ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr K Kasturirangan: ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್‌ ನಿಧನ

Dr K Kasturirangan: 1994 ರಿಂದ 2003ರವರೆಗೆ 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿದ್ದ ಡಾ.ಕೆ. ಕಸ್ತೂರಿ ರಂಗನ್‌ ಅವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಇನ್ನು ಇವರು ಎನ್‌ಇಪಿಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿಯಾಗಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್‌ ನಿಧನ

-

Prabhakara R Prabhakara R Apr 25, 2025 2:19 PM

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷರೂ ಆಗಿದ್ದ ಡಾ.ಕೆ.ಕಸ್ತೂರಿರಂಗನ್ (84) ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು. ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (ಆರ್‌ಆರ್‌ಐ) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಕೇರಳದ ಎರ್ನಾಕುಲಂನಲ್ಲಿ 24 ಅಕ್ಟೋಬರ್, 1940ರಲ್ಲಿ ಜನಿಸಿದರು. 1994 ರಿಂದ 2003ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾದ ಇವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದರು.

ಎನ್‌ಇಪಿಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿ ಎಂದು ಕರೆಯಲ್ಪಡುವ ಕಸ್ತೂರಿರಂಗನ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರ ಏಪ್ರಿಲ್‌ನಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ ಸಂಸ್ಥೆಯ ನಿರ್ದೇಶಕರಾಗಿದ್ದರು.

ಕಸ್ತೂರಿ ರಂಗನ್ ಸಮಿತಿ

ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾಧವ ಗಾಡ್ಗಿಲ್ ಎಂಬುವರ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಅವರು 2011ರ ಆಗಸ್ಟ್ 31ರಂದು ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದರು. ಆದರೆ, ಗಾಡ್ಗಿಲ್ ಸಮಿತಿ ವರದಿಯು ತೀವ್ರ ಟೀಕೆಗೆ ಒಳಗಾಯಿತು. ಹೀಗಾಗಿ ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರ ಏಪ್ರಿಲ್ 15 ರಂದು ಸಲ್ಲಿಸಿತು.