ಬೆಂಗಳೂರು, ಆ. 15: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗುಟ್ಕಾ, ಪಾನ್ ಮಸಾಲ ನಿಷೇಧದ ಆದೇಶ ರದ್ದಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ʼʼನಾನು ಆದೇಶ ಮಾಡಿದ್ದು ಮಾತ್ರ. ಅದನ್ನು ವಾಪಸ್ ಪಡೆದಿಲ್ಲʼʼ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (U.T. Khader) ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ʼʼಪಾನ್ ಮಸಾಲದಲ್ಲಿ ನಿಕೋಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನಾನು ಈ ಆದೇಶವನ್ನು ವಾಪಸ್ ಪಡೆದಿಲ್ಲʼʼ ಎಂದು ತಿಳಿಸಿದ್ದಾರೆ. ತಂಬಾಕು ಅಥವಾ ನಿಕೊಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳನ್ನು ಜನರ ಆರೋಗ್ಯದ ದೃಷ್ಟಿಯಿಂದ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ನಿಷೇಧ ಕುರಿತಾದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ʼʼನಾನು ಆದೇಶ ಮಾಡಿದ್ದು ಮಾತ್ರ. ಅದನ್ನು ವಾಪಸ್ ಪಡೆದಿಲ್ಲ. ಮುಖ್ಯಮಂತ್ರಿ ಈ ಸಂಬಂಧ ಚರ್ಚೆ ನಡೆಸಿದ್ದು, ಅವರಿಗೆ ಸ್ಪಷ್ಟನೆ ನೀಡಿದ್ದೇನೆ. ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಈ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಈಗ ಹೇಳಿದರೆ ಅರ್ಥವಾಗುವುದಿಲ್ಲ. ಈಗ ಸ್ವಲ್ಪ ಬಿಟ್ಟು ಬಿಡಿ. ಒಂದು ತಿಂಗಳ ನಂತರ ಅವರಿಗೆ ನಷ್ಟವಾದಲ್ಲಿ ಚರ್ಚೆ ಮಾಡಬೇಕು. ನಮ್ಮ ಸರ್ಕಾರ ಅಡಿಕೆ ಬೆಳೆಗಾರರಿಗೆ, ವ್ಯಪಾರಿಗಳಿಗೆ ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಪಾನ್ ಮಸಲಾದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲʼʼ ಎಂದು ಒತ್ತಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ, ಮಾರಾಟ ನಿಷೇಧ
ʼʼನಮ್ಮ ಇಲಾಖೆ, ಸರ್ಕಾರ ಅಡಿಕೆ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಅನುಕೂಲ ಹೆಚ್ಚಾಗುತ್ತದೆʼʼ ಎಂದು ಭರವಸೆ ನೀಡಿದ್ದಾರೆ.
ಬೆಲೆ ಹೆಚ್ಚಾಗುವ ಸಾಧ್ಯತೆ
ʼʼಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಸುವುದಿಲ್ಲ. ನೇಪಾಳ, ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಗುಟ್ಕಾ ನಿಕೊಟಿನ್ ನಿಷೇಧದಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ನಾನು ಗುಟ್ಕಾ ನಿಷೇಧ ಮಾಡುವಾಗ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಆಗ ನಾನು ಬಲವಾಗಿ ಅದನ್ನು ಸಮರ್ಥಿಸಿಕೊಂಡಿದ್ದೆ. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ ಎಂದಿದ್ದೆವು. ಮೂರು ತಿಂಗಳು ಆದ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲʼʼ ಎಂದು ಹೇಳಿದ್ದಾರೆ.
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ; ಆದೇಶ ಹಿಂಪಡೆಯಲು ಆರಗ ಜ್ಞಾನೇಂದ್ರ ಆಗ್ರಹ
ನಿಷೇಧದ ಆದೇಶ ಜಾರಿಯಾದ ಕೂಡಲೇ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವೊಂದು ಸಿಎಂ ಬಳಿ ತೆರಳಿ ಆದೇಶ ಹಿಂಪಡೆಯುವಂತೆ ಮನವಿ ಮಾಡಿತ್ತು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನೇಗೌಡ ನೇತೃತ್ವದ ನಿಯೋಗವು ಈ ಮನವಿ ಮಾಡಿತ್ತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.