ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಡಿನ ಆರೋಗ್ಯ ಸಾಧಕರಿಗೆ ವಿಶ್ವವಾಣಿ ಟಿವಿ ಗೌರವ ಸಚಿವ ಯು ಟಿ ಖಾದರ್‌ ಶ್ಲಾಘನೆ

ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ 17 ಮಂದಿ ಸಾಧಕರನ್ನು ಸನ್ಮಾನಿಸಲಾಗಿದೆ.

ವೈದ್ಯರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಲ್ಲ, ಅದೊಂದು ಸೇವೆ; ಯು.ಟಿ ಖಾದರ್‌

ಆರೋಗ್ಯ ಸಚಿವ ಯು.ಟಿ ಖಾದರ್‌ -

Vishakha Bhat Heggar
Vishakha Bhat Heggar Aug 6, 2026 4:41 PM

ಬೆಂಗಳೂರು: ಎಲ್ಲ ವೃತ್ತಿಗಿಂತಲೂ ವೈದ್ಯಕೀಯ ವೃತ್ತಿ ವಿಭಿನ್ನ. ವೈದ್ಯರು ಕೇವಲ ಸಂಬಳವನ್ನು ಮಾತ್ರವಲ್ಲ ಪುಣ್ಯವನ್ನೂ ಸಂಪಾದಿಸುತ್ತಾರೆ. ವೃತ್ತಿಯ ಜೊತೆಯಲ್ಲಿ ಜನರ ಸೇವೆ ಮಾಡುವ ಭಾಗ್ಯ ವೈದ್ಯರದ್ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್‌ ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸಲು ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೋವಿಡ್‌ನಂತಹ ಸಂಕಷ್ಟ ಕಾಲದಿಂದ ಹಿಡಿದು ಪ್ರತಿಯೊಂದು ಸಮಯದಲ್ಲಿಯೂ ವೈದ್ಯರ ಕೊಡುಗೆ ಅಪಾರ. ಇಂಥ ವೈದ್ಯರ ಬದ್ಧತೆ, ಕಾರ್ಯಕ್ಷಮತೆ ಮತ್ತು ಮಾಡಿರುವ ವಿಶೇಷ ಸೇವೆ, ಸಾಧನೆಯನ್ನು ಗುರುತಿಸಿ ವಿಶ್ವವಾಣಿ ಟಿವಿ ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಶ್ಲಾಘನಾರ್ಹ ಎಂದು ಯು ಟಿ ಖಾದರ್‌ ಅವರು ಹೇಳಿದರು.

ವೈದ್ಯನಾಗಲು ಹೋದೆ, ಆರೋಗ್ಯ ಮಂತ್ರಿಯಾದೆ!

ವೈದ್ಯರಾಗುವುದು ಸುಲಭದ ಮಾತಲ್ಲ. ಗರಿಷ್ಠ ತಾಳ್ಮೆ ಬೇಕು. ಹೊಸತನ್ನು ಕಲಿಯುವ ಮನೋಭಾವ, ಕರುಣೆ, ಜಾಣ್ಮೆ ಇವೆಲ್ಲ ಇದ್ದರೆ ಮಾತ್ರ ಈ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ನಾನೂ ಸಹ ವೈದ್ಯನಾಗಲು ಬಯಸಿ ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಂಡಿದ್ದೆ. ಆದರೆ ನನಗೆ ಅದು ಕಬ್ಬಿಣ ಕಡಲೆಯಾಗತೊಡಗಿದ್ದರಿಂದ ಒಂದು ತಿಂಗಳಲಿನಲ್ಲಿಯೇ ಕೋರ್ಸ್‌ ಬದಲಾವಣೆ ಮಾಡಿ ಆರ್ಟ್ಸ್‌ ವಿಭಾಗಕ್ಕೆ ಬಂದೆ. ವೈದ್ಯನಾಗದಿದ್ದರೂ ಆರೋಗ್ಯ ಸಚಿವನಾದೆ ಎಂದು ಯು. ಟಿ ಖಾದರ್‌ ತಮ್ಮ ಜೀವನದ ಹಿನ್ನೋಟ ನೆನಪಿಸಿಕೊಂಡರು.

ತಾಯಿಯಿಂದಲೇ ಆರೋಗ್ಯ ಪಾಠ!

ತಾಯಿಯೇ ಮೊದಲ ಗುರು ಎನ್ನುವಂತೆ ಮಕ್ಕಳಿಗೆ ಮನೆಯಲ್ಲಿಯೇ ಆರೋಗ್ಯದ ಪಾಠ ಶುರು ಮಾಡಬೇಕು. ಇಂದಿನ ಯುವ ಪೀಳಿಗೆ ಬಹಳ ಬೇಗ ಕಾಯಿಲೆಗೆ ತುತ್ತಾಗುತ್ತಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದನ್ನು ತಾಯಂದಿರು ಅಭ್ಯಾಸ ಮಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯತೆ ಆಗಿರಬೇಕು. ನಗರ ಭಾಗದಲ್ಲಿ ಮಾತ್ರ ಅಲ್ಲದೇ ಹಳ್ಳಿಯಲ್ಲೂ ಶರವೇಗದಲ್ಲಿ ಕ್ಯಾನ್ಸರ್‌ನಂತಹ ಮಹಾಮಾರಿ ಹಬ್ಬುತ್ತಿದೆ. ಹೀಗಾಗಿ ಆರೋಗ್ಯವಂತ ವ್ಯಕ್ತಿಯೂ ನಿಯಮಿತ ತಪಾಸಣೆಗೆ ಒಳಗಾಗಿ, ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದು ಆರೋಗ್ಯ ಸಚಿವರು ಕಿವಿ ಮಾತು ಹೇಳಿದರು.

ಹಲವು ರೋಗಗಳ ಚಿಕಿತ್ಸೆಗೆ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖಾದರ್‌ ಹೇಳಿದರು.

ವಿಶ್ವವಾಣಿ ಪ್ರಶಸ್ತಿಗೆ ಖಾದರ್‌ ಮೆಚ್ಚುಗೆ

ಒಂದು ದಿನಪತ್ರಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಿರ್ವಹಿಸುವುದು ಸುಲಭದ ಮಾತಲ್ಲ. ವಿಶ್ವೇಶ್ವರ ಭಟ್‌ ಅವರು ವಿಶ್ವವಾಣಿ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಸಲುವಾಗಿ ವಿಶ್ವವಾಣಿ ಟಿವಿ ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ನೀಡಲಾಗುತ್ತಿದೆ. ವೈದ್ಯಕೀಯ ವಲಯ ಕೇವಲ ಒಂದು ವೃತ್ತಿಯಲ್ಲ, ಇದೊಂದು ಸೇವಾ ಕಾರ್ಯ. ಕಾರ್ಯದೊತ್ತಡ, ಸಮಯವನ್ನು ಲೆಕ್ಕಿಸದೆ ವೈದ್ಯರು ರೋಗಿಗಳ ಜೀವ ಉಳಿಸುತ್ತಾರೆ. ಇಂಥವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದು ಯು ಟಿ ಖಾದರ್‌ ಹೇಳಿದರು.

ಯು ಟಿ ಖಾದರ್‌ ಕಾರ್ಯವೈಖರಿಗೆ ವಿಶ್ವೇಶ್ವರ ಭಟ್‌ ಶ್ಲಾಘನೆ

ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಮಾತನಾಡಿ, ಆರೋಗ್ಯ ಸಚಿವ ಯು ಟಿ ಖಾದರ್‌ ಅವರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಕಾರ್ಯದೊತ್ತಡದ ಮಧ್ಯೆಯೂ ವೈದ್ಯರನ್ನು ಸತ್ಕರಿಸುತ್ತಿರುವ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಖಾದರ್‌ ಅವರ ಕಾರ್ಯಕ್ಷಮತೆ ಹಾಗೂ ಸಮಯ ಪರಿಪಾಲನೆ ಎಲ್ಲ ರಾಜಕಾರಣಿಗಳೂ ಮಾದರಿಯಾಗಿದೆ. 18 ವರ್ಷಗಳಿಂದ ನಾನು ಅವರ ಒಡನಾಟದಲ್ಲಿದ್ದೇನೆ. ಯಾವುದೇ ಧರ್ಮ, ಜಾತಿಯನ್ನು ಲೆಕ್ಕಿಸದೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾವುದೇ ಕೋಮು ಅಥವಾ ಧರ್ಮಕ್ಕೆ ಅಂಟಿಸಲಾಗದು. ಖಾದರ್‌ ಅವರ ಕೆಲ ಆದರ್ಶಗಳು ಅನುಕರಣೀಯ ಎಂದು ಹೇಳಿದರು.

ಯು ಟಿ ಖಾದರ್‌ ಒಬ್ಬ ಭರವಸೆಯ ರಾಜಕಾರಣಿ. ಸಾಮಾನ್ಯ ರಾಜಕಾರಣಿಗಿಂತ ಇವರು ಭಿನ್ನ. ಎಲ್ಲ ಪಕ್ಷದವರ ಜತೆಗೆ ಆತ್ಮೀಯವಾಗಿ ಇರುವ, ಜನಸಾಮಾನ್ಯರ ಜತೆ ಸಾಮಾನ್ಯರಾಗಿ ಬೆರೆಯುವ ಇವರ ಗುಣ ಅಪರೂಪ ಎಂದು ವಿಶ್ವೇಶ್ವರ ಭಟ್‌ ಅವರು ಬಣ್ಣಿಸಿದರು.

Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್‌, ನಟಿ ಮಾನ್ವಿತಾ ಕಾಮತ್‌, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪರ್ವ ಗ್ರೂಪ್‌ ಸಂಸ್ಥಾಪಕ ಎಚ್‌ ಪಿ ನೀಲೇಶ್‌ ಮತ್ತು ಅಡಿಗಾಸ್‌ ಯಾತ್ರಾ ಸಂಸ್ಥಾಪಕ ನಾಗರಾಜ ಅಡಿಗ ಅವರು ಭಾಗವಹಿಸಿದ್ದರು. ಸಪ್ತಕ ಬೆಂಗಳೂರು ಸಂಘಟನೆಯ ಮುಖ್ಯಸ್ಥರಾದ ಜಿ ಎಸ್‌ ಹೆಗಡೆ ಅವರ ಸಹಕಾರದಲ್ಲಿ ಚೈತ್ರಾ ಹಾಕೋಡ್ಲು, ಶ್ರೀಧರ್‌ ಚಿಟ್ಟೇಪಾಲ್‌ ಮತ್ತು ವಿಘ್ನೇಶ್‌ ಭಾಗವತ ಅವರು ಸಂಗೀತ ಕಾರ್ಯಕ್ರಮ ನೀಡಿದರು. ಶ್ರೀಮತಿ ಶುಭಾ ಭಟ್‌ ಅವರು ಭರತನಾಟ್ಯ ಪ್ರದರ್ಶನ ನೀಡಿದರು. ಈ ವಿಶೇಷ ಕಾರ್ಯಕ್ರಮವನ್ನು ಪರ್ವ ಗ್ರೂಪ್‌, ಡಿಯಾಗ್‌ ಫಿನಾನ್ಸ್‌, ಅಡಿಗಾಸ್‌ ಯಾತ್ರಾ ಮತ್ತು ಓಬಿಡಬ್ಲ್ಯೂ ಸಂಸ್ಥೆಗಳು ಪ್ರಾಯೋಜಿಸಿದ್ದವು.