ಬೆಂಗಳೂರು, ಆ. 16: ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಸಾರ್ವಜನಿಕ ಆಹಾರ ಕೇಂದ್ರಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯು (Karnataka Food Safety Department) ದಿಢೀರ್ ದಾಳಿ ನಡೆಸಿದೆ. ಈ ವೇಳೆ ಗಂಭೀರ ನೈರ್ಮಲ್ಯ ಕೊರತೆ ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಭಾರಿ ಪ್ರಮಾಣದ ಅವಧಿ ಮುಗಿದ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳಿಗೆ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.
ತೀವ್ರ ತಪಾಸಣೆ ಅಭಿಯಾನದ ಭಾಗವಾಗಿ, ಆಹಾರ ಸುರಕ್ಷತಾ ಅಧಿಕಾರಿಗಳು ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ತಪಾಸಣೆ ನಡೆಸಿದರು. ಖಾಸಗಿ ಹೋಟೆಲ್ ಒಂದರಲ್ಲಿ ಅವಧಿ ಮೀರಿದ 9 ಕೆಜಿ ಕೋಳಿ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಜತೆಗೆ ಇತರ ಹೋಟೆಲ್‌ನಿಂದ 68 ಕೆಜಿ ಮಾಂಸ ಪತ್ತೆ ಹಚ್ಚಲಾಯಿತು ಮತ್ತು 4 ಕೆಜಿ ಅಣಬೆ ವಶಪಡಿಸಿಕೊಳ್ಳಲಾಯಿತು.
ಮೈಸೂರು ಮತ್ತು ನಂಜನಗೂಡು ತಾಲೂಕುಗಳಲ್ಲಿ ಪ್ರತ್ಯೇಕ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಮೂರು ರೆಸಾರ್ಟ್‌ಗಳನ್ನು ಪರಿಶೀಲಿಸಿ ನೊಟೀಸ್ ನೀಡಲಾಗಿದೆ. ಪ್ರಯೋಗಾಲಯ ಪರೀಕ್ಷೆಗಾಗಿ ಅಧಿಕಾರಿಗಳು ಐದು ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 2 ಕಾನೂನುಬದ್ಧ ಮಾದರಿಗಳು ಹಾಗೂ 3 ಸಮೀಕ್ಷಾ ಮಾದರಿಗಳು ಸೇರಿವೆ. ಕಾರ್ಯಾಚರಣೆ ವೇಳೆ ಸುಮಾರು 16 ಕೆ.ಜಿ. ಅವಧಿ ಮೀರಿದ ಹಾಗೂ ಹಾಳಾಗುವ ಆಹಾರ ಪದಾರ್ಥಗಳನ್ನು ವಿಲೇವಾರಿ ಮಾಡಲಾಗಿದೆ.
ಗ್ಲೌಸ್ ಧರಿಸದೆ ಬರಿಗೈಯಲ್ಲಿ ಗ್ರಾಹಕರಿಗೆ ರಾಗಿ ಮುದ್ದೆ ಬಡಿಸಿದ ರೆಸ್ಟೋರೆಂಟ್ ಸಿಬ್ಬಂದಿ
ರಾಜ್ಯಾದ್ಯಂತ ಆಹಾರ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಕೈಗೊಂಡಿರುವ ವ್ಯಾಪಕ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ಗಳಲ್ಲಿ ಗ್ರಾಹಕರ ದೂರಿನ ಮೇರೆಗೆ ಅಧಿಕಾರಿಗಳು ಹಠಾತ್ ತಪಾಸಣೆ ನಡೆಸಿದರು. ಆನ್‌ಲೈನ್‌ನಲ್ಲಿ ಖರೀದಿಸಿದ ಚಿಕನ್ ಪೆರಿ ಪೆರಿ ಲೆಗ್ ಹಳಸಿದ ರುಚಿಯನ್ನು ಹೊಂದಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ತನಿಖೆಯ ವೇಳೆ ಆಹಾರ ಸುರಕ್ಷತಾ ತಂಡಗಳು, ಕೆಎಫ್‌ಸಿ ಔಟ್‌ಲೆಟ್‌ನ ಅಡುಗೆಮನೆ, ಶೇಖರಣಾ ಪ್ರದೇಶಗಳು, ಕೋಲ್ಡ್ ರೂಮ್‌ಗಳು, ಫ್ರೀಜರ್‌ಗಳು ಮತ್ತು ಬೇಯಿಸಿದ ಆಹಾರ ದಾಸ್ತಾನುಗಳನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿ ಪ್ರಮುಖ ನಗರ ಕೇಂದ್ರಗಳಿಗೂ ದಾಳಿ ವಿಸ್ತರಿಸಲಾಗಿದ್ದು, ತ್ರೀ-ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‌ಗಳ ತಪಾಸಣೆಯಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳು, ಕೊಳೆತ ತರಕಾರಿಗಳು, ಶಿಲೀಂಧ್ರ ಕಂಡುಬಂದ ಮಾಂಸ ಪತ್ತಹಚ್ಚಲಾಗಿದೆ.
ರಾಜ್ಯಾದ್ಯಂತ ಇತ್ತೀಚೆಗೆ ನಡೆದ ಕಾರ್ಯಾಚರಣೆಗಳಲ್ಲಿ 1,000 ಕೆಜಿಗೂ ಹೆಚ್ಚು ಅಸುರಕ್ಷಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಪಾಸಣೆಗಳು ಖಾಸಗಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನ ಪ್ರಮುಖ ಸರ್ಕಾರಿ ಸಂಕೀರ್ಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮಳಿಗೆಗಳು, ವಿಧಾನಸೌಧ, ವಿಕಾಸಸೌಧ ಮತ್ತು ಆರೋಗ್ಯಸೌಧ ಸೇರಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ನೈರ್ಮಲ್ಯವಿಲ್ಲದ ಆಹಾರ ನಿರ್ವಹಣಾ ಪದ್ಧತಿಗಳು, ಅಸಮರ್ಪಕ ಕೀಟ ನಿಯಂತ್ರಣ ಕ್ರಮಗಳು ಮತ್ತು ಕೆಲವು ಸೌಲಭ್ಯಗಳಲ್ಲಿ ಅವಧಿ ಮೀರಿದ ಪದಾರ್ಥಗಳ ಬಗ್ಗೆ ಅಧಿಕಾರಿಗಳು ವರದಿ ಮಾಡಿದ್ದಾರೆ.
ತಿನ್ನುವ ರೊಟ್ಟಿಗೆ ಉಗುಳಿದ ರೆಸ್ಟೋರೆಂಟ್ ಸಿಬ್ಬಂದಿ
ಕೆಲವು ಇಂದಿರಾ ಕ್ಯಾಂಟೀನ್‌ಗಳು ಸೇರಿ ತ್ವರಿತ-ವಾಣಿಜ್ಯ ಸಂಗ್ರಹಣಾ ಕೇಂದ್ರಗಳು ಮತ್ತು ಸಮುದಾಯ ಆಹಾರ ಸೌಲಭ್ಯಗಳು ಸಹ ಪರಿಶೀಲನೆಗೆ ಒಳಪಟ್ಟಿವೆ. ಕ್ವಿಕ್ ಕಾಮರ್ಸ್‌ನ ದಾಸ್ತಾನು ಕೇಂದ್ರಗಳು ಮತ್ತು ಕೆಲವು ಇಂದಿರಾ ಕ್ಯಾಂಟೀನ್‌ಗಳು ಸೇರಿ ಸಾರ್ವಜನಿಕ ಉಚಿತ ಆಹಾರ ವಿತರಣಾ ಕೇಂದ್ರಗಳೂ ಈಗ ತೀವ್ರ ತಪಾಸಣೆಗೆ ಒಳಪಟ್ಟಿವೆ. ನೈರ್ಮಲ್ಯದ ಕೊರತೆಯ ಹಿನ್ನೆಲೆಯಲ್ಲಿ ಇವುಗಳಲ್ಲಿ ಕೆಲವು ಕೇಂದ್ರಗಳಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಇನ್ನು ಕೆಲವನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಪರವಾನಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದು ತಪಾಸಣಾ ಕಾರ್ಯಾಚರಣೆಯ ಮುಖ್ಯ ಉದ್ದೇಶ. ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ತಂಡಗಳು ಇತ್ತೀಚೆಗೆ 60 ತ್ರಿ-ಸ್ಟಾರ್ ಮತ್ತು ಪಂಚತಾರಾ ಹೋಟೆಲ್‌ಗಳನ್ನು ಪರಿಶೀಲಿಸಿ, ಪ್ರಯೋಗಾಲಯ ಪರೀಕ್ಷೆಗಾಗಿ 77 ಆಹಾರ ಮಾದರಿಗಳನ್ನು ಸಂಗ್ರಹಿಸಿದವು.