Food Adulteration: ಬಾಟಲಿ ನೀರು ಕೂಡ ಕಳಪೆ! ಖೋವಾ ಕೂಡ ಮಾರಕ, ಆಹಾರ ಇಲಾಖೆ ಎಚ್ಚರಿಕೆ
ಈ ಕುರಿತು ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. 296 ಕುಡಿಯುವ ನೀರಿನ ಬಾಟಲಿಗಳ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 95 ಮಾದರಿಗಳು ಅಸುರಕ್ಷಿತ ಎಂದು, 88 ಮಾದರಿಗಳು ಕಳಪೆ ಗುಣಮಟ್ಟದವು ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುವ ಆಹಾರ ಗುಣಮಟ್ಟದ ಕುರಿತು ಆಹಾರ ಇಲಾಖೆ (Karnataka Food Department) ಸಮರ ಸಾರಿದ್ದು, ಇದೀಗ ವಾಟರ್ ಬಾಟಲ್ (Water Bottle) ನೀರು ಕೂಡ ಅಸುರಕ್ಷಿತ ಎಂದು ತಿಳಿಸಿದೆ. ಬಾಟಲ್ ಮೂಲಕ ಪೂರೈಕೆ ಆಗುತ್ತಿರುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ (Mineral Water) ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ. ಜತೆಗೆ, ಸಿಹಿತಿಂಡಿಗಳಲ್ಲಿ ಬಳಸುವ ಖೋವಾ (Cova) ಕೂಡ ಕಲಬೆರಕೆಯುಕ್ತ (Food Adulteration) ಎಂದು ತಿಳಿಸಿದೆ.
ಈ ಕುರಿತು ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಹಲವು ಆಹಾರ ಪದಾರ್ಥಗಳ ಗುಣಮಟ್ಟವನ್ನು ಇಲಾಖೆ ಪರೀಕ್ಷಿಸಿ ಕೆಲವನ್ನು ಈಗಾಗಲೇ ಬ್ಯಾನ್ ಮಾಡಿದೆ. ಇದೀಗ ಐಸ್‌ಕ್ರೀಮ್ ಮತ್ತು ಪನ್ನೀರ್ ಆದ ಬಳಿಕ ತುಪ್ಪ ಹಾಗು ಖೋವಾ ಸರದಿ ಆಗಿದ್ದು, ಸಿಹಿ ತಿಂಡಿಗಳಿಗೆ ಬಳಸುವ ಖೋವಾದಲ್ಲೂ ಕೂಡ ಹಾನಿಕಾರಕ ಅಂಶ ಬಯಲಾಗಿದೆ. ಜನರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇನ್ನು 296 ಕುಡಿಯುವ ನೀರಿನ ಬಾಟಲಿಗಳ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 72 ಸುರಕ್ಷಿತ ಅಂತ ವರದಿ ಬಂದಿದೆ. 95 ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ಹಾಗು 88 ಮಾದರಿಗಳು ಕಳಪೆ ಗುಣಮಟ್ಟ ಅಂತ ವರದಿಯಾಗಿದೆ. ಇನ್ನು ಪನ್ನೀರ್ 231 ಮಾದರಿ ಟೆಕ್ಸ್ಟ್ ಅಲ್ಲಿ 2 ಮಾದರಿ ಅಸುರಕ್ಷಿತ ಎಂದು ಬಂದಿದೆ ಎಂದು ಸುದಿಗೋಷ್ಠಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆಹಾರ ಔಷಧಿ ಗುಣಮಟ್ಟದ ಪರಿಶೀಲನೆ ಬಗ್ಗೆ ನಮ್ಮ ಜವಾಬ್ದಾರಿ ಎಂದು ನಮ್ಮ ಸರ್ಕಾರ ರಚನೆಯಾದ ನಂತರ ಆಹಾರ ಸುರಕ್ಷಿತ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ತುಪ್ಪದ 49 ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು 6 ಮಾದರಿ ವಿಶ್ಲೇಷಣಾ ಕಾರ್ಯ ಪೂರ್ಣವಾಗಿದೆ. ಎಲ್ಲಾ ಮಾದರಿ ಅಸುರಕ್ಷಿತ ಅಂತ ವರದಿ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿವಿಧೆಡೆ ದಾಳಿ ನಡೆಸಿ ವಾಟರ್ ಬಾಟಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿ ಕೂಡ ಕಲಬೆರಕೆ ಪತ್ತೆಯಾಗಿರುವುದಾಗಿ ಆಹಾರ ಇಲಾಖೆಯ ಪರೀಕ್ಷೆಯ ವರದಿ ತಿಳಿಸಿದೆ. ಈಗಾಗಲೇ ಪನೀರ್ ಮತ್ತು ಐಸ್ ಕ್ರೀಮ್ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಆಹಾರ ಇಲಾಖೆ ಇದೀಗ ಮತ್ತೊಂದು ಸುತ್ತಿನ ಕಾರ್ಯಾಚರಣೆ ಮುಂದುವರಿಸಿದೆ. ಬೆಂಗಳೂರಿನ ವಿವಿಧ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪನೀರ್ ಹಾಗೂ ಐಸ್ ಕ್ರೀಮ್ ಗಳಲ್ಲಿ ರಾಸಾಯನಿಕ ಬಳಕೆ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.
ಇಡ್ಲಿ, ಗೋಬಿ ಸೇರಿದಂತೆ ಅನೇಕ ಆಹಾರಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಜತೆಗೆ, ಆಹಾರಗಳ ತಯಾರಿ ಹಾಗೂ ಮಾರಾಟ ಸಂಬಂಧ ಕೆಲವೊಂದು ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಆ ನಂತರ ಕುಡಿಯುವ ನೀರು ಸುರಕ್ಷಿತವೇ ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಆಘಾತಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ಸರ್ಕಾರ ಇನ್ನೇನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: Dinesh Gundu Rao: ಟ್ಯಾಟೂದಿಂದ ಎಚ್‌ಐವಿ, ಚರ್ಮದ ಕ್ಯಾನ್ಸರ್: ದಿನೇಶ್ ಗುಂಡೂರಾವ್ ಎಚ್ಚರಿಕೆ