣಾ ಸಮಿತಿ: ಅಸ್ಸಾಂ ಸೇರಿದಂತೆ 10 ರಾಜ್ಯಗಳಲ್ಲಿ ಈವರೆಗೆ ನಿಯಮಾನುಸಾರ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Essay Competition Winners: ʼಸದಾತನʼ ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಫಲಿತಾಂಶ ಪ್ರಕಟ
ಭಾರತೀಯ ನೇರ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಇ-ಕಾಮರ್ಸ್ ವೇದಿಕೆಗಳನ್ನು ತಡೆಯಲು ನಾವು ಸರ್ಕಾರಗಳ ಸಹಾಯವನ್ನು ಕೋರಿದ್ದೇವೆ. ಇದು ನಮಗೆ ಒಂದು ಸವಾಲಾಗಿದೆ ಎಂದು ಐಡಿಎಸ್‌ಎ ಅಧ್ಯಕ್ಷ ವಿವೇಕ್ ಕಟೋಚ್ ಹೇಳಿದ್ದಾರೆ.